ಮಂಗಳವಾರ, ಮೇ 17, 2011

ಫಲಿತಾಂಶಗಳ ಬೆನ್ನು ಹತ್ತಿ

ಕಳೆದ ವಾರ ಕರ್ನಾಟಕದ ಪಿಯು ಮತ್ತು ಎಸ್ ಎಸ್ ಎಲ್ ಸಿ ಫಲಿತಾಂಶ ಹೊರಬಿದ್ದಿದೆ.
ಇದರ ಫಲವಾಗಿ ಒಂದು, ಪರೀಕ್ಷೆಯಲ್ಲಿ ಅಸಫಲರಾದ ಕೆಲವು ವಿದ್ಯಾರ್ಥಿಗಳು ತಮ್ಮ ಜೀವ ತೊರೆದಿದ್ದಾರೆ. ಇದು ಗಂಭೀರವಾದ ವಿಷಯ. ಎರಡು, ಪತ್ರಿಕೆಗಳು ಅತ್ಯುತ್ತಮ ಫಲಿತಾಂಶ ಪಡೆದ ಕೆಲವು ವಿದ್ಯಾರ್ಥಿಗಳ ಸಾಮಾಜಿಕ ಮತ್ತು ಆರ್ಥಿಕ ಜೀವನವನ್ನು ಸಾರ್ವಜನಿಕರಿಗೆ ತೆರೆದಿಟ್ಟು ಅವರ ನೆರವಿಗೆ ನಿಲ್ಲುವ ಪ್ರಯತ್ನ ಮಾಡಿವೆ. ಇದು ಕನ್ನಡ ದಿನ ಪತ್ರಿಕೆಗಳು ಸಾಮಾಜಿಕ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಕುರುಹು.  ಮೂರು, ಒಟ್ಟು ಫಲಿತಾಂಶದ ಪ್ರಮಾಣವನ್ನು ಅನುಸರಿಸಿ ಈ ಎರಡೂ ಪರೀಕ್ಷಾ ವ್ಯವಸ್ಥೆ ಮತ್ತು ಶಿಕ್ಷಣ ಕ್ರಮಗಳ ಯಶಸ್ಸು - ಅಪಯಶಸ್ಸುಗಳ ತುಲನೆ ಮಾಡಲಾಗಿದೆ. ಈ ಕುರಿತು ಆಡಳಿತ ಮುಂದೆ ಕೈಗೊಳ್ಳಲಿರುವ ಕ್ರಮಗಳ ಬಗ್ಗೆ ಹೇಳಿಕೆ ಹೊರಬಿದ್ದಿದೆ. ಈ ಎಲ್ಲ ಅಂಶಗಳು ನಮ್ಮ ಶಿಕ್ಷಣ ವ್ಯವಸ್ಥೆಯ ಸ್ಥಿತಿಗತಿಗಳನ್ನು ತೆರೆದಿಡುತ್ತವೆ.
ಫಲಿತಾಂಶದ ಕಾರಣಕ್ಕೆ ಜೀವ ತೊರೆದ ವಿದ್ಯಾರ್ಥಿಗಳಲ್ಲಿ ಎಸ್ ಎಸ್ಎಲ್ ಸಿ ಗಿಂತ ಪಿಯು ವಿದ್ಯಾರ್ಥಿಗಳು ಹೆಚ್ಚಿದ್ದಾರೆ. ಎಸ್ ಎಸ್ ಎಲ್ ಸಿ ಫಲಿತಾಂಶದ ಒಟ್ಟು ಪ್ರಮಾಣ ಪಿಯು ಫಲಿತಾಂಶದ ಒಟ್ಟು ಪ್ರಮಾಣದ ಒಂದೂವರೆ ಪಟ್ಟಿಗಿಂತ ಹೆಚ್ಚು ಇದೆ. ಕಳೆದ ತಿಂಗಳಷ್ಟೆ ನಡೆದ ಈ ಪರೀಕ್ಷೆಗಳ ಕಾಲದಲ್ಲಿ ನಕಲು ಮಾಡಲು ಪ್ರಯತ್ನ ಪಟ್ಟ ಪಿಯು ವಿದ್ಯಾರ್ಥಿಗಳು ಡಿಬಾರ್ ಆದ ಸುದ್ದಿ ಪ್ರಕಟವಾದರೆ, ಎಸ್ ಎಸ್ ಎಲ್ ಸಿ ಪರೀಕ್ಷಾ ಸಮಯದಲ್ಲಿ ಬಿಇಒ ಮತ್ತು ಪರಿಕ್ಷಾ ಮೇಲುಸ್ತುವಾರಿ ಅಧಿಕಾರಿಗಳೇ ಮೊದಲಾಗಿ ಶಿಕ್ಷಣ ವ್ಯವಸ್ಥೆಯ ಬೆಂಬಲದಲ್ಲಿ ಸಾಮೂಹಿಕ ನಕಲು  ನಡೆದ ಸಂಗತಿಯನ್ನು ದೃಶ್ಯ ಸುದ್ದಿ ಮಾಧ್ಯಮಗಳು ಬಿತ್ತರಿಸಿವೆ. ಇದು ಈ ಎರಡೂ ಪರೀಕ್ಷೆಗಳು ನಡೆದ ರೀತಿಯನ್ನು ತಿಳಿಸುತ್ತದೆ. ಈ ನಡುವೆ  ಕಳೆದ ಕೆಲವು ವರುಷಗಳಿಂದ ಶೂನ್ಯ ಅಥವಾ ಕಳಪೆ ಫಲಿತಾಂಶ ಪಡೆದ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವ ಹೇಳಿಕೆಗಳು ಪತ್ರಿಕೆಗಳಲ್ಲಿ ಕಾಣಿಸಿಕೊಂಡಿದ್ದು ಈ ವರುಷವೂ ಮುಂದುವರೆದಿದೆ. ಇವೆಲ್ಲವೂ ನಮ್ಮ ಶಿಕ್ಷಣ ಎದುರಿಸುತ್ತಿರುವ ಸಮಸ್ಯೆಗಳನ್ನು ಸೂಚಿಸುತ್ತಿವೆ.
ನಪಾಸಾದ ವಿದ್ಯಾರ್ಥಿಗಳು ಜೀವ ಕಳೆದುಕೊಳ್ಳುತ್ತಿರುವುದು ನಮ್ಮ ಶಿಕ್ಷಣ ಪರೀಕ್ಷಾ ಕೇಂದ್ರಿತವಾಗಿರುವ ಸಂಕೇತವಾಗಿದೆ. ಬ್ರಿಟಿಶರು ಆರಂಭಿಸಿದ ಅಕ್ಷರ ವಿದ್ಯೆಯ ಶಾಲಾ ಶಿಕ್ಷಣ ವ್ಯವಸ್ಥೆ ಮಕ್ಕಳಿಗೆ ಜೀವನ ಮೌಲ್ಯಗಳನ್ನು ಕಲಿಸುತ್ತಿಲ್ಲ, ಜೀವನವನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ನೀಡುತ್ತಿಲ್ಲ, ಜೀವನದಲ್ಲಿ ಅನಿರೀಕ್ಷಿತವಾಗಿ ಎದುರಾಗುವ ಸಮಸ್ಯೆ ಬಗೆಹಿಸಿಕೊಳ್ಳುವ ಬಗೆಯನ್ನು ತಿಳಿಸಿಕೊಡುತ್ತಿಲ್ಲ. (ಇಂಥ ಹಲವು ಇಲ್ಲಗಳ ಪಟ್ಟಿಯನ್ನು ಬಹಳಷ್ಟು ಬೆಳೆಸಬಹುದು.)  ವಿದ್ಯಾರ್ಥಿ ಅಂತಿಮವಾಗಿ ಸಂಪೂರ್ಣ ಅಕ್ಷರ ವಿದ್ಯೆಯನ್ನು ಕಲಿಯದಿದ್ದರೂ ಪರೀಕ್ಷಾ ಹಂತಗಳನ್ನು ಯಶಸ್ವಿಯಾಗಿ ದಾಟಿ, ಅವೆಲ್ಲದರ ಸರ್ಟಿಫಿಕೇಟ್ ಪಡೆದು ಮುನ್ನಡೆಯುವ ಅಡ್ಡ ಹಾದಿಯನ್ನಷ್ಟೆ ಕಲಿಸುತ್ತಿದೆ. ಈ ಮಾತು ನಮ್ಮ ಶಿಕ್ಷಣ ವ್ಯವಸ್ಥೆ ಕುರಿತ ಕೇವಲ ಆಕ್ಷೇಪಣೆಯಲ್ಲ. ಇಂದು ಎಸ್ ಎಸ್ ಎಲ್ ಸಿ ಪಾಸಾದ ಗ್ರಾಮೀಣ ಮಕ್ಕಳ ಕನ್ನಡ ಓದು ಬರೆಹದ ತಿಳುವಳಿಕೆಯ ಮಟ್ಟ ಪ್ರಾಥಮಿಕ ಹಂತದಲ್ಲಿದ್ದು ದಿಗಿಲು ಹುಟ್ಟಿಸುತ್ತದೆ. ಇನ್ನು ಅನ್ಯ ಭಾಷೆಗಳ ಅವರ ತಿಳುವಳಿಕೆ ಕೇಳುವುದೇ ಬೇಡ. ಇದೇಕೆ ಹೀಗಾಗುತ್ತಿದೆ?
ಕಳೆದ ಇಪ್ಪತ್ತು ವರುಷಗಳಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳು ಸರಿಯಾಗಿ ಅಕ್ಷರ ಕಲಿಯದಿದ್ದರೆ ಅವರನ್ನು ನಪಾಸು ಮಾಡುವ ರೂಢಿ ಇತ್ತು. ಕಾಲಕ್ರಮದಲ್ಲಿ ಅಕ್ಷರ ಕಲಿತ ಮತ್ತು ಕಲಿಯದ ಎಲ್ಲ ಮಕ್ಕಳನ್ನೂ ಪಾಸು ನಪಾಸು ಎಂಬ ಮಾಪನದಿಂದ ಹೊರಗಿಟ್ಟು ಮುಂದಿನ ತರಗತಿಗೆ ಕಳಿಸುವ ಕಾರ್ಯಕ್ರಮ ಜಾರಿಗೆ ಬಂದವು. ಕಳೆದ ಹತ್ತು ವರುಷಗಳ ವರೆಗೂ ಏಳನೆಯ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ಇತ್ತು. ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ಕಲಿಯದೆ ಮುಂದಿನ ತರಗತಿಗೆ ಹೋದ ಮಕ್ಕಳು ಅಲ್ಲಿನ ಪಾಠ ಪ್ರವಚನಗಳನ್ನು ಗ್ರಹಿಸುವ ಶಕ್ತಿ ಪಡೆಯುವಲ್ಲಿ ವಿಫಲರಾದರು. ಮಕ್ಕಳ ಕಳಪೆ ಫಲಿತಾಂಶದ ಹೊಣೆಗಾರಿಕೆಯನ್ನು ಆಡಳಿತ ಶಿಕ್ಷಕರ ಮೇಲೆ ಹೇರಿತು. ಅದರ ಪರಿಣಾಮವಾಗಿಯೋ ಏನೋ ಶಿಕ್ಷಕ ವೃಂದ ತಮ್ಮದಲ್ಲದ ತಪ್ಪಿನ ಹೊಣೆಗಾರಿಕೆಯನ್ನು ಹೊರಲು ಸಿದ್ಧರಿಲ್ಲದೆ ಅನ್ಯಮಾರ್ಗ ಅನುಸರಿಸಿತು. ಉತ್ತಮ ಫಲಿತಾಂಶ ಬರುವಂತೆ ಮಾಡಲು ಪರೋಕ್ಷವಾಗಿ ಸಾಮೂಹಿಕ ನಕಲು ವ್ಯವಸ್ಥೆಯನ್ನು ಉತ್ತೇಜಿಸಿತು. ಹಾಗಾಗಿಯೆ ಏಳನೆಯ ತರಗತಿಯ ಪಬ್ಲಿಕ್ ಪರೀಕ್ಷೆ ಶಾಲಾ ಪರೀಕ್ಷಗಿಂತ ಕಳಪೆ ಮಟ್ಟ ತಲುಪಿತು. ಕೊನೆಗೆ ಸರಕಾರ ಮಾಧ್ಯಮಿಕ ಹಂತದಲ್ಲಿದ್ದ ಪಬ್ಲಿಕ್ ಪರೀಕ್ಷೆಯನ್ನು ರದ್ದು ಮಾಡಿತು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಅಕ್ಷರ ಕಲಿಯದೆ ಮುಂದಿನ ತರಗತಿಗಳಿಗೆ ದಬ್ಬಲಾದ ವಿದ್ಯಾರ್ಥಿಗಳು ಪ್ರೌಢಶಾಲೆಯಲ್ಲಿ ಅಕ್ಷರ ಕಲಿಯುವುದು ದುಸ್ತರವಾಗತೊಡಗಿದೆ. ಕಳಪೆ ಫಲಿತಾಂಶ ಪಡೆದ ಶಾಲೆಯ ಶಿಕ್ಷಕರ ಮೇಲೆ ಸರಕಾರ ದೊಣ್ಣೆ ಬೀಸುತ್ತದೆ. ಪ್ರೌಢಶಾಲಾ ಮಟ್ಟದ ಪಠ್ಯಪುಸ್ತಕಗಳ ವಿಷಯ ಗ್ರಹಣ ಮಾಡಲು ಅಗತ್ಯವಾದ ಪೂರ್ವ ಸಿದ್ಧತೆ ಇಲ್ಲದ ವಿದ್ಯಾರ್ಥಿಗಳು ಪಾಸಾಗಲು ನಕಲು ಮಾಡುವುದು ಇಂದು ಅನಿವಾರ್ಯವಾಗಿದೆ. (ಶೋಚನೀಯ ಸಂಗತಿ ಎಂದರೆ ಕೆಲವು ಮಕ್ಕಳು  ನಕಲು ಮಾಡಲು ಅಗತ್ಯವಾದ ಮೂಲಭೂತ ತಿಳುವಳಿಕೆಯನ್ನೂ ಪಡೆಯದವರಿದ್ದಾರೆ.) ಪ್ರೌಢಶಾಲೆಯ ಶಿಕ್ಷಕರು ಕಲಿಕೆ ಇಲ್ಲದ ಮಕ್ಕಳಿಗೆ ಪ್ರಾಥಮಿಕ ಅಥವಾ ಮಾಧ್ಯಮಿಕ ಮಟ್ಟಕ್ಕಿಳಿದು ಶಿಕ್ಷಣ ನೀಡಲು ಸಾಧ್ಯವಿಲ್ಲದಿರುವುದು ಮತ್ತು ಅಂಥ ಮಕ್ಕಳಿಗೆ ಪ್ರೌಢ ಪಠ್ಯ ವಿಷಯಗಳನ್ನು ಅರ್ಥೈಸಲು ಆಗದೆ ಅದರ ದುಷ್ಪರಿಣಾಮವನ್ನು ಅನುಭವಿಸುವ ಹಂತ ತಲುಪಿರುವುದು. ಇಂದು ಸಮುದಾಯ ಪರವಾದ ಮೌಲ್ಯಗಳಿಗಿಂತ ವ್ಯಕ್ತಿ ಪರವಾದ ಮೌಲ್ಯಗಳೇ ನಮ್ಮನ್ನು ಆಳುತ್ತಿರುವ ಸಂದರ್ಭದಲ್ಲಿ ಪ್ರೌಢ ಶಾಲಾ ಶಿಕ್ಷಕರು ಅನಗತ್ಯವಾಗಿ ತಮ್ಮ ಜೀವನದ ಸಲ್ಲದ ಸಂಕಷ್ಟಗಳಿಗೆ ಸಿಲುಕಿಕೊಳ್ಳಲು ಸಾಧ್ಯವಿಲ್ಲ. ಅವರು ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡುವ ರಕ್ಷಣಾತ್ಮಕ ನಿಲುವಿನಿಂದ ತಮ್ಮ ಜೀವನವೂ ಸರಕಾರಕ್ಕೆ ಅಗತ್ಯವಾದ ಫಲಿತಾಂಶವೂ ಹೊಮ್ಮಲು ಸಹಕರಿಸುತ್ತಿದ್ದಾರೆ. ಇದರ ಫಲವಾಗಿ ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂತದ ಒಟ್ಟು ಪ್ರಮಾಣ ಶೇಕಡ 75ರ ಬಳಿ ಇದೆ. ವಿದ್ಯಾರ್ಥಿಯ ಉತ್ತಮ ವಿಷಯ ಗ್ರಹಣ ಶಕ್ತಿ, ನೆನಪಿನ ಶಕ್ತಿ, ಮತ್ತು ಸಮರ್ಥ ಅಭಿವ್ಯಕ್ತಿ ಶಕ್ತಿ ಇಲ್ಲದ ನಕಲು ಶಕ್ತಿ ಮಾತ್ರದಿಂದ ಹೊರಬಿದ್ದ ಈ ಉತ್ತಮ ಫಲಿತಾಂಶ ಉತ್ತಮ ಶಿಕ್ಷಣ ಮಟ್ಟದ ಗುರುತೆಂದು ಹೆಮ್ಮ ಪಡಲು ಸಾಧ್ಯವೆ? ಎಸ್ ಎಸ್ ಎಲ್ ಸಿ ಮಟ್ಟದಲ್ಲಿ ನಕಲು ವ್ಯಾಪಕವಾಗಿ ಬೆಳೆದು ಎಳನೆಯ ತರಗತಿಯ ಹಾಗೆ ಈ ಹಂತದಲ್ಲಿರುವ ಈಗಿನ ಪಬ್ಲಿಕ್ ಪರೀಕ್ಷೆ ರದ್ದಾದರೆ ಅಚ್ಚರಿ ಪಡಬೇಕಾದ ಅಗತ್ಯವಿಲ್ಲ.
ನಕಲು ಶಕ್ತಿ ಆಧರಿಸಿ ಕಾಲೇಜು ಮೆಟ್ಟಲು ಹತ್ತಿದ ವಿದ್ಯಾರ್ಥಿಗಳನ್ನು ಪಿಯು ಪರೀಕ್ಷೆಯಲ್ಲಿ ಜರಡಿ ಹಿಡಿಯಲಾಗುತ್ತಿದೆ. ಅದರಿಂದಾಗಿ ಪಿಯು ಫಲಿತಾಂಶ ಶೇಕಡ 40ರ ಬಾಜೂನಲ್ಲಿದೆ. ತಮ್ಮ ಹುಸಿ ಬಲವನ್ನೆ ನಿಜ ಬಲವೆಂದು ನಂಬಿರುವ ವಿದ್ಯಾರ್ಥಿಗಳು ವಾಸ್ತವ ಸತ್ಯದ ಕಟುವನ್ನು ಅರಗಿಸಿಕೊಳ್ಳಲಾಗದ ಸ್ಥಿತಿ ತಲುಪಿದ್ದಾರೆ. ತಮ್ಮನ್ನು ತಾವು ಶೈಕ್ಷಣಿಕವಾಗಿ ಸುಧಾರಿಸಿಕೊಳ್ಳಲಾಗದ ಸ್ಥಿತಿ ತಲುಪಿದ ಘೋರ ಸತ್ಯ ವಿದ್ಯಾರ್ಥಿಗಳಿಗೆ ಗೋಚರವಾದ ಪರಿಣಾಮವಾಗಿ ಪಿಯು ಹಂತದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚು ಘಟಿಸಿವೆ.
ಮುಂದೆ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆ ರದ್ದಾದರೆ ಪಿಯು ಪರೀಕ್ಷೆ ಸಡಿಲಗೊಳ್ಳುತ್ತದೆ. ಪಿಯು ಪರೀಕ್ಷೆ ರದ್ದಾದರೆ ಸ್ನಾತಕ ಪರೀಕ್ಷೆಗಳ ಮೇಲೆ ಪರಿಣಾಮ ಬೀರುತ್ತದೆ. ತಳಹದಿ ಭದ್ರವಿಲ್ಲದ ದೇಶದ ಶಿಕ್ಷಣ ವ್ಯವಸ್ಥೆಯಿಂದ ದೇಶದ ಅಭಿವೃದ್ಧಿಯ ಮೇಲೆ ಪರಿಣಾಮ ಇದ್ದೇ ಇರುತ್ತದೆ. ಈಗಾಗಲೇ ಹುಸಿ ಸಾಕ್ಷರರು ಉದ್ಯೋಗಸ್ಥರಾಗಿ ಶಿಕ್ಷಣ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ.   ಅಕ್ಷರಸ್ಥ ಭಾರತದಲ್ಲಿ ಹುಸಿ ಸಾಕ್ಷರರ ಸಂಖ್ಯೆ ಮುಂದಿನ ದಿನಗಳಲ್ಲಿ ಯಾವ ಬಗೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆಯೋ ನೋಡಬೇಕು.  
ಈ ಸಲದ ಎಸ್ ಎಸ್ ಎಲ್ ಸಿ ಮತ್ತು ಪಿಯು ಫಲಿತಾಂಶಗಳು ನಮ್ಮ ಶಿಕ್ಷಣ ವ್ಯವಸ್ಥೆ ದಿಕ್ಕು ತಪ್ಪಿ ಜನತೆಗೆ ಅಗತ್ಯವಾದ ವಿದ್ಯೆಯನ್ನು ನೀಡುವಲ್ಲಿ ವಿಫಲವಾಗಿರುವ ಸೂಚಿಯಾಗಿದೆ. ಭಾರತದ ಬಹುಸಮುದಾಯಗಳ ನಮ್ಮ ಸಮಾಜದ ಸ್ವರೂಪಕ್ಕೆ ಅನುಗುಣವಾಗಿ ಶಿಕ್ಷಣದ ಅಗತ್ಯಗಳನ್ನು ಗುರುತಿಸಿಕೊಳ್ಳುವ ಅಗತ್ಯವಿದೆ. ಅದಕ್ಕೆ ತಕ್ಕಂತೆ  ಶಿಕ್ಷಣ ವ್ಯವಸ್ಥೆಯನ್ನು ಮರುರೂಪಿಸಿಕೊಳ್ಳಬೇಕಾದ ಜರೂರು ಇದೆ. ಇಲ್ಲದಿದ್ದಲ್ಲಿ ನಮ್ಮ ಸಮಸ್ಯೆಗಳನ್ನು ನಾವು ಬಿಡಿಸಿಕೊಳ್ಳಲಾಗದ ವಿಷಾದದ ಹಂತ ತಲುಪುವುದು ಸುಳ್ಳಲ್ಲ.
     
   

ಭಾನುವಾರ, ಮೇ 8, 2011

ಅನುಭವದ ಮಾತು

ಭಕ್ತರ ಸಮೂಹದಲ್ಲಿ ದೈವ ಮಾನವನೆಂದು ನಂಬಲಾಗಿದ್ದ ಸತ್ಯಸಾಯಿ ಬಾಬಾ ಅವರು ಕಳೆದ ವಾರ ಮರಣ ಹೊಂದಿ ನರಮಾನವರ ಜಗತ್ತನ್ನು ತೊರೆದ ನಂತರ ಕನ್ನಡದ ಕವಿಗಳೂ ಅನುಭಾವಿಗಳೆಂದೂ ಪ್ರಸಿದ್ಧರಾದ ಡಾ. ಎಚ್ .ಎಸ್.ಶಿವಪ್ರಕಾಶ್ ಅವರು ಪ್ರಜಾವಾಣಿಯಲ್ಲಿ 'ಮಹಾತ್ಮರೂ ಮನುಷ್ಯರೂ ಮರ್ತ್ಯರೂ' ಎಂಬ ಹೆಸರಿನ ಲೇಖನವನ್ನು ಅನುಸಂಧಾನ ಅಂಕಣದಲ್ಲಿ ಬರೆದರು. ನಾನು ಬೆಂಗಳೂರಿನಲ್ಲಿದ್ದ 1991ರಿಂದ1996ರ ಕೆಲಕಾಲ ಅವರ ನಿಕಟವರ್ತಿಯಾಗಿದ್ದೆ.  ಆ ಕಾಲಾವಧಿಯಲ್ಲಿ  ಅವರು ನನಗೆ ಹಲವು ಬಗೆಯಲ್ಲಿ ನೆರವು ನೀಡಿದ್ದಾರೆ.ನನ್ನ ಹಲವು ಸಮಸ್ಯೆಯಿಂದ ಹೊರಬರಲು ನನಗವರು ನೈತಿಕ ಸ್ಥೈರ್ಯ ನೀಡಿದ್ದಾರೆ. ಅನುಭಾವದ ಹಾದಿಯಲ್ಲಿ ಕ್ರಮಿಸಬೇಕಾದ ಕ್ರಮವನ್ನು ತಿಳಿಸಿ ಹೇಳಿದ್ದಾರೆ. ಅವರು ದೆಹಲಿಗೆ ಹೋದ ನಂತರ ಅವರೊಂದಿಗೆ ನಿಕಟ ಸಂಪರ್ಕ ಸಾಧ್ಯವಾಗಿಲ್ಲವಾದರೂ ಅವರ ಬಗ್ಗೆ ಗೌರವವಿದೆ. ಅವರ ಈ ಲೇಖನ ಓದಿದ ಮೇಲೆ ಅವರು ಅನುಸರಿಸಿರುವ ಬರೆಹದ ಭಿನ್ನ ಶೈಲಿ, ವಿಧಾನದ ಬಗ್ಗೆ ಬೆರಗಾಗಿದ್ದೇನೆ. ಹಲವು ಸಲ ಅವರ ಈ ಬರೆಹ ನನ್ನ ಮನಸ್ಸಿನಲ್ಲಿ ಸುಸುಳಿ ನೆನಪಿನಲ್ಲಿ ಮೇಲೆದ್ದು ಬಂದಿದೆ. ಒಂದು ವಾರದ ನಂತರ ಇಂದು ಬೆಳಗಿನ ಜಾವ ನನ್ನ ಮನಸ್ಸಿಗೆ ಬಂದ ಸಾಲುಗಳನ್ನು ಸ್ವಲ್ಪ ಹೊತ್ತಿನ ಮುಂಚೆ ಹೀಗೆ ಬರೆದಿಟ್ಟಿದ್ದೇನೆ. ಇದನ್ನು ಸುಮ್ಮನೆ ನಿಮ್ಮ ಮುಂದೆ ಇರಿಸುತ್ತಿದ್ದೇನೆ.
#





ಸಾವಿನ ಹೆದರಿಕೆಯ ನೆರಳಲ್ಲಿ
ಅರಳಿದ ಪರಿಮಳದ ಹೂವೆಂದು
ನಂಬಿಸಿದ ಸಂತರು ಮಹಾತ್ಮರು

ನಂಬಿಕೆಯ ನೀರಲ್ಲಿ ಮುಳುಗಿ
ಆ ನೀರೆ ಹಾಲೆಂದು ನಂಬಿ ಕುಡಿದ
ನರ ಕುನ್ನಿಗಳು ಮನುಷ್ಯರು

ಕ್ರಿಮಿಕೀಟಾದಿ ಸಸ್ಯ ಲೋಕ
ತನ್ನಂತೆ ಜನಮನ ಪ್ರೀತಿಸಿ
ಬೆದರದೆ ಸತ್ತವರು ಮರ್ತ್ಯರು

ಶಿವಪ್ರಕಾಶರ ಆನುಭವದ ವಾಣಿ
ಜಗದ ಕಣ್ಣಲ್ಲಿ ಅನುಭಾವಿ
ತನಗೆ ತಾನೇ ಶಿವಯೋಗಿ