ಜಾಗತಿಕ ಸಾಹಿತ್ಯದಲ್ಲಿ ಧಾರ್ಮಿಕ ಪಠ್ಯಗಳು ಅತಿ ಹೆಚ್ಚು ಅನುವಾದವಾಗಿವೆ. ನಂತರದಲ್ಲಿ ಶೇಕ್ಸ್ ಪಿಯರ್ ನ ನಾಟಕಗಳು ನಿಲ್ಲುತ್ತವೆ. ಆ ನಂತರದ ಸಾಲಿನಲ್ಲಿ ಧಾರ್ಮಿಕ ಪ್ರತಿವಾದಿಯಾದ ಉಮರ್ ಖಯ್ಯಾಮ್ ನ ರುಬಾಯತ್ ಗಳೂ ಅನುವಾದವಾಗಿರುವುದು ಅದರ ಜನಪ್ರಿಯತೆಯ ಸೂಚಕವಾಗಿದೆ. ಸಮುದಾಯವೊಂದರ ಒಳಗಿನ ವ್ಯಕ್ತಿಯಾಗಿ ತನ್ನ ಸಮುದಾಯದ ನಂಬಿಕೆ ಆಚಾರ ವಿಚಾರಗಳ ಇತಿಮಿತಿಯನ್ನು ಅರಿತು ಅದನ್ನು ಮುರಿಯಲು ಅಥವಾ ಅದರಾಚೆಗೆ ವಿಸ್ತರಿಸಲು ಉಮರ್ ಖಯ್ಯಾಮ್ ಪ್ರಯತ್ನಪಟ್ಟಿದ್ದಾನೆ. ಹಾಗಾಗಿ ಆತ ತನ್ನ ಜೀವಿತ ಕಾಲದಲ್ಲಿ ಕವಿಯಾಗಿ ಮಾನ್ಯತೆ ಪಡೆಯದಿದ್ದರೂ ಆತನ ನಿಲುವು ಮಾನವ ಜೀವಿತದ ಚಿಂತನೆಯ ಭಾಗವಾಗಲು ಸಾಧ್ಯವಾಗಿದೆ. ಬೌದ್ಧಿಕ ಜಗತ್ತಿನ ಇತಿಹಾಸದಲ್ಲಿ ಇಂಥವರು ತಮ್ಮ ಜೀವಿತದ ಕಾಲಾವಧಿಯಲ್ಲಿ ಜ್ಞಾನದ ಸೀಮೋಲ್ಲಂಘನೆ ಮಾಡಲು ಹೆಣಗಿದ ಸಾಹಸಿಗರಾಗಿ ಪ್ರತ್ಯೇಕವಾಗಿ ನಿಲ್ಲುತ್ತಾರೆ.
ಧಾರ್ಮಿಕ ಪ್ರತಿವಾದಿಗಳಂತೆ ಕಾಣುವ ಸಲ್ಮಾನ್ ರಶ್ದೀ ಅವರ ಸೆಟಾನಿಕ್ ವರ್ಸಸ್ ಅಗಲೀ ತಸ್ಲಿಮಾ ನಸ್ರೀನ್ ಅವರ ಲಜ್ಜಾ ಆಗಲೀ ಹೆಚ್ಚು ಜನರ ಗಮನ ಸೆಳೆದದ್ದು ಇವು ಹೊಂದಿರುವ ಧಾರ್ಮಿಕ ನೆಲೆಯನ್ನು ಕಡೆಗಣಿಸಬೇಕಾದ ಆಶಯ ಕುರಿತು ಪುರೋಹಿತ ವರ್ಗದಿಂದ ಉಂಟಾದ ಪ್ರತಿಭಟನೆಯಿಂದಾಗಿ. ಕನ್ನಡದಲ್ಲಿ ಸಂಸ್ಕಾರ, ಘಟಶ್ರಾದ್ಧ ಮೊದಲಾದ ಕಥನ ಕ್ರಮದ ಮೂಲಕ ಈ ಸಾಲಿನಲ್ಲಿ ಅನಂತಮೂರ್ತಿ ಗುರುತಿಸಿಕೊಂಡರೂ ಅವರು ಧಾರ್ಮಿಕ ಪ್ರತಿವಾದಿಯೇನಲ್ಲ.
ಭಾರತದ ಸಂತ ಪರಂಪರೆಯನ್ನು ಇದೇ ಸಾಲಿನಲ್ಲಿಟ್ಟು ನೋಡಬಹುದು. ಆದರೆ ಅವರ ಕೊಡುಗೆ ಬೌದ್ಧಿಕ ಸಾಹಸಕ್ಕಿಂತ ಧರ್ಮದ ಅಧಿಕಾರಿಶಾಹಿ ನೆಲೆಯನ್ನು ಕಡೆಗಣಿಸಿ ಕಂಡಿತು. ಭಕ್ತಿ ಕಲ್ಪನೆಯ ಮೂಲಕ ಸಾಮರಸ್ಯದ ಕಡೆಗೆ ಗಮನ ಕೇಂದ್ರೀಕರಿಸಿತು. ಅಲ್ಲದೆ ಅದರ ಕ್ರಾಂತಿಕಾರಿ ಸಾಮಾಜಿಕ ಆಶಯಗಳು ಧಾರ್ಮಿಕ ಅಧೀನತೆಯಲ್ಲಿಯೇ ಮೂಡಿತು. ಆದ್ದರಿಂದ ಜ್ಞಾನದ ನಿರಂಕುಶತ್ವ ಸಾಧಿಸಲಾಗದೆ ಧರ್ಮ ರಾಜಕಾರಣದ ಭಾಗವಾಯಿತು. ಸಾಧಿತವಾದ ಅಷ್ಟಿಷ್ಟು ಬೌದ್ಧಿಕ ಸಾಧನೆಯೂ ಇದರಿಂದ ಮಸುಕಾಯಿತು.
ಇಲ್ಲಿ ನಾನು ಹೇಳುತ್ತಿರುವುದು ಸಮುದಾಯವೊಂದಕ್ಕೆ ಸೇರಿದ ಲೇಖಕ ತನ್ನ ಸಮುದಾಯದ ಆಲೋಚನಾ ಮತ್ತು ಭಾವನಾ ಸ್ಥರಗಳನ್ನು ಪರಿಷ್ಕರಿಸುವ ಕಾರ್ಯವೆ ಸಮುದಾಯ ಮಟ್ಟದಲ್ಲಿ ಸವಾಲಿನದೂ ವ್ಯಕ್ತಿ ಮಟ್ಟದಲ್ಲಿ ತನ್ನನ್ನೇ ತಾನು ತಿದ್ದಿಕೊಂಡು ಹೊಸ ಮನುಷ್ಯನಾಗುವ ಬಗೆಯದೂ ಆಗಿರುತ್ತದೆ ಎಂದು.
ಬಹು ಸಮುದಾಯಗಳ ಸಮಾಜವಿರುವ ಭಾರತದಲ್ಲಿ ಸಮುದಾಯದೊಳಗಿನ ಈ ಬೆಳವಣಿಗೆ ಆ ಸಮುದಾಯದ ಆಲೋಚನೆಯ ಮಂತು ಕಡೆದು ಮತ್ತಷ್ಟು ವಿವೇಕವನ್ನು ಹೆಚ್ಚಿಸುತ್ತದೆ.
ಡಿವಿಜಿ ಉಮರನನ್ನು ಕನ್ನಡಕ್ಕೆ ತಂದಾಗ ಜೀವನವನ್ನು ಧಾರ್ಮಿಕ ನಂಬಿಕೆಯ ಚೌಕಟ್ಟಿನಾಚೆ ನಿಂತು ಶುದ್ಧ ಸಾಮಾಜಿಕ ನೆಲೆಯ ವಾಸ್ತವಿಕ ದೃಷ್ಟಿಕೋನದಿಂದ ನೋಡಲು ಉದ್ದೀಪಿಸಿತು. ಅಲ್ಲದೆ ಪಾರಂಪರಿಕ ಮೌಲ್ಯಗಳ ಪ್ರತಿಪಾದಕರಂತೆ ಕಾಣುವ ಸ್ವತಹ ಡಿವಿಜಿಯವರನ್ನೆ ಮಂಕುತಿಮ್ಮನ ಕಗ್ಗದೆಡೆಗೆ ಸೆಳೆಯಿತು. 'ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ' ಎಂದು ಉದ್ಗಾರ ತೆಗೆಯುವಂತೆ ಮಾಡಿ ಪಾರಂಪರಿಕ ಜೀವನ ಮೌಲ್ಯ ಕಲ್ಪನೆಯೊಂದಿಗೆ ನಿರೀಶ್ವರವಾದಿ ತಾತ್ವಿಕತೆಯನ್ನು ಬೆರೆಸುವಂತೆ ಮಾಡಿತು. ಅಂದರೆ ಹೊರ ಸಮುದಾಯವೊಂದರ ಆಲೋಚನಾ ಕ್ರಮದೊಂದಿಗೆ ನಡೆಸಿದ ಮುಖಾಮುಖಿಯಿಂದಾಗಿ ತನ್ನ ಸಮುದಾಯದ ಚಿಂತನಾಕ್ರಮದಲ್ಲಿ ಬೆಳವಣಿಗೆ ತರಲು ಸಾಧ್ಯವಾಯಿತು. ಭಿನ್ನ ಸಮುದಾಯಗಳ ನಡುವಿನ ಅಸ್ತಿತ್ವದ ಪ್ರಶ್ನೆಯಾಗಲೀ ರಾಜಕಾರಣದ ಪ್ರಶ್ನೆಯಾಗಲೀ ಅಡ್ಡಗೋಡೆಯಾಗಿ ಮುಂದುಮಾಡಿಕೊಳ್ಳದೆ ಒಟ್ಟಾರೆಯಾಗಿ ಮಾನವನ ಮನಸ್ಸು ಅರಳಿಸುವ ಕ್ರಮದಲ್ಲಿ ಸಾಗಿದ ಕಾರ್ಯವಿಧಾನವಿದು.
ಆದರೆ ಒಂದು ಸಮುದಾಯದ ಅರೆಕೊರೆಗಳನ್ನು ಕುರಿತು ಮತ್ತೊಂದು ಸಮುದಾಯದ ಲೇಖಕ ದನಿಯೆತ್ತಿದರೆ ಅಲ್ಲಿ ಅನಗತ್ಯ ಸ್ವಸಮರ್ಥನೆ ಮತ್ತು ಪರರ ಖಂಡನೆ ವಸ್ತುವೂ ವಿಧಾನವೂ ಆಶಯವೂ ಆಗಿ ಕಾರ್ಯನಿರ್ವಹಿಸುತ್ತದೆ. ಕ್ರಮೇಣ ಅದು ಭೌತಿಕ ಸಂಘರ್ಷಕ್ಕೂ ಮೂಲವಾಗಬಹುದು. ಇಂಥದ್ದೊಂದು ಎಳೆಯೂ ಪ್ರಸ್ತುತ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ 'ಪ್ರತಿ ಸಂಸ್ಕೃತಿ' ಚಿಂತನಾ ಕ್ರಮದಲ್ಲಿ ಅಪ್ರಧಾನವಾಗಿ ಕಾರ್ಯಪ್ರವೃತ್ತವಾಗಿದೆ.
ಈಗ ಆಂಧ್ರದ ಮುಸ್ಲಿಂ ಮಹಿಳೆ ಷಾಜಹಾನ್ ತೆಲುಗಿನಲ್ಲಿ ಪ್ರಕಟಿಸಿದ ಕವನ ಸಂಕಲನದ ಕನ್ನಡ ಅನುವಾದವನ್ನು ಗೆಳೆಯ ಸ.ರಘುನಾಥ ಹೊರತಂದಿದ್ದಾರೆ. 'ಉಮರನ ಒಸಗೆ'ಯಂತೆ ಇಲ್ಲಿಯೂ ಲೇಖಕ ಮತ್ತು ಅನುವಾದಕ ಭಿನ್ನ ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ಈ ಇಬ್ಬರ ವಸ್ತು ಆಶಯ ವಿಧಾನಗಳು ಹೇಗೆ ಕೆಲಸ ಮಾಡಿವೆ ಎಂಬುದು ಕುತೂಹಲಕಾರಿ.
ವಿಶ್ವದ ಪ್ರಮುಖ ಧರ್ಮಗಳಲ್ಲಿ ಇಸ್ಲಾಂ ಧರ್ಮ ಮಾತ್ರ ಹೆಣ್ಣಿನ ಮೇಲೆ ಹೆಚ್ಚು ನಿರ್ಬಂಧಗಳನ್ನು ಹೇರದೆ ಅವಳಿಗೆ ಸ್ವಾತಂತ್ರ್ಯವನ್ನು ನೀಡಿ ಉದಾರವಾಗಿ ನಡೆದುಕೊಂಡಿದೆ ಎಂದು ಹೇಳಲಾಗುತ್ತದೆ. ಇಂಥ ಅಭಿಪ್ರಾಯಗಳ ವಿರುದ್ಧ ಸೆಡ್ಡುಹೊಡೆದು ನಿಂತಿರುವ ಷಾಜಹಾನ್ ಹೇಳುತ್ತಾಳೆ:
ಹುಟ್ಟಿದಂದಿನಿಂದ ಚಾಂದನಿಯ ರುಚಿಯರಿಯದೆ
ಮಳೆಯ ರುಚಿ ತಿಳಿಯದೆ
ವಸಂತದ ರುಚಿಯನ್ನೂ ನೋಡದೆ ಬೆಳೆದು
ನಿರ್ಬಂಧಗಳ ಸರಹದ್ದುಗಳಲ್ಲಿ ಗುಲಾಮಳಾಗಿ ಬೆಳೆದ ಹೆಣ್ಣು (ಪರದೆ ಸರಿಸಿ ನೋಡು)
ಮುಸ್ಲಿಂ ಮಹಿಳೆ ಹಲವು ನಿರ್ಬಂಧಗಳ ನಡುವೆ ಬಂಧಿಯಾಗಿದ್ದಾಳೆ. ಆಕೆ ಸ್ವಂತಿಕೆಯೆ ಇಲ್ಲದ ಗುಲಾಮಳು. ಮಾನವ ಪ್ರಕೃತಿಯ ಮಗುವಾಗಿದ್ದರೂ ಆಕೆ ನಿಸರ್ಗದೊಂದಿಗೆ ಸಂಪರ್ಕ ಪಡೆದಿಲ್ಲ. ಹಾಗಾಗಿ ಅನ್ಯಳಾಗಿ ಅನಾಥಳಾಗಿ ಬೆಳೆದಿದ್ದಾಳೆ. ಪ್ರಕೃತಿಯಲ್ಲಿನ ಬದಲಾವಣೆಗಳು ಮಾನವನಲ್ಲಿ ಉಂಟುಮಾಡುವ ಅಚ್ಚರಿ, ವಿಸ್ಮಯ, ಬೆರಗುಗಳ ಸಂಸರ್ಗದಿಂದ ದೂರವಾಗಿ ನಲಿವು ಕಾಣದ ಸೆರೆಯಲ್ಲಿ ಉಳಿದಿದ್ದಾಳೆ.
ಜೀವನ ಸಂಗಾತಿಯಾಗಿ ಅರ್ಧಾಂಗಿಯಾದ ಗಂಡಸು ಆಕೆಯ ಮೋಹದಲ್ಲಿ ತನ್ನನ್ನೆ ಮರೆತುಬಿಟ್ಟಿದ್ದಾನೆ, ತನ್ನ ಹಿತಾಸಕ್ತಿಯಲ್ಲಿ ಮುಳುಗಿಹೋಗಿದ್ದಾನೆ. ಅವನಿಗೆ ಹೆಣ್ಣಿನ ಮನದಾಳದಲ್ಲಿ ಮಡುಗಟ್ಟಿರುವ ದುಃಖದ ಸೆಲೆಯನ್ನು ಅರಿಯುವ ನಿವಾರಿಸುವ ಕಣ್ಣಿಲ್ಲ. ಇಂಥ ಇಂಗಿತವನ್ನು ಹೇಳುವ ಈ ಕ್ರಮದಲ್ಲಿ ಹೊಸತನವಿದೆ.
ಕಾಡಿಗೆ ಕಣ್ಣಿನಮಲಿನಲ್ಲಿ ತಣಿವ ಒಬ್ಬನೂ
ಕಾಡಿಗೆಯ ಮರೆಯ ಕಣ್ಣೀರ ಸ್ಪರ್ಶಿಸುವುದಿಲ್ಲ (ಅನಾರ್ಕಲಿ)
ಸಹಜೀವಿಯಾದ ಗಂಡಸು ಅಕೆಯನ್ನು ಕಡೆಗಣಿಸಿ ನೋಡುತ್ತಿರುವ ಸಮಸ್ಯೆ ಇಂದಿನ ಹೊಸ ತಲೆಮಾರಿಗೆ ಸೀಮಿತವಲ್ಲ. ಅದು ತನಗಿಂತ ಹಿಂದಿನ ಮತ್ತು ಹಿರಿಯ ತಲೆಮಾರಿನಿಂದ ಬಳುವಳಿ ಬಂದದ್ದು ಎಂಬುದನ್ನು ಈ ಕೆಳಗಿನ ಸಾಲುಗಳು ಹೇಳುತ್ತಿವೆ.
ದಾರಿದ್ರ್ಯದ ಮಕಮಲ್ಲಿನಲ್ಲಿ ಸುತ್ತಿ ನಿನ್ನ ನವಾಬ
ಇನಾಮು ಕೊಡುತ್ತಿರುವನಲ್ಲಮ್ಮ
*
ಅಬ್ಬಜಾನನ ಬಡೀ ಬೀವಿಯಾಗಿ
ಬದುಕಿನ ಅಲ್ಬಮ್ಮಿನಲ್ಲಿಟ್ಟ ನಿನ್ನ
ಭಗ್ನ ಚಿತ್ರವನ್ನು ನೋಡುತ್ತ
*
ಅವನ ಚಟಗಳ ಆಸಿಡ್ಡಿನಲ್ಲಿ ಅದ್ದಿ ಎತ್ತಿದ
ಅಸ್ಥಿ ಪಂಜರದಂತೆ
*
ಕಣ್ಣ ಜಲಾಶಯಗಳಲ್ಲಿ ತೇಲಾಡುವ
ಮೂಳೆಗಳ ನಿನ್ನ ರೂಪ (ಭಾವಚಿತ್ರ)
ಯಾರಿಗೆ ಆಗಲೀ ತಾಯಿ ಎಂಬುದು ಅಭಿಮಾನದ ವಸ್ತು. ಅಂಥ ತಾಯಿ ಜೀವ ಕೂಡ ತಂದೆ/ಗಂಡಸಿನ ಹಲವು ಹೆಂಗಸರಲ್ಲಿ ಒಬ್ಬಳಾಗಿದ್ದಾಳೆ. ಅವನ ಮೂಗಿನ ನೇರದಲ್ಲಿ ಜೀವನ ರೂಪಿಸಿಕೊಂಡು ಜೀವಚ್ಛವದಂತಾಗಿದ್ದಾಳೆ. ಹಿಂದಿನ ಈ ಜೀವನ ಕ್ರಮದ ನಿದರ್ಶನಗಳು ಮುಂದಿನ ಜನತೆಯ ಜೀವನ ಕ್ರಮವನ್ನು ನಿರ್ಧರಿಸುತ್ತದೆ. ಅಂದರೆ ಹೊಸ ಪೀಳಿಗೆಯ ಯುವತಿಯರು ಪುರುಷ ಅಧೀನತೆ ಮೀರಬಾರದೆಂದು ಇದುವರೆಗೂ ನಡೆದು ಬಂದ ಸಂಪ್ರದಾಯ ಸೂಚಿಸುತ್ತಿದೆ. ಇದರಿಂದ ಆಧುನಿಕ ಮಹಿಳೆಯರ ಉಸಿರು ಕಟ್ಟುತ್ತಿದೆ.
ಅನಾಚೂನವಾಗಿ ನಡೆಸಿಕೊಂಡು ಬಂದಿರುವ ಹೆಣ್ಣಿನ ಕತ್ತು ಹಿಸುಕಿದಂಥ ಈ ಸಂಪ್ರದಾಯ, ಪದ್ಧತಿಗಳನ್ನು ಹೀಗೆಯೇ ಮುನ್ನಡೆಸಬೇಕೆಂಬ ಸಮುದಾಯದ ಇಂಗಿತವೆ ಮಾನವ ಜೀವಿಯ ಆಜನ್ಮವಾದ ಹಕ್ಕು ಮತ್ತು ಸ್ವಾತಂತ್ರ್ಯದ ಬಗ್ಗೆ ಚಿಂತಿಸುವಂತೆ ಮಾಡುತ್ತದೆ. ಸಂಪ್ರದಾಯದ ಇತಿಮಿತಿಗಳು ಅರಿವಿಗೆ ಬರುತ್ತದೆ.
ನನ್ನನ್ನು ಕೊಂದು ಮೂಕಿಯಂತೆ ಉಳಿಸಬೇಕೆಂಬ
ಎಲ್ಲರ ಹುನ್ನಾರಿಗೆ ಬಿದ್ದು ಬಿದ್ದು ನಗುತ್ತಿರುವೆ (ದಡ್ಡಿ)
ಮನುಷ್ಯ ನಿರ್ಮಿತ ಕಟ್ಟುಪಾಡುಗಳು ಮನುಷ್ಯನನ್ನೆ ಕಟ್ಟಿಹಾಕಬಲ್ಲವು; ಜೀವ ವಿರೊಧಿಯಾಗಿ ಪರಿಣಮಿಸಬಲ್ಲವು. ಈ ಎಲ್ಲ ಕಟ್ಟುಪಾಡುಗಳು ಮಾನವ ಜಾರಿಗೆ ತಂದ ಕಲ್ಪನಾ ಮೌಲ್ಯಗಳಷ್ಟೆ ಎಂಬ ಅರಿವು ಕವಯತ್ರಿಯದು. ಹಾಗಾಗಿಯೆ ಸಂಪ್ರದಾಯದ ಬಿಗಿ ನಿಲುವು ನಗೆಪಾಟಲಿನದಾಗಿ ಕಂಡಿದೆ.
ಮತ ಧರ್ಮಗಳ ಸೀಮೆ ಸೀಳಿ ಹೊರ ಬಂದಿರುವ ಕವಯತ್ರಿಯ ಶುದ್ಧ ಮಾನವ ಪ್ರೀತಿಗೆ ಸಮುದಾಯದಲ್ಲಿ ಬೆಂಬಲದ ಬಲವಿಲ್ಲ. ಈ ಅನುಭವವನ್ನು ಸಿರಿತನ-ಬಡತನ, ದರ್ಪ-ಅಸಹಾಯಕತೆ, ಅಟ್ಟಹಾಸ-ಪೆಚ್ಚುಮುಖಗಳ ವೈರುಧ್ಯದ ಚಿತ್ರದ ಮೂಲಕ ಕಟ್ಟಿಕೊಡಲಾಗಿದೆ.
ಅವರ ಉರ್ದು ಜರಿ ಸಮೂಹಗಳ ಫಳಫಳ ಮಿಂಚುಗಳ
ಮುಂದೆ
ನನ್ನ ಧ್ವನಿ ಕಾಟನ್ ಸೀರೆಯಾಗಿ ಪೆಚ್ಚುಪೆಚ್ಚಾಗಿ(ಲದ್ದಾಫ್ನಿ)
ಜೀವ ಪ್ರೀತಿ ಪರವಾದ ದನಿ ಅಸಹಾಯವಾಗಿದ್ದರೂ ಧೃತಿಗೆಟ್ಟ ಸ್ಥಿತಿಯಲ್ಲಿಲ್ಲ. ಹಾಗಾಗಿ ಪುರೋಹಿತಶಾಹಿ ಮತ್ತು ಪುರುಷಶಾಹಿ ಕುರಿತ ಭಿನ್ನಾಭಿಪ್ರಾಯ ಅಸಹನೆಯಾಗಿ ಗಟ್ಟಿಗೊಳ್ಳುತ್ತದೆ.
ಪೊದೆ ಗಡ್ಡಗಳು, ಬಿಳಿ ಟೋಪಿಗಳು
ಪೈಜಾಮ ಕುರ್ತಾಗಳು, ಐದು ಬಾರಿ ನಮಾಜು
ಅಯ್ಯಾ, ನೀವೆಲ್ಲ ಪವಿತ್ರ ಮೂರ್ತಿಗಳು
ಪವಿತ್ರ ಅಚಾರಗಳನ್ನು ಕಾಪಾಡುವ ದರ್ವಾಜಗಳು
*
ಇಷ್ಟವಿರದಿದ್ದರು ನಿನ್ನೊಡಗೂಡಿ ಸಂಸಾರ ಹೂಡಿದ್ದಕ್ಕೆ
ಕಾಲು ಹಿಡಿದ ಈ ಕೈಗಳೇ
ಹೌದು ಈ ಕೈಗಳೇ
ಮುಷ್ಟಿ ಬಿಗಿಯುತ್ತಿವೆ! (ಖಬರ್ದಾರ್)
ಸಂಪ್ರದಾಯದ ಕಟ್ಟುಗಳು ಬಿಗಿಗೊಂಡಂತೆಲ್ಲ ಅಸಹನೆ ಪ್ರತಿರೋಧವಾಗಿ ಮಾರ್ಪಾಟುಹೊಂದುತ್ತದೆ. ಅದು ಪುರೋಹಿತಶಾಹಿ ಮತ್ತು ಪುರುಷಶಾಹಿಯ ಕೈಯಲ್ಲಿ ಅನುಭವಿಸಿದ ಕ್ರೂರ ದೌರ್ಜನ್ಯದಲ್ಲಿ ನಲುಗಿದ ನೋವಿನ ನೆನಪುಗಳನ್ನು ದಟ್ಟಗೊಳಿಸುತ್ತದೆ.
ನೋವುಗಟ್ಟಿದ ಬಾಸುಂಡೆಗಳು
ಬಿಕ್ಕುವ ಕೊರಳು.......ಖಿಜಾ
ಅಮ್ಮೀ ಪುಟ್ಟು(ತಿಂಡಿ) ನಕ್ಕೋ ಅಮ್ಮೀ
ಅಮ್ಮೀ ಪುಟ್ಟು ನಕ್ಕೋ ಅಮ್ಮೀ (ಪುಟ್ಟು)
ಮುಗ್ಧ ಮಗುವಿನ ಸಹಜವಾದ ಸಣ್ಣ ಪುಟ್ಟ ಬಾಯಿರುಚಿಯ ಆಸೆಗಳನ್ನು ಪೂರೈಸಿ ಈಡೆರಿಸಲಾಗದಂಥ, ತನ್ನ ಆರ್ಥಿಕ ಅಸಹಾಯಕತೆಯನ್ನು ಮರೆಮಾಚಿರುವ ಅಧಿಕಾರಿಶಾಹಿ ತನ್ನ ದಮನಕಾರಿ ನೀತಿಯಿಂದ ಅದನ್ನು ಮಣಿಸುತ್ತದೆ, ದಾನವನಾಗಿ ಮರುಹುಟ್ಟು ಪಡೆಯುತ್ತದೆ.
ದಮನಿತ ಸ್ಥಿತಿಯಲ್ಲಿರುವ ಮಾನವ ಜೀವಿಗಳು ಘನತೆಯನ್ನು ಕಳೆದುಕೊಂಡು ಬಿಡುತ್ತಾರೆ. ಅವರು ಮತ್ತೊಬ್ಬರ ಹಂಗಿನಲ್ಲಿ, ಆ ಮತ್ತೊಬ್ಬರ ಗುರಿ, ಉದ್ದೇಶಗಳನ್ನು ಸಾಧಿಸುತ್ತ ಅವರಿಗೆ ಬಲಿಯಾಗುವಂಥ ಸ್ವಾತಂತ್ರ್ಯಹೀನ ಪಶು ಪಕ್ಷಿಗಳಂತೆ ಸ್ವಂತಿಕೆಯ ಆಲೋಚನಾ ಬಲವಿಲ್ಲದ ಕುರುಡರಾಗುತ್ತಾರೆ.
ರೊಪ್ಪದಲ್ಲಿ ದನಗಳು
ಫಾರಮ್ಮಿನಲ್ಲಿ ಕೋಳಿ
ಕತ್ತಲ ದೊಡ್ಡಿಗಳಲ್ಲಿ ನಾವು !
*
ಎತ್ತಿನ ಮೂತಿಯ ಕುಕ್ಕೆಯಂತೆ
ಗಾಳಿ ತೆಗೆದುಕೊಳ್ಳುವ ಸ್ವೇಚ್ಛೆಯೂ ಇರದ ಪರದೆಗಳು (ಖೌಸೆಖಿಜಾ)
ಮುಸ್ಲಿಂ ಮಹಿಳೆಯರು ಅಂಥಸ್ಥಿತಿಯಲ್ಲಿರುವರೆಂದು ಮರುಕ ಪಡಲಾಗಿದೆ. ಪರದೆಗಳು, ಬುರ್ಖಾಗಳನ್ನು ಯಾವುದೇ ಜೀವಿ ತನ್ನ ಹುಟ್ಟಿನಿಂದ ತಾನು ಜೀವಿಸಲು ತನ್ನ ಆಜನ್ಮ ಹಕ್ಕಾಗಿ ಪಡೆದಿರುವ ಸಹಜ ಸ್ವಾತಂತ್ರ್ಯವನ್ನು ಕಸಿದಿರುವ ಸೂಚಕವಾಗಿ ಕಾಣಿಸಲಾಗಿದೆ. ಇಂಥ ಮುಸ್ಲಿಂ ಮಹಿಳೆಯರ ಬದುಕು ನಿರ್ದಿಷ್ಟ ಉದ್ದೇಶ, ಗುರಿ ಇಲ್ಲದೆ ನಿರುಪಯೋಗವಾಗಿದೆ.
ಮಣ್ಣ ಗೋಡೆಗಳಮೇಲೆ ಜೊಂಡು ಮೊಳೆತಿದೆ
ನಮ್ಮ ಬದುಕುಗಳಂತೆ
*
ನಮ್ಮ ದಾದಿಮಾ ರಂಜನಿನ ದಿನ
ಹೊಸ ಸೀರೆ ಉಟ್ಟಂತೆ ಕಂಗೊಳಿಸುತ್ತಿತ್ತು ಮನೆ. (ಚಿಹ್ನೆ)
ಹಳೆ ಬಟ್ಟೆ ಹರಿದು ಹೊಸ ಬಟ್ಟೆ ಧರಿಸುವುದು ದಿನನಿತ್ಯದ ಸಾಮಾನ್ಯ ವಿಷಯವಾಗಿದ್ದರೂ ಅದು ಇಂಥವರ ಬಾಳಿನಲ್ಲಿ ವಿಶೇಷ ಅರ್ಥ ಪಡೆದು ದಾರುಣತೆಯ ರೂಪ ಧರಿಸುತ್ತದೆ. ಹಾಗಾಗಿ ಕವಯತ್ರಿ ಪುರೋಹಿತಶಾಹಿ ಮತ್ತು ಪುರುಷಶಾಹಿಯೊಂದಿಗಿನ ಮುಸ್ಲಿಂ ಮಹಿಳೆಯರ ಸಂಬಂಧವನ್ನು ಪ್ರಿಯೆ-ಪ್ರಿಯತಮ ಸಂಬಂಧದಲ್ಲಿರಿಸಿ ಪ್ರಿಯೆಯಾಗಿ ಹೀಗೆ ಕೇಳಿದ್ದಾಳೆ.
ನೀನಿತ್ತ ಬರದ ಕಹಿ ಅನುಭವಗಳನ್ನು
ಯಾವ ಅಂಚೆಯಲ್ಲಿ ಪ್ಯಾಕು ಮಾಡಿ ಕಳುಹಿಸಲಿ
*
ಪ್ರತಿ ಬಾರಿಯೂ ಬಾನ ಸೀಳಿಕೊಂಡು ಹಾರುವ
ನೀನೊಮ್ಮೆ ಹಿಂದಿರುಗಿ ನೋಡು
ಕಿಟಕಿಯಾಚೆ ಶೂನ್ಯ ತುಂಬಿಕೊಂಡ ಇನ್ನೊಂದು ಬಾನು
ದಾರಿದ್ರ್ಯ (ಇನ್ನೊಂದು ಆಕಾಶ)
ಭಾರತೀಯ ಮುಸ್ಲಿಂ ಮಹಿಳೆಯರು ಅರಬ್ ಮುಸ್ಲಿಮ್ ಪುರುಷರಿಗೆ ಭೋಗದ ಮತ್ತು ಮೋಜಿನ ವಸ್ತು ಆಗಿರುವುದು ಕೂಡ ಇದೇ ವ್ಯಾಪ್ತಿಯಲ್ಲಿ ಸೇರಿದೆ. ಪುರುಷರ ಸ್ವಾತಂತ್ರ್ಯ ಮತ್ತು ಮಹಿಳೆಯರ ಸ್ವಾತಂತ್ರ್ಯಹೀನತೆಯನ್ನು ಅರಬ್ ಪುರುಷರ ಸಿರಿವಂತಿಕೆ ಮತ್ತು ಭಾರತೀಯ ಮುಸ್ಲಿಂ ಮಹಿಳೆಯರ ದಾರಿದ್ರ್ಯದೊಂದಿಗೆ ಸಮೀಕರಿಸಲಾಗಿದೆ. ಮಾನವನ ಬದುಕಿನಲ್ಲಿನ ಸ್ತ್ರೀಪುರುಷರ ನಡುವಿನ ತಾರತಮ್ಯ ಅಪರಿಮಿತವಾಗಿ ಬೆಳೆದಿದೆಯೆಂದೂ ಕಾಣಿಸಿದೆ.
ರಾಷ್ಟ್ರದಲ್ಲಿಯೊ ಅಂತಾರಾಷ್ಟ್ರದಲ್ಲೊ
ಏನೇ ನಡೆದರೂ ಹಠಾತ್ತಾಗಿ ನನ್ನ ಪರಿಸರದಲ್ಲಿ
ನಾನು ಅಪರಿಚಿತನಾಗುತ್ತೇನೆ (ಅಪರಿವಿತ)
ಇದರಿಂದ ಭಾರತೀಯ ಮುಸ್ಲಿಂ ಮಹಿಳೆ ಅಸ್ತಿತ್ವವಿಲ್ಲದವಳಾಗಿ ಉಳಿದಿದ್ದಾಳೆಂಬ ಆಕ್ರೋಶ ಮನೆಮಾಡಿದೆ. ಏಕೆಂದರೆ ಹೆಣ್ಣಿನ ಅಸ್ತಿತ್ವಹೀನತೆ ಅವಳ ಮೇಲಿನ ಆಕ್ರಮಣ, ಕ್ರೌರ್ಯ, ದೌಜರ್ನ್ಯಗಳನ್ನು ಸುಲಭಗೊಳಿಸಿದೆ.
ಬಟ್ಟೆ ಹರಿದು ಚಿಂದಿ ಮಾಡಿದಂತೆ
ನಮ್ಮ ದೇಹವನ್ನು ಹರಿದು ಹಾಕುತ್ತಿದ್ದಾರೆ (ಒಂಟಿ ಕಫನ್)
ಹೀಗಾಗಿ ಇವರು ದುಃಖದ ತಳ ಮುಟ್ಟಿದ ವ್ಯಕ್ತಿಗಳಾಗಿ ತಮ್ಮ ಶೋಷಕರ ಸಂಪೂರ್ಣ ಪರಿಚಯದ ಹಿನ್ನೆಲೆಯಲ್ಲಿ ತಾತ್ವಿಕವಾಗಿ ಮಾತನಾಡುತ್ತಾರೆ ಕೂಡ. ಕವಯತ್ರಿ ಅಂಥ ಮಾತುಗಳಿಗೆ ಬಾಯಿಯಾಗಿದ್ದಾಳೆ ಇಲ್ಲಿ.
ಹೆಣ್ಣಿಗೆ ಗಂಡಿನ ಬೆತ್ತಲೆ ಎಷ್ಟು ಹಳೆಯದೊ
ಅರಾಜಕತೆ, ಅಮಾನುಷತೆ, ಕ್ರೂರತ್ವವೂ ಅಷ್ಟೇ ಹಳತು.
*
ಹೆಣ್ಣಲ್ಲದೆ ಗಂಡನ್ನು ಕ್ಷಮಿಸುವರು ಯಾರು?
ಎಂದೆಂದಿಗು ಜಗತ್ತು
ನನ್ನ ಮೊಲೆ ಕುಡಿವ ಹಸುಗೂಸು (ಭ್ರಷ್ಟ ಲೋಕ)
ಪುರೋಹಿತಶಾಹಿ ಮತ್ತು ಪುರುಷಶಾಹಿಗಳು ಅಧಿಕಾರಶಾಹಿ ನಾಣ್ಯದ ಎರಡು ಮುಖಗಳಾಗಿ ಇಲ್ಲಿ ಪರಿಣಮಿಸಿವೆ. ಅದರ ಎಲ್ಲ ಬಲಗಳನ್ನು ಜೀವನಾನುಭವದಲ್ಲಿ ಮಿತಿಗೆ ಒಳಪಡಿಸಿದೆ ಮತ್ತು ಅದನ್ನು ನಕಾರಾತ್ಮಕ ಚೌಕಟ್ಟಿಗೆ ಅಳವಡಿಸಲಾಗಿದೆ. ಅಧಿಕಾರಕ್ಕಿಂತ ಅನುಭವ ಮಾನವನನ್ನು ಮಾಗಿಸುವ ಕ್ರಮವನ್ನೂ ಹೇಳಿದೆ. ಅಲ್ಲದೆ ಹೆಣ್ಣಿನ ಕ್ಷಮಾಗುಣ ಮತ್ತು ಪೋಷಕ ಶಕ್ತಿಯ ಮುಂದೆ ಗಂಡಿನ ಎಲ್ಲ ಅಧಿಕಾರ ಶಕ್ತಿಗಳು ಕಳೆಗುಂದುವ ಸಾರ್ವಕಾಲಿಕ ಸಂಗತಿಯನ್ನು ಮನಗಾಣಿಸಿ ಅಭಿವ್ಯಕ್ತಿಸಿದೆ. ಈ ಮೂಲಕ ಇಂದಿನ ಸ್ತ್ರೀವಾದಿ ಮನೋ ಧರ್ಮದ ಪ್ರತಿಪಾದನೆಯನ್ನು ಮಾಡಿದೆ. ಅಲ್ಲದೆ ಪ್ರಕೃತಿಯಲ್ಲಿ ಜೀವ ಜನಾಂಗಗಳು ಸತತವಾಗಿ ಮುಂದುವರೆಯುವಲ್ಲಿ ಸ್ತ್ರೀ ವಹಿಸುವ ಹಿರಿಯ ಪಾತ್ರದ ಮಹತ್ವದ ಗುಣ ಲಕ್ಷಣಗಳನ್ನು ಎತ್ತಿ ಹೇಳಿದೆ. ಅದರೂ ಸ್ತ್ರೀ ಪುರುಷ ಸಂಬಂಧ ಮತ್ತು ಅಸ್ತಿತ್ವಗಳ ಸ್ವರೂಪದ ಬಗ್ಗೆ ಆರೋಗ್ಯಕರವಾಗಿ ಕಂಡಿದೆ ಮತ್ತು ಕಾಣಿಸಿದೆ.
ಸಕ್ಕರೆ ಉಂಡೆಯಲ್ಲಿನ
ಕಡಲೆಪಪ್ಪಿನಂತೆ
ಅವರೂ ನಾವು
*
ಅಲಾಯಿಬಲಾಯಿ ತೆಗೆದುಕೊಳ್ಳುವ
ದಗರ್ಾಗಳು
ಆಕಾಶದಲ್ಲೆಲ್ಲ ಕಾಣಿಸುತ್ತವೆ (ದರ್ಗಾ ದಾರಿಗೆ ಮೈಲಿಗೆ ಇಲ್ಲ)
ಸ್ತ್ರೀ ಪುರುಷ ಸಂಬಂಧ ಪರಸ್ಪರ ಅವಲಂಬಿತ ಮತ್ತು ಸ್ನೇಹಮಯ ಎಂಬ ತನ್ನ ಧೋರಣೆಯಿಂದ ಪುರುಷ ನಿರ್ಮಿತವಾದ ಅಧಿಕಾರ ಸ್ಥಾಪಿಸುವ ಎಲ್ಲ ಸಾಮಾಜಿಕ ಜೀವನ ಮೌಲ್ಯಗಳನ್ನು ಗಾಳಿಗೆ ತೂರಿದೆ ಮತ್ತು ಅವನ್ನು ಮರುಕಟ್ಟಿಕೊಟ್ಟಿದೆ.
ಈ ತೆಲುಗು ಕವಿತೆಗಳು ಆಂಧ್ರ ಸಾಹಿತ್ಯ ಸಂದರ್ಭಕ್ಕೆ ಅನುಗುಣವಾಗಿ ಮೈ ತಳೆದಿದ್ದರೂ ಕನ್ನಡದ ಸಂದರ್ಭದಲ್ಲೂ ತಾಜಾತನದಿಂದ ಕೂಡಿವೆ. ಹೀಗಿದ್ದರೂ ತೆಲುಗು ಮತ್ತು ಕನ್ನಡ ಸಾಹಿತ್ಯ ಸಂದರ್ಭಗಳು ಒಂದೇ ಅಲ್ಲ. ವಿಶೇಷವಾಗಿ ತೆಲುಗಿನಲ್ಲಿ ಶ್ರೀಶ್ರೀ ಮತ್ತು ಕನ್ನಡದಲ್ಲಿ ಅಡಿಗರು ತಮ್ಮ ಕೃತಿಗಳ ಮೂಲಕ ರೂಪಿಸಿದ ಮನಸ್ಥಿತಿ ಒಂದೇ ಎಂದು ಹೇಳಲುಬರುವುದಿಲ್ಲ. ಆದರೂ ಇವೆರಡೂ ಭಾಷೆಗಳಲ್ಲಿ ಅಲ್ಲದೆ ಇಡೀ ಭಾರತೀಯ ಸಾಹಿತ್ಯದ ಆಧುನಿಕ ಸಂದರ್ಭದಲ್ಲಿ ನವೋದಯ, ನವ್ಯ, ಪ್ರಗತಿಶೀಲ, ದಲಿತ ಬಂಡಾಯ ಹಾಗೂ ಸ್ತ್ರೀ ವಾದದಂಥ ಆಧುನಿಕ ವಿಚಾರಧಾರೆಗಳು ಏಕ ಪ್ರಕಾರವಾಗಿ ಪ್ರಭಾವಿತವಾಗಿರುವುದು ಬೇರೆ.
ಷಾಜಹಾನರು ತಮ್ಮ ಅನುಭವ ವಿಚಾರವನ್ನು ಕವಿತೆಯನ್ನಾಗಿಸುವ ಕ್ರಮದಲ್ಲಿ ತಮ್ಮ ಕಾವ್ಯದ ಆಶಯ ಮತ್ತು ವಿಧಾನವನ್ನು ಒಂದಾಗಿ ಹೊಸೆದಿದ್ದಾರೆ. ಹಾಗಾಗಿ ಅವರು ನೀಡಿರುವ ಚಿತ್ರಗಳು ಅನುಭವ ಮೂಲದಿಂದ ಬಂದಿರುವುದು ಓದುಗರ ಗಮನಕ್ಕೆ ಥಟ್ಟನೆ ಬರುತ್ತದೆ. ಕಾವ್ಯವನ್ನು ಸಾಮಾನ್ಯವಾಗಿ 'ನುಡಿಗೆಟ್ಟ ನುಡಿ' ಎಂದು ಹೇಳಲಾಗುತ್ತದೆ. ಇಲ್ಲಿ 'ಜೀವನಗೆಟ್ಟ ಜೀವನ'ವೆ ಮೈತಳೆದಿರುವುದರಿಂದ 'ಜೀವನಗೆಟ್ಟ ಜೀವನ' 'ನುಡಿಗೆಟ್ಟ ನುಡಿ'ಯಾಗಿ ಮೈಪಡೆದಿದೆ. ಹಾಗಾಗಿಯೆ ಓದುಗನಿಗೆ ತಾಜಾತನ ದಟ್ಟವಾಗಿ ಅನುಭವಕ್ಕೆ ಬರುತ್ತದೆ. ಇಲ್ಲಿನ ನುಡಿಚಿತ್ರಗಳು ಅಲಂಕಾರವಾಗಿ ಮೂಡದೆ ಜೀವಾನಾನುಭವದ ಭಾಗವಾಗಿ ಜೀವ ತಳೆದಿವೆ, ತಮ್ಮ ಸಾಚಾತನದಿಂದ ಅನುಭವದ ಆಳಕ್ಕೆ ಓದುಗನನ್ನು ಕೈ ಚಾಚಿ ಸೆಳೆಯುತ್ತವೆ.
ಒಂದು ಭಾಷಾ ಸಂಸ್ಕೃತಿಗೆ 'ಅಪರಿಚಿತ'ವಾದ ಕೃತಿಯನ್ನು 'ಸುಪರಿಚಿತ'ವನ್ನಾಗಿ ಮಾಡುವುದೆ ಅನುವಾದ ಎಂದು ಹೇಳಲಾಗಿದೆ. ಹಾಗಾಗಿಯೆ ಅನುವಾದಗಳು ರೂಪಾಂತರ, ಭಾಷಾಂತರ, ಪ್ರೇರಣೆ, ಮರುಬರವಣಿಗೆ ಮೊದಲಾದ ವಿವಿಧ ರೂಪಗಳಲ್ಲಿ ಕಾಣಿಸಿಕೊಂಡಿವೆ. ಅದೇನೆ ಇರಲಿ, ಉಭಯಭಾಷಾ ಕವಿಗಳೆಂದು ಒಪ್ಪಿತರಾಗಿರುವ ಮಿತ್ರರಾದ ಸ. ರಘುನಾಥ ಅವರ ಶ್ರಮ ಈ ನಿಟ್ಟಿನಿಂದ ಯಶಸ್ಸು ಕಂಡಿದೆ. ಆದರೂ ಕಾವ್ಯ ಸೌಷ್ಟವದಲ್ಲಿ ಸಡಿಲತೆ ಮತ್ತು ವೈಚಾರಿಕತೆಯ ಭಾರ ಈ ಸಂಕಲನದಲ್ಲಿ ಓದುಗನನ್ನು ವಿಕರ್ಷಿಸುವ ಅಂಶಗಳು ಎಂದೇ ಹೇಳಬೇಕು. ಇದು ಮೂಲ ಕಾವ್ಯದಲ್ಲಿರುವ ದೋಷವೋ ಅನುವಾದದಲ್ಲಿ ಉಂಟಾದ ದೋಷವೋ ತಿಳಿಯದು. ಅನುವಾದಕರು ಮೂಲಕ್ಕೆ ತೋರಿರುವ ನಿಷ್ಟತೆ ಮತ್ತು ತೆಗೆದುಕೊಂಡಿರುವ ಸ್ವಾತಂತ್ರ್ಯವನ್ನು ಉಭಯ ಭಾಷಾ ಪರಿಣತರು ಪರಿಶೀಲಿಸಬೇಕು. ಹಾಗೆಯೇ ಅನುವಾದವನ್ನು ಒಂದು 'ಓದು', 'ವ್ಯಾಖ್ಯಾನ' ಎಂದೂ ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ "ನಿರ್ಬಂಧಿತ ಸಮುದಾಯದ ಯಾತನಾಮಯ ಬದುಕಿನ ಎಳೆಗಳು" ಆಗಿ ಕಂಡಿರುವ ಈ ಸಂಕಲನವನ್ನು ಅನುವಾದಕರು "ಇಲ್ಲಿನ ಸಂವೇದನೆ ಮುಸ್ಲಿಂ ಸ್ತ್ರೀ ಸಂವೇದನೆ ಎಂಬುದನ್ನು ಪ್ರತ್ಯೇಕಿಸಿ ನೋಡದಿದ್ದರೆ, ಕೆಲವು ಸಾಂಸ್ಕೃತಿಕ ಅಂಶಗಳ ಭಿನ್ನತೆಯನ್ನು ಪಕ್ಕಕ್ಕಿಟ್ಟರೆ ಇಡೀ ಸ್ತ್ರೀ ವರ್ಗದ ಸಂವೇದನೆಯೇ ಆಗಿದೆ" ಎಂದು ಕನ್ನಡಕ್ಕೆ ತಂದಿದ್ದಾರೆ. ಅಂದರೆ ಈ ಅನುವಾದಕ್ಕೆ ಅದರ ಸಮುದಾಯ ನಿಷ್ಟ ಪ್ರತ್ಯೇಕ ವಿಶಿಷ್ಟ ಅಂಶಗಳಿಗಿಂತ ಸಾಮಾನ್ಯೀಕರಣ ಅಂಶಗಳು ಮುಖ್ಯವಾಗಿದೆ. ಬಹುಶಹ ಸ್ತ್ರೀ ವಾದಿ ವಿಚಾರಧಾರೆಗೆ ನಮ್ಮ ಕಾಲದಲ್ಲಿ ದೊರೆತಿರುವ ಮನ್ನಣೆಯೆ ಕಾರಣವಾಗಿ, ಓದುಗರ ಆಸಕ್ತ ವಿಷಯವಾದ ಸ್ತ್ರೀ ಸಂವೇದನೆಯ ಭಾಗವಾಗಿ ಮಾತ್ರ ಪ್ರಸ್ತುತ ಕೃತಿಯನ್ನು ಅನುವಾದ ಮಾಡಲಾಗಿದೆ.
ಸಮಕಾಲೀನ ಸಂದರ್ಭದಲ್ಲಿ ಸ್ತ್ರೀವಾದಿ ವಿಚಾರಧಾರೆಯ ಹಿನ್ನೆಲೆಯಿಂದ ತಮ್ಮ ಕೃತಿಯಲ್ಲಿ ಷಾಜಹಾನ್ ಧಾರ್ಮಿಕ ಪ್ರತಿವಾದಿಯಾಗಿಯೆ ತಮ್ಮ ಗಟ್ಟಿ ದನಿಯನ್ನು ಎತ್ತಿದ್ದಾರೆ. ಆದರೂ ಧಾರ್ಮಿಕ ಹಿನ್ನೆಲೆಯಲ್ಲಿ ವಿವಾದಕ್ಕೆ ಗುರಿಯಾಗದೆ ಉಳಿದಿದ್ದಾರೆ. ಹನ್ನೊಂದನೆಯ ಶತಮಾನದಲ್ಲಿ ಜೀವಿಸಿದ್ದ ಉಮ್ಮರ್ ಖಯ್ಯಾಮ್ ತನ್ನ ಕಾಲಾವಧಿಯಲ್ಲಿ ಹಲವು ಜ್ಞಾನಶಾಖೆಗಳಲ್ಲಿ ಪರಿಣತ ಪಡೆದು ಮಾನ್ಯನಾಗಿದ್ದ ವಿದ್ವಾಂಸ. ಆತ ಬಹುಶಹ ತನ್ನ ಧರ್ಮದ ಮೊತ್ತಮೊದಲ ಧಾರ್ಮಿಕ ಪ್ರತಿವಾದಿಯಾಗಿದ್ದಿರಬಹುದು. ಆತನ ಈ ಪ್ರತಿವಾದಿತನವನ್ನು ಅವನ ರುಬಾಯತ್ ಗಳು ಸಮರ್ಥವಾಗಿ ಪ್ರತಿನಿಧಿಸುತ್ತಿದ್ದ ಕಾರಣದಿಂದಲೋ ಏನೋ ತನ್ನ ಕಾಲದಲ್ಲಿ ಪರ್ಷಿಯಾದಲ್ಲಿ ಆತ ಕವಿಯೆಂದು ಮಾನ್ಯನಾಗಿರಲಿಲ್ಲ. ಹೀಗಿದ್ದರೂ ಉಮರ್ ಖಯ್ಯಾಮ್ ಗೂ ಷಾಜಹಾನ್ ಗೂ ಎಲ್ಲೂ ತಾಳೆ ಹಾಕಲು ಸಾಧ್ಯವಿಲ್ಲ. ಈ ಇಬ್ಬರನ್ನು ಕನ್ನಡಕ್ಕೆ ಅನುವಾದ ಮಾಡಿದವರು ಮಾತ್ರ ಆ ಮತ ವಿಚಾರಗಳಿಗೆ ಅನ್ಯವಾದ ಸಮುದಾಯಕ್ಕೆ ಸೇರಿದವರು ಎಂಬುದು ಕಾಕತಾಳೀಯವಷ್ಟೆ. ಡಿವಿಜಿಯವರು ಉಮರನ ಒಸಗೆ ಪ್ರಕಟಿಸಿದಾಗ ಅದು ಕನ್ನಡಕ್ಕೊಂದು ಹೊಸದನಿಯನ್ನು ಪರಿಚಯಿಸಿತ್ತು. ಅದೇ ಮಾತು ನಖಾಬ್ ಅನುವಾದಕ್ಕೆ ಅನ್ವಯವಾಗುವುದಿಲ್ಲ. ಅನುಭವ ನಿಷ್ಟ ಮತ್ತು ಪ್ರಾಮಾಣಿಕ ಅಭಿವ್ಯಕ್ತಿಯನ್ನು ಹೊರತುಪಡಿಸಿ ಅದು ಪ್ರತಿಪಾದಿಸುವ ವಿಚಾರಧಾರೆ ಹೊಸತೇನಲ್ಲ. ಹಾಗಾಗಿ ಡಿವಿಜಿಯವರಂತೆ ಸ. ರಘುನಾಥರ ಬೆಳವಣಿಗೆ ಪೂರಕವೋ ಅಲ್ಲವೋ ಎಂಬುದನ್ನು ಕಾದು ನೋಡಬೇಕಾಗಿಲ್ಲ.
ಷಾಜಹಾನರ ನಖಾಬ್, ಕನ್ನಡಕ್ಕೆ: ಸ. ರಘುನಾಥ, ವಿಹಾ ಪುಸ್ತಕ, ಬೆಂಗಳೂರು, ಪುಟ-64, ಮೊ.ಮು-2011, ಬೆಲೆ ರೂ-50.