ಸೋಮವಾರ, ಅಕ್ಟೋಬರ್ 29, 2012

ಮುನ್ನುಡಿಯೆ ಪುಸ್ತಕದ ಮೂಲ ಬರಹವಾದ ಸೋಜಿಗದ ಸುತ್ತ


ವಸಂತ ಬನ್ನಾಡಿಯವರು ಈ ವರ್ಷದ ಆರಂಭದಲ್ಲಿ 'ಇಗೋ ಅರಿವೆ' ಎಂಬ ತಮ್ಮ ಇತ್ತೀಚಿನ ಕವನ ಸಂಕಲನವೊಂದನ್ನು ಕಳಿಸಿಕೊಟ್ಟರು. ಅದರಿಂದ ನನಗೆ ಅಚ್ಚರಿಯೂ ಸಂತೋಷವೂ ಅಯಿತು. ಕನ್ನಡದ ಬರಹಗಾರರ ಸಮುದಾಯದಲ್ಲಿ ನಾನು ಗುರುತಾದವನೇನಲ್ಲ. ಬರಹಗಾರ, ಚಿಂತಕ ಎಂದು ತೋರಿಸಿಕೊಳ್ಳುವುದು, ಯಾವುದಾದರೂ ಗುಂಪುಗಳಲ್ಲಿ ಗುರುತಿಸಿಕೊಳ್ಳುವುದು, ಆ ಗುಂಪು ಮುಗುಮ್ಮಾಗಿ ನಡೆಸುವ ಲಾಬಿಯ ಭಾಗವಾಗುವುದು - ಈ ಯಾವುದನ್ನೂ ನಾನು ರೂಢಿಸಿಕೊಳ್ಳಲಿಲ್ಲ. ಒಡಹುಟ್ಟಿದವರ ವಂಚಕತನದಿಂದಾಗಿ ನನಗೆ ಹೊಟ್ಟೆ ತುಂಬಿಸಿಕೊಳ್ಳಲು ನಡೆಸುವ ಹೋರಾಟವೆ ಜೀವನದ ರೂಪುರೇಷೆಯಾಗಿದೆ. 1991-96ರ ನಡುವೆ ಬೆಂಗಳೂರಿನಲ್ಲಿದ್ದ ಸಮಯದಲ್ಲಿ ಶಿವಪ್ರಕಾಶರು ನನ್ನನ್ನು ತಮ್ಮ ಒಡನಾಟದಲ್ಲಿಲ್ಲಿರಿಸಿಕೊಂಡಿದ್ದರು. ಆಗ ಅವರೊಮ್ಮೆ ಸಮಾನ ಆಸಕ್ತರೂ ಪರಸ್ಪರ ಹಿತೈಷಿಗಳೂ ಆದ ನಮ್ಮ ಸ್ನೇಹ ವಲಯದ ಗುರುತಿನಲ್ಲಿರುವ ಬೆರಳೆಣಿಕೆಯ ಕೆಲವರು ಕೂಡಿ ಅಭಿನವ ಎಂಬ ಹೆಸರಿನಲ್ಲಿ ಸಂಘಟಿತ ಬರಹ ಮಾಡೋಣವೆಂದು ಸೂಚಿದ್ದರು. ನಾನಿದ್ದು, ಯಾವುದೇ ಹೆಸರಿನಲ್ಲಿ ರಾಜಕಾರಣ ಮಾಡಲು ನನಗೆ ಇಷ್ಟವಿಲ್ಲ. ನೀವು ಹಾಗೆ ಮಾಡಿದ್ದಲ್ಲಿ ನಾನು ನಿಮ್ಮೊಂದಿಗೆ ಇರುವುದಿಲ್ಲವೆಂದು ಪಟ್ಟೆನೆ ಹೇಳಿದ್ದೆ. ಗೌರವ ಪ್ರತಿಯೊಂದು ತಲುಪಿದಾಗ ನನಗೇಕೆ ಅಚ್ಚರಿ ಮತ್ತು ಸಂತೋಷವಾಯಿತೆಂದು ವಿವರಿಸುತ್ತಿರುವಾಗಲೆ ಅದೇಕೋ ಈ ಸಂಗತಿ ನೆನಪಾಯಿತು. ನನಗೆ ಸರಿ ಕಂಡದ್ದನ್ನು ಬರೆಯುವುದು. ಬರೆದದ್ದನ್ನು ಯಾವುದಾದರೂ ಪತ್ರಿಕೆಗೆ ಕಳಿಸುವುದು ಮತ್ತು ನನ್ನ ಪಾಡಿಗೆ ಇದ್ದುಬಿಡುವುದು ನನ್ನ ರೀತಿ. ಒಬ್ಬೊಂಟಿ ಇದ್ದವನಿಗೆ ಯಾರೋ ಹಾದಿಹೋಕನೊಬ್ಬ ಅಡ್ಡ ನಿಲ್ಲಿಸಿ ಮಾತನಾಡಿಸಿದರೆ ಸಂತೋಷವಾಗುವುದಿಲ್ಲವೆ? ಹಾಗಾಯಿತು ನನಗೆ.
ವಸಂತ ಬನ್ನಾಡಿಯವರ ಹೆಸರನ್ನು ಅಲ್ಲಲ್ಲಿ ಕೇಳಿದ್ದೆ, ವಿಶೇಷವಾಗಿ ಶಬ್ದಗುಣ ಪತ್ರಿಕೆಯ ಮೂಲಕ ಅವರು ನನ್ನಲ್ಲಿ ಮರೆಯದಂತಾದರು. ನನಗೆ ಕಾವ್ಯ ಎಂದರೆ - ಮಹಾಕಾವ್ಯದ ಬೃಹತ್ ಚಿತ್ರವೆ ಕಣ್ಣಮುಂದೆ ನಿಲ್ಲುತ್ತದೆ, ಅದಕ್ಕಿಂತ ಭಾವಗೀತಾತ್ಮಕವಾದ ಸಣ್ಣ ರಚನೆಗಳೇ -ತುಂಬಾ ಇಷ್ಟ. ಅದರ ಸವಿಯನ್ನು ರೂಢಿಸಿದ್ದು ನನ್ನ ತಂದೆಯವರು. ಬರಗಾಲದಲ್ಲಿದ್ದ ನನಗೆ ಹೊಸ ಸಂಕಲನ ದೊರೆತದ್ದು ಸಂತೋಷವಾಗಲು ಮತ್ತೊಂದು ಕಾರಣವಾಗಿತ್ತು. ವಿಶೇಷವೆಂದರೆ ಬನ್ನಾಡಿಯವರು ಅದರೊಂದಿಗೆ ಇನ್ನೊಂದು ಪುಸ್ತಿಕೆಯನ್ನೂ ಇರಿಸಿದ್ದರು. ಅದು ಕವನ ಸಂಕಲನದಲ್ಲಿದ್ದ ಮುನ್ನುಡಿ ರೂಪದ ಬರಹವೆ ಆಗಿತ್ತು. ಇದೇನೋ ಹೊಸ ಬಗೆಯಾಗಿ ವಿಶೇಷವಾಗಿ ಕಂಡಿತು. ಅದನ್ನವರು ಮುನ್ನುಡಿಗೆ ಬದಲಾಗಿ ಬರೆದ ಲೇಖನವೆಂಬ ಉಪಶೀರ್ಷಿಕೆಯೊಂದಿಗೆ ಪ್ರಕಟಿಸಿದ್ದರು. ಸಾಮಾನ್ಯವಾಗಿ ನನಗೆ ಹಿನ್ನುಡಿ ಮುನ್ನುಡಿ ಬೆನ್ನುಡಿಗಳಿಗಿಂತ ನೇರ ಕವಿತೆಗಳಿಗೆ ಹೋಗಲು ಇಷ್ಟ. ಆದರೂ ಕವಿತೆಗಳನ್ನು ಓದಲು ಪ್ರಯತ್ನ ಪಡುತ್ತಲೇ ಮುನ್ನುಡಿ ರೂಪದ ಕಾವ್ಯ ಸ್ವರೂಪ ಕುರಿತು ಅಥವಾ ಅದರ ಸಂದರ್ಭ ಕುರಿತು ಇದ್ದಿರಬಹುದೆಂದು ಭಾವಿಸಿದ್ದ ಅವರ ಬರಹವನ್ನೂ ನೋಡತೊಡಗಿದೆ. ಒಮ್ಮ ಆರಂಭಿಸಿದೊಡನೆಯೆ ಒಂದೇ ಓಟದಲ್ಲಿ ಸಾಗಿ ಮುಗಿಸುವ ವರೆಗೂ ಬಿಡದೆ ಓದಿಸಿಕೊಂಡಿತು. "ನೆರೂಡ ಮತ್ತು ಬ್ರೆಕ್ಟ್ ಎಂಬ 'ಕೇತುಗ್ರಸ್ತ'ರೂ ಅನಂತಮೂರ್ತಿ ಪ್ರಣೀತ 'ಕಲಬೆರಕೆ ಸಾಹಿತ್ಯ ವಿಮರ್ಶೆ' ಎಂಬ ಶ್ರೇಣೀಕೃತ ವ್ಯವಸ್ಥೆಯೂ" ಎಂಬ ಹೆಸರಿನ ಆ ಪುಸ್ತಿಕೆ ಕುರಿತೆ ಬರೆಯಬೇಕೆಂದು ಅಂದಿನಿಂದ ಕಾಡಿದ್ದು ಇಂದು ಬರಹ ರೂಪ ಪಡೆಯುತ್ತಿದೆ.
00
ಶ್ರೇಷ್ಟತೆಯ ಹಣೆಪಟ್ಟಿ ಮತ್ತು ಅದರಿಂದ ದೊರಕುವ ಸ್ಥಾನಮಾನಗಳನ್ನು ನಿರ್ಲಕ್ಷಿಸಿದಾಗಲೇ ಲೇಖಕನೊಬ್ಬ ಚೈತನ್ಯಪೂರ್ಣವಾಗಿ ಮರುಹುಟ್ಟು ಪಡೆಯಬಲ್ಲನೆಂಬುದು ಬನ್ನಾಡಿ ನಂಬಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಅವರು ತಮ್ಮನ್ನು ಘಾತಿಸಿ ವಿಚಲಿತಗೊಳಿಸಿದ ಅಂಶಗಳನ್ನು ಹೀಗೆ ದಾಖಲಿಸಿದ್ದಾರೆ-
ಜ್ಞಾನಪೀಠಪ್ರಶಸ್ತಿ ಪಡೆದ ಕಂಬಾರರು ಬಿಜೆಪಿ ಸರಕಾರ ನೀಡಿದ ಲಕ್ಷಾಂತರ ರೂಪಾಯಿಗಳ ಕೊಡುಗೆಯನ್ನು ಯಾವ ಮಾತಿಲ್ಲದೆ ಪಡೆದದ್ದು.
ಇನ್ಫೋಸಿಸ್ ಮೂರ್ತಿ ಅವರ ಮೀಸಲಾತಿ ವಿರೋಧವನ್ನು ಮೌನವಾಗಿ ಅನಂತಮೂರ್ತಿ ಆಲಿಸಿದ್ದು. ಪ್ರಾದೇಶಿಕ ಭಾಷೆಯಲ್ಲೆ ಪ್ರಾಥಮಿಕ ಶಿಕ್ಷಣ ಪರವಾದ ವಾದದಲ್ಲಿ ತನಗಿಂತ ಇನ್ಫೋಸಿಸ್ ಮೂರ್ತಿ ಹೆಚ್ಚು ಪರಿಣಾಮಕಾರಿ ಎಂದು ಅನಂತಮೂರ್ತಿ ಅಭಿಪ್ರಾಯ ತಳೆದಿದ್ದು. ಕಾರ್ಪೋರೇಟ್ ರ ವಿರುದ್ಧ ಸಮಾಜವಾದಿ ಅನಂತಮೂರ್ತಿ ಮಾತು ಸೋತಂತೆ ಕಂಡಿದ್ದು.
ಕಂಬಾರರು ಪೇಜಾವರ ಶ್ರೀಗಳ ಕಾಲಿಗೆ ನಮಸ್ಕಾರ ಮಾಡುವುದು. ಕುವೆಂಪು ಹಾಗೆ ಕಂಬಾರ ಒಬ್ಬ ಶೂದ್ರ ಲೇಖಕನೆಂಬ ಒಪ್ಪಿತ ಜಾತಿ ಶ್ರೇಣೀಕರಣ ನೆಲೆಯಲ್ಲಿ ಸಾಮಾಜಿಕವಾಗಿ ಹೆಮ್ಮೆ ಪಟ್ಟಿದ್ದು.  ಕಂಬಾರ ತಮ್ಮನ್ನು ಎಡ ಬಲ ಪಂಥಗಳಿಗೆ ಕಟ್ಟಿ ಹಾಕಿಕೊಳ್ಳಲು ನಿರಾಕರಿಸಿರುವುದು.
ಇದು ಕಂಬಾರ ಮತ್ತು ಅನಂತಮೂರ್ತಿ ಅವರ ಅಸೂಕ್ಷ್ಮತೆ ಎಂಬುದು ಲೇಖಕರ ಗ್ರಹಿಕೆ. ಇದನ್ನು ಜೊತೆಗಾರರು ಒಪ್ಪಿ ಮುಂದುವರೆಸಬೇಕೆಂಬ ಅಘೋಷಿತ ವಾತಾವರಣ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಸೃಷ್ಟಿಯಾಗಿರುವುದು. ಪ್ರಭುತ್ವ ಮತ್ತು ಎಡವಾದ ವಿರೋಧಿ ನಿಲುವಿನ ಕಾರಂತರು ತಮ್ಮ ಕೊನೆಗಾಲದಲ್ಲಿ ರಾಮಜನ್ಮ ಭೂಮಿ ಪರ ದನಿಯೆತ್ತಿದ್ದರಿಂದ ಬಲಪಂಥೀಯರು ಪ್ರತಿವರ್ಷ ಕಾರಂತರ ಹೆಸರಿನಲ್ಲಿ ಉತ್ಸವ ಸಂಘಟಿಸುತ್ತಿರುವುದು ಇದಕ್ಕೆ ಕಾರಣ ಎಂಬುದು ಬನ್ನಾಡಿ ದೃಷ್ಟಿ.
ಎಡಪಂಥೀಯ ಲೇಖಕರನ್ನು ಕೇತುಗ್ರಸ್ತರೆಂದು ಕರೆಯುವ ಅನಂತಮೂರ್ತಿ ಬಲಪಂಥೀಯ ಚಿದಾನಂದಮೂರ್ತಿಗೆ ಗೌರವ ಡಾಕ್ಟರೇಟ್ ನೀಡುವಲ್ಲಿ ತಕರಾರು ತೆಗೆದ ರಾಜ್ಯಪಾಲರ ವಿರುದ್ಧ ತಮ್ಮ ಅನಾರೋಗ್ಯವನ್ನೂ ಲೆಕ್ಕಿಸದೆ ಪ್ರತಿಭಟಿಸಿದ್ದು ಮತ್ತು ಮುಖ್ಯಮಂತ್ರಿಗಳ ಅಕ್ರಮ ಗಣಿಗಾರಿಕೆ ವಿರುದ್ಧ ಸಿಟ್ಟು ಕಾರಿದ್ದವರು ವಿಶ್ವ ಕನ್ನಡ ಸಮ್ಮೇಳನಲ್ಲಿ ಅದೇ ಮುಖ್ಯಮಂತ್ರಿ ಪಕ್ಕ ನಾಚಿ ವಿನಯದಿಂದ ನಿಂತಿದ್ದು. ಸಾಹಿತ್ಯ ವಲಯದ ಅಭಿಮಾನಿಗಳ ಕಣ್ಣಲ್ಲಿ ಬೌದ್ಧಿಕ ಪ್ರಭಾವ ಬೀರುವಂಥ ಅನಂತಮೂರ್ತಿ ಅವರ ಸದಾ ಅನ್ ಪ್ರಿಡಕ್ಟಬಲ್ ನಡೆ ಕೂಡ ಪ್ರಿಡಕ್ಟಬಲ್ ಆಗಿರುವುದು.
ಇದರ ಆರಂಭ ನವೋದಯದ ಎದುರು ನವ್ಯದ ಬರಹಗಾರರು ತಮ್ಮ ಅನುಕೂಲವಾದಿ ನಿಲುವಿಗೆ ತಕ್ಕ ಎಕ್ಲೆಕ್ಟಿಕ್ ಧೋರಣೆ ಅನುಸರಿಸಿದ ಅರವತ್ತರ ದಶಕದಲ್ಲೆ ಶುರುವಾದದ್ದು. ಇದರಿಂದ ಎಲ್ಲ ವಿಚಾರಧಾರೆಗಳನ್ನು ಮುಸುಕು ಮಾಡಿ ತಮ್ಮನ್ನು ತಾವೆ ಸ್ಥಾಪಿಸಿಕೊಳ್ಳುವ ಅವಕಾಶ ಪಡೆದದ್ದು. ಈ ಕಾರ್ಯ ವಿಧಾನದಿಂದ ಅಡಿಗ ಮತ್ತು ಅನಂತಮೂರ್ತಿ ನವ್ಯದ ಮುಖ್ಯ ಬರಹಗಾರರಾಗಿ ಹೊರಹೊಮ್ಮಿದ್ದು. ಅನಂತಮೂರ್ತಿಯವರ ಅನುಕೂಲವಾದಿ ಎಕ್ಲೆಕ್ಟಿಕ್ ವಿಧಾನದಲ್ಲಿ ಪೌರ್ವಾತ್ಯ ಮತ್ತು ಪಾಶ್ಚಿಮಾತ್ಯದ ಆಧುನಿಕ ಜಗತ್ತಿನ ಬಹುಮುಖ್ಯ ಚಿಂತಕರು, ಕಲಾವಿದರು ಮತ್ತು ರಾಜಕಾರಣಿಗಳೆಲ್ಲ ಅತಾರ್ಕಿಕವಾಗಿ ಸ್ಥಾನ ಪಡೆಯುವುದು. ರಾಹುಗ್ರಸ್ತನಾದ ಎಸ್ ಎಲ್ ಭೈರಪ್ಪ ಗಿರೀಶ್ ಕಾಸರವಳ್ಳಿಯಿಂದ ರಾಹುಮುಕ್ತನಾಗುವುದು. ಎಡವಾದಿ ಬರಹಗಾರರು ಕೇತುಗ್ರಸ್ತರಾಗುವುದು. ಇವೆಲ್ಲ ಯಾರನ್ನೋ ಎತ್ತಿಹಿಡಿಯಲು ಮತ್ತು ಇನ್ಯಾರನ್ನೋ ಬದಿಗೊತ್ತಲು ಉದ್ದೇಶಪೂರ್ವಕವಾಗಿ ಬಳಕೆಯಾಗಿ ನೇತಾತ್ಮಕ ಪರಿಣಾಮ ಹೊಂದಿರುವುದು. ಸೃಜನಶೀಲತೆ ಚೌಕಟ್ಟಿನಲ್ಲಿ ಬಲಪಂಥೀಯತೆ ಮತ್ತು ಶ್ರೇಷ್ಟತೆಯ ಪರಿಕಲ್ಪನೆಗಳನ್ನು ಮುಂದುಮಾಡುವಲ್ಲಿ ಎಲಿಯಟ್ ನನ್ನು ಬಳಸಿಕೊಳ್ಳುವುದು. ಈ ಮೂಲಕ ತಾವು ಕೆಲವರು ಮಾತ್ರ ಶ್ರೇಷ್ಟ ಮತ್ತು ಎತ್ತರದ ಬರಹಗಾರರೆಂದು ಬಿಂಬಿಸಿರುವುದು ಮತ್ತು ಅಂಥ ಭ್ರಮೆಯನ್ನು ರೂಢಿಸುವ ಅಭಿಮಾನಿಗಳನ್ನು ಪೋಷಿಸಿರುವುದು. ಇಂಥ ಪ್ರಾಮಾಣಿಕವಾದ  ಅಪ್ರಾಮಾಣಿಕತೆ ಮತ್ತು ಠಕ್ಕಿನ ಪ್ರೌಢವಿಮರ್ಶೆ ಒಳಗೊಂಡ ವಿಮರ್ಶಕರ ಪುಡಾರಿ ರಾಜಕಾರಣ ಕುರಿತು ತೇಜಸ್ವಿ ಎತ್ತಿದ ದನಿಗೆ ಕಿವಿಗೊಡದೆ ಅದೇ ವರಸೆ ಹೂಡಿರುವುದು. ಎಡವಾದಿ ಬರಹಗಾರರನ್ನು ಕನ್ನಡಕ್ಕೆ ಪರಿಚಯಿಸುವಾಗ ತಾವು ಸ್ವತಹ ಎಡವಾದಿಗಳಾಗಿ ನಂಬಿಸುವುದು ಮತ್ತು ಆ ಬರಹಗಾರರನ್ನು ಮತ್ತೆ ಕಣ್ಣಿಗೆ ಕಾಣದಂತೆ ಕಡೆಗಣಿಸುವ ಸೂಕ್ಷ್ಮ  ವಿಮರ್ಶಕರಾಗಿರುವುದು. ತೋರಿಕೆಗೆ ಯಾವಪಂಥಕ್ಕೂ ಸೇರದ, ಅಧಿಕಾರದ ಭಾಗವಾದ ಈ  ಪಂಥವನ್ನು ಬಲಪಡಿಸಲು ಕಮ್ಯುನಿಷ್ಟರು, ಸೋಶಲಿಸ್ಟರು, ಎಡಪಂಥೀಯರು, ಬಲಪಂಥೀಯರು ಜೊತೆಗೂಡಿ ಶ್ರಮಿಸುತ್ತಿರುವುದು.  .       
ಅರವತ್ತರ ದಶಕದಲ್ಲಿ ಕುವೆಂಪು ಎದುರು ಅಡಿಗರನ್ನು ಅತಿಶ್ರೇಷ್ಟ ಕವಿಯೆಂದು ಸ್ಥಾಪಿಸಿದ ಅನಂತಮೂರ್ತಿ ತಮ್ಮ ಅನುಕೂಲವಾದಿ ಎಕ್ಲೆಕ್ಟಿಕ್ ಧೋರಣೆಗೆ ತಕ್ಕಂತೆ ಈಗ ಕುವೆಂಪು ಅವರನ್ನು ಮಹಾಕವಿಯಾಗಿ ಬಿಂಬಿಸುತ್ತಿರುವುದು. ಅಡಿಗರನ್ನು ಒಪ್ಪಿದ್ದ ಲಂಕೇಶ್ ಮತ್ತು ತೇಜಸ್ವಿ ಮುಂದೆ ಅವರಿಂದ ಪೂರ್ತಿ ಕಳಚಿಕೊಂಡರೂ ಅನಂತಮೂರ್ತಿ ಹಠಕ್ಕೆ ಬಿದ್ದು ಅಡಿಗರ ಬಗ್ಗೆ ಬರೆದದ್ದು. ಎಡವಾದಿ ಮತ್ತು ಎಡವಾದಿಯಲ್ಲದ ಬ್ರೆಕ್ಟ್ ಮತ್ತು ರಿಲ್ಕ್ ಇಬ್ಬರೂ ಪಾಶ್ಚಾತ್ಯ ಮತ್ತು ಪೌರ್ವಾತ್ಯರಲ್ಲಿ ಅತ್ಯಗತ್ಯವೆಂದು ಅದೇ ನೆಲೆಯಲ್ಲೇ ಪ್ರತಿಪಾದಿಸಿದ್ದು. ಹಾಗಾಗಿ ರಿಲ್ಕೆ ಹೇಳುವಂತೆ ಕನ್ನಡದ ಹೊಸ ಬರಹಗಾರರು ಸಾಹಿತ್ಯ ವಿಮರ್ಶೆಯನ್ನು ಅತಿ ಕಡಿಮೆ ಓದಬೇಕು. ಏಕೆಂದರೆ ಇಂದು ವಿಮರ್ಶೆ ಅಪಕಲ್ಪನೆಯನ್ನು ಹಬ್ಬಿಸುವಂತದ್ದು, ತಮಗೆ ಬೇಕಾದ ಅರ್ಥವನ್ನು ಹೊರಡಿಸುವಂಥದ್ದು, ಆಯ್ದ ಕೆಲವರನ್ನು ವಿಮರ್ಶಾತೀತರೆಂದು ಬಿಂಬಿಸುವಂಥದ್ದು, ತಮಗೆ ಬೇಕಾದವರನ್ನು ಸ್ಥಾಪಿಸಿಕೊಳ್ಳುವ ಹುನ್ನಾರದ್ದು, ಸಂಸ್ಕೃತಿಯ ಧಾರ್ಷ್ಟ್ಯ ಮೆರೆಸುವಂಥದ್ದು, ಲೇಖಕರನ್ನೂ ಕೃತಿಗಳನ್ನೂ ಶ್ರೇಣೀಕರಣಕ್ಕೊಳಪಡಿಸುವಂಥದ್ದು. ಇಂಥ ವಿಮರ್ಶಾ ಪರಂಪರೆಯನ್ನು ರೂಢಿಸಿದ ಅಡಿಗ ಮತ್ತು ಅನಂತಮೂರ್ತಿ ನವೋದಯದ ಮುಖ್ಯ ಬರಹಗಾರರ ಓದಿನಿಂದ ವಿಮುಖವಾಗಲು ಕಾರಣರಾದದ್ದು.
ಹುಸಿ ಕ್ರಾಂತಿಕಾರರಾದ ಅಡಿಗ, ಅನಂತಮೂರ್ತಿ ಎತ್ತಿ ಹಿಡಿದಿದ್ದೆಲ್ಲ ಆರ್ಷೇಯ ತತ್ವಗಳೇ, ಉಳಿಸಿಕೊಂಡಿದ್ದೆಲ್ಲ ಬಹುಸಮುದಾಯ ಪರ ಆಶೋತ್ತರ ವಿರೋಧಿ ಪೇಜಾವರರ ಬಾಂಧವ್ಯವೇ. ಹಾಗಾಗಿ ಕುವೆಂಪು ಅವರ ಮಲೆಗಳಲಿ ಮದುಮಗಳು ಅನಂತಮೂರ್ತಿಗೆ ಕೇಂದ್ರ ಪ್ರಜ್ಞೆಯಿಲ್ಲದೆ ವಿವರಗಳಲ್ಲಿ ಸೊಕ್ಕಿಬಿಡುವ ಕಾದಂಬರಿಯಾಗಿದ್ದರೆ ಅಡಿಗರ ನಮ್ಮ ಸಂಸ್ಕೃತಿ ಅತ್ಯುತ್ಸಾಹ ಹುಟ್ಟಿಸುತ್ತದೆ. ಇದರಿಂದಾಗಿ ಲಂಕೇಶ್ ದೃಷ್ಟಿಯಲ್ಲಿ ಅನಂತಮೂರ್ತಿ ವಿಮರ್ಶೆ ಗುಂಪುಗಾರಿಕೆ, ಜಾತಿ, ಅಹಂಕಾರ, ಸ್ವಪ್ರದರ್ಶನ ಮುಂತಾದ್ದರ ಜೊತೆಗೆ ಗಣ್ಯತೆಯ ಆಶೀರ್ವಾದ ರೂಪದಲ್ಲಿ ಇರುವುದರಿಂದ ಪ್ರಶ್ನಾರ್ಹವಾಗಿ ಕಂಡಿದೆ.
ಆದರೂ ಕೃತಿಶ್ರೇಣಿ ಕಟ್ಟುವ ಕೆಲಸ ಭರದಿಂದ ಸಾಗಿದೆ. ಲೇಖಕರದೊಂದು ವರ್ಗ ಒಳ್ಳೆಯ ಮನುಷ್ಯನೋ ಒಳ್ಳೆಯ ಲೇಖಕನೋ ಆಗುಳಿಯಲು ಪಣ ತೊಟ್ಟುನಿಂತಿದೆ. ಇದರ ಭಾಗವಾಗಿ ಝೆನ್ ತಾವೋ ಫಿಲಾಸಫಿಗಳಿಗಾಗಿ ತವಕ ಕಾಣಿಸಿಕೊಂಡಿದೆ. ಜಗತ್ತಿನ ಸಜ್ಜನರೇ ಆಗಿ ಅಥವಾ ಸಜ್ಜನರಂತೆ ನಟಿಸುತ್ತಿರುವ ಇವರಿಗೆ ಬಿಕ್ಕಟ್ಟಿನ ನಡುವೆ ಬದುಕಿ ಬರೆದ ಬರಹಗಾರರು ಯಾರೂ ಅರ್ಥವಾಗದೆ ಹೋಗಿದ್ದಾರೆ.
ಇದು ಲೇಖಕನ ಚೈತನ್ಯಪೂರ್ಣ ನಡೆಯಾಗಿರದೆ ಹುಸಿ ಪರಿಕಲ್ಪನೆಯ ಶ್ರೇಷ್ಟತೆಯ ಹಣೆಪಟ್ಟಿ ಮತ್ತು ಅದರಿಂದ ದೊರಕುವ ಸ್ಥಾನಮಾನಗಳಿಗಾಗಿ ನಡೆಯುತ್ತಿರುವ ಹುನ್ನಾರವಾಗಿದೆ ಎಂಬುದು ಬನ್ನಾಡಿ ಆತಂಕವಾಗಿದೆ.
00
ಅಷ್ಟರಲ್ಲಿ ಈ ಸಲದ 'ಸಂಕ್ರಮಣ'ದಲ್ಲಿ "ಅನಂತಮೂರ್ತಿ ಮತ್ತು ಸಾಂಸ್ಕೃತಿಕ ರಾಜಕಾರಣ" ಎಂಬ ಹೆಸರಿನಲ್ಲಿ ಇದೇ ಬರಹದ ಆಯ್ದ ಭಾಗ ಪ್ರಕಟವಾಗಿದೆ.  ಈ ಶೀರ್ಷಿಕೆಯನ್ನು ಬನ್ನಾಡಿಯವರೇ ನೀಡಿದರೊ ಸಂಪಾದಕ ಚಂಪಾ ನೀಡಿದರೊ ಗೊತ್ತಿಲ್ಲ. ಈ ಬರಹ ನೆಪ ಮಾತ್ರಕ್ಕೆ ಕಂಬಾರ ಮತ್ತು ವಿಶೇಷವಾಗಿ ಅನಂತಮೂರ್ತಿ ಅವರು ಸಾಹಿತ್ಯ ವಲಯವನ್ನೂ ಅದರಿಂದ ಮರುರೂಪ ಪಡೆಯುತ್ತಿರುವ ಸಾಂಸ್ಕೃತಿಕ ಪರಿಸರವನ್ನೂ ಮುನ್ನಡೆಸುತ್ತಿರುವ ಬಗೆ ಯಾವುದೆಂದು ಕಾಣಿಸುತ್ತದೆ. ನವೋದಯ ಸಾಹಿತ್ಯಕ್ಕೆ ಇದಿರಾಗಿ ನವ್ಯದ ಮುಂಚೂಣಿ ಲೇಖಕರು ಶುರು ಮಾಡಿದ ಗುಂಪುಗಾರಿಕೆ ಮತ್ತು ಲಾಬಿಯ ಪ್ರಸ್ತಾಪ ಮುಂದಿಟ್ಟುಕೊಂಡು  ಈ ಬರಹವನ್ನು 'ಸಾಂಸ್ಕೃತಿಕ ರಾಜಕಾರಣ' ಎಂಬ ಪಾರಿಭಾಷಿಕ ಪದಗಳನ್ನು ಬಳಸಿಕೊಂಡಿದೆ. ಅಲ್ಲದೆ ಸಮಾಜದ ಶ್ರೇಣೀಕೃತ ವ್ಯವಸ್ಥೆಯ ಮೇಲುವರ್ಗ ಪರವಾದ ತಂತ್ರೋಪಾಯಗಳನ್ನು ಸಾಹಿತ್ಯ ವಲಯದಲ್ಲಿ ಮೇಲುವರ್ಗದಿಂದ ಬಂದ ಲೇಖಕರ ಪರವಾಗಿ ಹೇಗೆ ಬಳಸಿದೆ ಎಂದೂ ವಿವರಿಸಲು ಪ್ರಯತ್ನಿಸಿದೆ. ಇದರ ಚಾಲಕ ಬಿಂದುವಾಗಿ ಅನಂತಮೂರ್ತಿಯವರನ್ನು ಪರಿಷ್ಕೃತ ಶೀರ್ಷಿಕೆ ಕಾಣಿಸಿದೆ. ಈ ಹಿನ್ನೆಲೆಯಲ್ಲಿ 'ಸಾಂಸ್ಕೃತಿಕ ರಾಜಕಾರಣ' ಎಂಬ ಪದಗಳನ್ನು ಬಳಸಿ ಈ ಬರಹದ ಕೇಂದ್ರಬಿಂದುವಾಗಿ ನೋಡಲು ಬಯಸಲಾಗಿದೆ. ಇದರ ನೋಟವೇ ಭಾರತೀಯ ಅಥವಾ ಕನ್ನಡ ಸಮಾಜದ ಸಮಗ್ರ ಜೀವನದ ರೂಪುರೇಷೆಯ ತಂತ್ರೋಪಾಯಗಳು ಎಂದಾಗುತ್ತದೆ. ಮೇಲುವರ್ಗದ ಲೇಖಕರ ಪರವಾದ ತಂತ್ರೋಪಾಯಗಳನ್ನು ರೂಪಿಸಿದ ಬಗೆಗಳ ಕುರಿತು ಮಾತ್ರ ಒಂದು ಮಟ್ಟಿಗೆ ವಿವರಗಳಿವೆ. ಇದು ಬಹು ಸಮುದಾಯ ಕೇಂದ್ರಿತ ಸಮಾಜ ಏಕ ಸಮುದಾಯ ನಿಷ್ಟವಾಗಿ ತರತಮ ಶ್ರೇಣಿಯಲ್ಲಿರಬೇಕೆಂಬ ಏಕ ಸಮುದಾಯ ಕೇಂದ್ರಿತ ಹಿತಾಸಕ್ತಿಯಾಗಿದೆ. ಇದರೊಂದಿಗೆ  ಬಹುಸಮುದಾಯ ನಿಷ್ಟ ಕೊಳುಕೊಡೆಗಳೆಲ್ಲ ಸಮಾನ ಏಕ ಸಾಮಾಜಿಕ ನೆಲೆಯಲ್ಲಿ ಬಲಗೊಂಡು ಭದ್ರಗೊಳ್ಳಬೇಕಾದ ಸರ್ವ ಸಮುದಾಯ ನಿಷ್ಟ ಹಿತಾಸಕ್ತಿ ಕೂಡ ಅಷ್ಟೇ ಮುಖ್ಯವಾಗಿದೆ. 
ಬನ್ನಾಡಿಯವರ ಬರಹ ಮೊದಲ ಹಂತವನ್ನು ಮಾತ್ರ ಗಮನ ಸೆಳೆಯಲು ಪ್ರಯತ್ನಿಸಿದೆ. ಸಾಹಿತ್ಯ ವಲಯದ ಸಾಹಿತ್ಯೇತರ ಬೆಳವಣಿಗೆ ಕುರಿತು ಬನ್ನಾಡಿ ಬರಹ ಎತ್ತಿದ ಪ್ರಮುಖ ಪ್ರಶ್ನೆಗಳ ಪ್ರಾಮುಖ್ಯತೆ ಮನವರಿಕೆಯಾಗಲು ನಂತರದ ಹಂತವೂ ಚಾಲ್ತಿ ಪಡೆಯಬೇಕಿದ್ದು ಅದರ ಕೊರತೆಯಿಂದ ಲೇಖಕರು ಡಿಸ್ಟರ್ಬ್ ಆಗಿರುವಂತೆ ಕಾಣುತ್ತದೆ. ಇದು ಬಹು ಸಮುದಾಯ ಕೇಂದ್ರಿತ ಆಸಕ್ತಿಯಿಂದ ಹುಟ್ಟಿದುದು ಎಂದು ಹೇಳಬಹುದು.
00   
ನನ್ನ ಈ ಮೇಲ್ ಗೆ ಆಗಾಗ ಗೊತ್ತು ಗುರಿ ಇಲ್ಲದೆ ಹಲವಾರು ಮೇಲ್ ಸಂದೇಶಗಳು ಬರುತ್ತಿರುತ್ತಿವೆ. ಅವುಗಳಲ್ಲಿ ಜಾಗತಿಕ ಪ್ರಮಾದಗಳು ಎಂಬ ಹೆಸರಿನ ಇತ್ತೀಚಿನ ಮೇಲ್ ಒಂದು ಗಮನ ಸೆಳೆಯಿತು. ಅದು ಹೀಗಿದೆ. "ಜಾಗತಿಕ ಪ್ರಮಾದಗಳು 1. ದುಡಿಯದೆ ಗಳಿಸುವ ಸಂಪತ್ತು 2. ಮನಸ್ಸಾಕ್ಷಿ ಇಲ್ಲದ ಸಂತೋಷ 3. ನಡತೆಗೆಟ್ಟ ಜ್ಞಾನ 4. ನೈತಿಕತೆ ಇಲ್ಲದ ವ್ಯಾಪಾರ 5. ಮಾನವೀಯತೆ ಇಲ್ಲದ ವಿಜ್ಞಾನ 6. ತ್ಯಾಗವಿಲ್ಲದ ಪೂಜೆ 7. ತತ್ವವಿಲ್ಲದ ರಾಜಕೀಯ 8. ಜವಾಬ್ದಾರಿ ಇಲ್ಲದ ಹಕ್ಕು". ಈ ಮಾತುಗಳು ಮಾನವನ ಸಾಧಕ ವಿವೇಕ ಪ್ರಜ್ಞೆ ಹಿಡಿಯಬೇಕಾದ ಕಠಿಣ ಸೂಕ್ಷ್ಮ ಹಾದಿಯ ಸ್ವರೂಪ ಚಹರೆಯಾಗಿವೆ. ಪ್ರಾಮಾಣಿಕವಾದ ಅಪ್ರಾಮಾಣಿಕತೆಯನ್ನು ಬಿಚ್ಚಿನೋಡಬೇಕಾದಲ್ಲಿ ಇಂಥ ಮಾತುಗಳು ಆಧಾರವಾಗಲಿವೆ.  
00
ನಾನು ಅನಂತಮೂರ್ತಿಯವರನ್ನು ಮೊದಲು ಕಂಡದ್ದು 1980ರಲ್ಲಿ. ಆಗವರು ಮಹಾರಾಜ ಕಾಲೇಜಿನ ಕ್ಯಾಂಟೀನಲ್ಲಿ ತಮ್ಮ ಸ್ನೇಹಿತರೆದುರು ಕುಳಿತು ಎಂದೆಂದೂ ಮುಗಿಯದ ಕತೆಯ ಗಹನತೆಯನ್ನು ಒಪ್ಪಿಸುವಲ್ಲಿ ಮುಳುಗಿದ್ದಂತೆ ಇತ್ತು. ಆ ಹೊತ್ತಿಗಾಗಲೇ ನಾನು  ಅವರ ಸಂಸ್ಕಾರ ಓದಿದ್ದೆ ಮತ್ತು ಘಟಶಾದ್ಧ ನೋಡಿದ್ದೆ. ಬರಹಗಾರನೊಬ್ಬ ಮೈಮರೆತು ತನ್ನ ಬರವಣಿಗೆಯ ಯಾವುದೇ ಅಂಶವನ್ನು ಕೃತಿಯ ಹೊರಗೆ ಪ್ರಬಲವಾಗಿ ಪ್ರತಿಪಾದಿಸುವುದೋ ಒಪ್ಪಿಸುವುದೋ ಮಾಡಬೇಕೆ? ಎಂದೆನಿಸಿ ನನಗಾಗ ವಿಚಿತ್ರವೆನಿಸಿತ್ತು. ಅದೇ ವರ್ಷ ನಾನವರನ್ನು ಅವರ ವಿಭಾಗದ ಕೊಠಡಿಯಲ್ಲಿ ಕಂಡು ಅವಸ್ಥೆ ಕುರಿತು ಮಾತಾಡಿದೆ. ಅವರನ್ನು ಅವರ `ಅಭಯ' ಮನೆಯಲ್ಲಿ ಸಂಜೆ ನಾಲ್ಕರ ಹೊತ್ತಲ್ಲಿ ಕಂಡಾಗ ಮಹಾನ್ ಲೇಖಕನ ವಿಶಿಷ್ಟ ಸರಳ ಜೀವನ ಬಿಂಬಿತವಾಗುವ ವಿನ್ಯಾಸ ಸಹಜವಾಗಿರದೆ ಉದ್ದೇಶಪೂರ್ವಕವಾಗಿ ಸಾಧಿಸಿದಂತೆ ಇತ್ತು. ಅನಂತಮೂರ್ತಿ ಮಹಾನ್ ವ್ಯಕ್ತಿತ್ವವೊಂದನ್ನು ಆವಾಹಿಸಿಕೊಂಡು ನಟಿಸುತ್ತಿದ್ದುದು ಅವರ ಪ್ರತಿಯೊಂದು ಮಾತಿನ ರೀತಿ, ದೈಹಿಕ ಭಾಷೆ ನುಡಿಗೊಡುತ್ತಿತ್ತು. ಏನೂ ಅಲ್ಲದ ಪ್ರಾಣಿಯೊಂದು ತಾನು ಹುಲಿಯೆಂದು ನಂಬಿಸಿ ನಟಿಸುತ್ತಿರುವಂತೆ ಇತ್ತು ಅದು. ತನ್ನ ಸಹಜ ಶಕ್ತಿಯನ್ನು ನಿರಾಕರಿಸಿ ಅದಕ್ಕೂ ಹೆಚ್ಚಿನವನೆಂದು ತೋರಿಸಿಕೊಳ್ಳುವ `ಸಾಮಾನ್ಯನಂತೆ ಈ ನಾನು' ಎಂಬ ಈಗೋ ಪ್ರದರ್ಶನವಾಗಿತ್ತು. ಮತ್ತೊಮ್ಮೆ ರಾತ್ರಿ 8-30ರ ಹೊತ್ತಿನಲ್ಲಿ ಹೋಗಿದ್ದೆ. ಮಹಡಿಯ ಮೇಲೆ ಕುಳಿತು ಸೋಮಯಾಜಿ ಮತ್ತಿತರರೊಂದಿಗೆ ಗುಂಡು ಹಾಕುತ್ತಿದ್ದರು. ನಾನು ಮೇಲೆ ಹೋದಂತೆಯೆ ಹಿ ಕೇಮ್ ಅಂದ ಹಾಗಾಯಿತು. ಕೂಡಲೇ ಅಲ್ಲಿದ್ದ ಆಪ್ತವಾಗಿ ಹರಟುತ್ತಿದ್ದ ಸದರ ವಾತಾವರಣ ಮಾಯವಾಗಿತ್ತು. ಅಸಹಜವಾದ ಗಂಭೀರ ಮೌನ ಆವರಿಸಿತ್ತು. ಆ ಕೃತಕತೆ ಒಳಹೊರಗು ಬೇರೆಯಾದ ಕಪಟ ಸಾನಿಧ್ಯವನ್ನು ಸಾರುತ್ತಿತ್ತು. ಕಮಟು ವಾಸನೆ ಮೂಗಿಗಡರಿತು. ಅದೇ ಕೊನೆ ಮತ್ತೆ ಕಾಣಲು ಹೋಗಲಿಲ್ಲ.
ಅನಂತಮೂರ್ತಿ ಕನ್ನಡ ಮತ್ತು ಕನ್ನಡ ನಾಡು ಕುರಿತ ಸಮಸ್ತ ವಿಚಾರಗಳಲ್ಲಿ ವೇದಿಕೆ ಹತ್ತಿದ್ದಾರೆ. ಅವರದು ಈ ಎಲ್ಲ ವಿಚಾರಗಳಲ್ಲಿ ತಮ್ಮ ಪ್ರಾಮಾಣಿಕ ಅಭಿಪ್ರಾಯ ಸಲಹೆ ಸೂಚನೆ ನೀಡುವ ಪ್ರಯತ್ನ ಮಾಡಿದ್ದಾರೊ ಇಲ್ಲವೋ ಅದು ಬೇರೆ ಮಾತು. ಅದಕ್ಕಿಂತ ಅವರ ಮಾತು ತಮ್ಮ ಹೆಗ್ಗಳಿಕೆ ಮೆರೆಯುವ ಮತ್ತು ಒಪ್ಪಿಸುವ ಪ್ರಬಲ ವಿಧಾನ ಮಾದರಿಯಲ್ಲಿರುವುದೆ ಹೆಚ್ಚು. 
00
ಸಂಸ್ಕಾರ ಪ್ರಗತಿಪರ ವಿಚಾರಧಾರೆ ಪ್ರತಿಪಾದಿಸುವ ಕಾದಂಬರಿಯೆಂದೆ ಪ್ರಸಿದ್ಧ. ಅವರು ಈ ಕಾದಂಬರಿ ಬರೆದದ್ದು ಮಾತ್ರ ತಾವು ಮದುವೆಯಾಗುವ ಮುನ್ನ ಅಥವಾ ನಂತರದ ವರ್ಷದಲ್ಲಿ ಎಂಬುದು ಸ್ಪಷ್ಟವಿದೆ. ಅನಂತಮೂರ್ತಿ ಇಷ್ಟ ಪಟ್ಟಿದ್ದು ಮತ್ತು ಮದುವೆಯಾದದ್ದು ಕ್ರಿಶ್ಚಿಯನ್ ಕುಟುಂಬದ ಎಸ್ತರ್ ಅವರನ್ನು ಎಂಬುದು ಲೋಕಕ್ಕೆ ತಿಳಿದ ವಿಚಾರವೆ. ಸಂಪ್ರದಾಯಸ್ಥ ಶಿವಳ್ಳಿ ವೈಷ್ಣವ ಬ್ರಾಹ್ಮಣ ಕುಟುಂಬದಿಂದ ಬಂದ ಅನಂತಮೂರ್ತಿ ಆ ಸಮುದಾಯದ ಸಮರ್ಥ ಪುರುಷ ಪ್ರತಿನಿಧಿ ಎಂಬುದರಲ್ಲಿ ಎರಡು ಮಾತಿಲ್ಲ. ಇದರಿಂದ ತಮ್ಮ ಇಷ್ಟಾರ್ಥ ಸಾಧನೆಯ ಹಾದಿಯಲ್ಲಿ ಇಡೀ ಸ್ವಕುಲ ಸಮುದಾಯವನ್ನು ಎದುರಿಸಬೇಕಾದ ಸಂದರ್ಭ ಅವರಿಗೆ ಎದುರಾಯಿತು. ಅವರು ಅದನ್ನು ಎದುರಿಸಿದ ಬಗೆ ಮಾತ್ರ ಬೇರೆ ಬಗೆಯದು ಅಷ್ಟೇ. ಆಗ ಅವರಿಗೆ ತಮ್ಮ ಸಂಪ್ರದಾಯಸ್ಥ ಬ್ರಾಹ್ಮಣ ಸಮುದಾಯದ ಕರ್ಮಠ ಆಚಾರ ವಿಚಾರಗಳಲ್ಲಿ ಅಡಗಿರುವ ಕುಂದುಕೊರತೆಗಳು ಹೇಗೆ ಮಾನವ ಜನಾಂಗದೆದುರು ತಲೆತಗ್ಗಿಸುವಂಥಾದ್ದಾಗಿವೆ ಎಂದು ಕಂಡಿತು. ಅಷ್ಟೇಅಲ್ಲ ಆ ಸಮುದಾಯದ ಒಳಗಿನ ವ್ಯಕ್ತಿಯಾಗಿ, ಆ ಸಮುದಾಯ ಹೆಮ್ಮೆ ಪಡುವ ರೀತಿಯಲ್ಲಿ ಸುಧಾರಣೆಗೆ ಒಳಪಡಿಸುವ ಕ್ರಮವನ್ನೂ ಕೈಗೆತ್ತಿಕೊಂಡರು. ಆದರೆ ಅದನ್ನು ವಾಸ್ತವ ಜೀವನದಲ್ಲಿ ಅವರು ಪ್ರಯೋಗಕ್ಕೆ ಒಳಪಡಿಸಲಿಲ್ಲ. ಅದಕ್ಕೆ ಬಹುಶಹ ಸಂಪ್ರದಾಯಸ್ಥ ಬ್ರಾಹ್ಮಣ ಸಮಾಜದಿಂದ ಎದುರಾಗುವ ಪ್ರತಿರೋಧವನ್ನು ಎದುರಿಸಲು ಸಾಧ್ಯವಿಲ್ಲವೆಂಬ ವಾಸ್ತವ ಸತ್ಯದ ಮನವರಿಕೆ ಅವರಿಗಿದ್ದಿರಬಹುದು. ಅವರ ತುರ್ತು ಸಮಾಜ ಸುಧಾರಣೆ ಮಾಡುವುದು ಆಗಿರದೆ ಇದ್ದದ್ದು ಮತ್ತೊಂದು ಕಾರಣವೂ ಅಗಿದ್ದಿಬಹುದು. ಹಾಗಾಗಿ ಕಲ್ಪಿತ ಸಂಗತಿಗಳ  ನಿರೂಪಣೆಯೆಂದು ಸ್ವಸಮರ್ಥನೆಗೆ ಗಟ್ಟಿನೆಲವಾದ ಮತ್ತು ಎದುರಾಳಿಗಳಿಂದ ತಪ್ಪಿಸಿಕೊಳ್ಳಲು ಸುಲಭ ಜಾರುಬಂಡೆಯಾದ ಬರಹದ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಆ ಹೊತ್ತಿಗಾಗಲೇ ಶಿವಮೊಗ್ಗ ಜಿಲ್ಲೆ ಸಮಾಜವಾದಿ ಚಳವಳಿಯಿಂದ ಪ್ರಗತಿಪರ ವಿಚಾರ ಪ್ರತಿಪಾದಿಸುವ ಪ್ರದೇಶವಾಗಿ ಹೊರಹೊಮ್ಮಿತ್ತು. ತಮ್ಮ ಈ ನಡೆ ಜಿಲ್ಲೆಯ ಮತ್ತು ನಾಡಿನ ಎಲ್ಲ  ಪ್ರಗತಿಪರ ಚಿಂತಕರು ಮತ್ತು ಸಮಾಜವಾದಿ ಗುಂಗಿನಲ್ಲಿರುವರನ್ನು ತನ್ನ ಬೆಂಬಲಿಗರನ್ನಾಗಿ ಮಾಡುತ್ತದೆ ಎಂದು ಕೂಡ ಅವರ ಅರಿವಿಗೆ ತೋರಿತ್ತು. ಅಲ್ಲದೆ ತನ್ನ ಸ್ವಹಿತಾಸಕ್ತಿ ಸಾಧನೆಗಾಗಿ ತನ್ನ ಸಮುದಾಯದ ವಿರುದ್ಧ ವೈಚಾರಿಕವಾಗಿ ಬಂಡೇಳುವುದರಿಂದ ತಾನೊಬ್ಬ ಪ್ರಾಮಾಣಿಕವಾದ ಅಪ್ರಾಮಾಣಿಕನೆಂದು ಬಿಂಬಿತನಾಗದೆ ಒಬ್ಬ ಪ್ರಗತಿಪರ ಚಿಂತಕನಾಗಿ ಹೊರಹೊಮ್ಮಲು ಸಾಧ್ಯವೆಂಬ ಹೊಳಹು ಅವರನ್ನು ಸಂಸ್ಕಾರ ಬರೆಯುವ ಹಾದಿಯಲ್ಲಿ ಮುನ್ನೆಡೆಸಿತು. ಸಣ್ಣ ಕತೆಯ ರೂಪದಲ್ಲಿ ಘಟಶ್ರಾದ್ಧವೂ ರೂಪ ತಳೆಯಿತು. ಅನಂತಮೂರ್ತಿಯವರು ಅಂದುಕೊಂಡ ಹಾಗೆಯೇ ಎಲ್ಲವೂ ತಾಳೆ ಬಿದ್ದಿದ್ದರಿಂದ ಅವರ ಮದುವೆಗೆ ತಮ್ಮ ಕುಟುಂಬದೊಳಗೆ ವೈಯಕ್ತಿಕ ಮಟ್ಟದಲ್ಲಿ ವಿರೋಧಗಳು ಉಂಟಾಗಿದ್ದಿರಬಹುದೆ ಹೊರತು ಸಂಪ್ರದಾಯಸ್ಥ ಬ್ರಾಹ್ಮಣ ಸಮುದಾಯ ಅವರ ವಿರುದ್ಧ ತೊಡೆತಟ್ಟಿ ನಿಲ್ಲಲು ಯಾವ ವೈಚಾರಿಕ ಬಲವೂ ಇಲ್ಲದಂತಾಯಿತು.. ಹಾಗಾಗಿಯೆ ಅನಂತಮೂರ್ತಿ ತಮ್ಮ ಕಲಾಕೃತಿಗಳ ಮೂಲಕ ಅಭಿವ್ಯಕ್ತಿಸಿದ ಪ್ರಗತಿಪರ ವಿಚಾರಗಳು ಮೂಲದಲ್ಲಿಯೆ ಆಗಲೀ ನಂತರದಲ್ಲಿಯೆ ಆಗಲೀ ಧಾರ್ಮಿಕ ಪ್ರತಿವಾದಿತನದ ರೂಪವನ್ನೂ ಪಡೆಯಲಿಲ್ಲ. ಅದು ಸಮಾಜ ಸುಧಾರಣೆಯ ಸುಳ್ಳುಬರುಕಿಯೇ ಹೊರತು ಅದರ ಗಂಭೀರ ಸ್ವರೂಪ ಪಡೆದುಕೊಳ್ಳಲಾಗಲಿಲ್ಲ. ಇದರಿಂದಾಗಿ ಈ ವಿಚಾರಗಳು ಅವರ ಬೌದ್ಧಿಕ ಬೆಳವಣಿಗೆಯಲ್ಲಿ ಯಾವ ನೆಲೆಯನ್ನೂ ಪಡೆದುಕೊಳ್ಳದಿರುವುದು ಅಚ್ಚರಿಯಾಗುವುದಿಲ್ಲ. ಇದು ನಿಜ ಕ್ರಾಂತಿಯಲ್ಲ ಹುಸಿ ಕ್ರಾಂತಿ ಎಂಬುದನ್ನು ಅವರ ಭಾರತಿಪುರ ಕಾದಂಬರಿಯ ವಸ್ತು ನಿರ್ವಹಣ ಕ್ರಮದಲ್ಲೆ ನಿರೂಪಿತವಾಗಿರುವುದು ಈಗಾಗಲೇ ಚರ್ಚಿತವಾಗಿರುವ ವಿಷಯವೇ ಆಗಿದೆ. ತಮ್ಮ ಮೊದಲ ಕಾದಂಬರಿಯೆಂದು ಹೇಳಿಕೊಂಡಿರುವ ಮತ್ತು ಇತ್ತೀಚೆಗಷ್ಟೆ ಪ್ರಕಟವಾಗಿರುವ ಕಾದಂಬರಿಯಲ್ಲಿ ತಮ್ಮ ವೈಯಕ್ತಿಕ ಜೀವನದ ಈ ಕಾಲ ಘಟ್ಟದ  ತಾಕಲಾಟಗಳ ಎಳೆ ಇರುವುದೆಂದು ಹೇಳಲಾಗಿದೆ. ಈ ಕೃತಿಯೇಕೆ ಬರೆದ ವರ್ಷದಲ್ಲೆ ಪ್ರಕಟವಾಗಲಿಲ್ಲೆಂಬುದು ಈ ಹಿನ್ನೆಲೆಯಲ್ಲಿಯೆ ನೋಡಬೇಕು.
 
ಶಿವಮೊಗ್ಗ ಜಿಲ್ಲೆಯ ಸಮಾಜವಾದಿ ಚಳವಳಿಯಿಂದ ಹುಟ್ಟಿದ ಜನನಾಯಕ ಗೋಪಾಲಗೌಡರ ಜೀವನ ಸಾಧನೆ ಬಿಂಬಿಸುವ ಕಾದಂಬರಿಯೆಂದು ಅವಸ್ಥೆ ಕುರಿತು ಹೇಳಲಾಗಿದೆ. ಅದು ಗೋಪಾಲಗೌಡರ ಜೀವನವನ್ನು ಚಿತ್ರಿಸುತ್ತದೆಯೋ ಅವರ ಜೀವನದ ವಿಕೃತ ರೂಪವನ್ನು ಕಟ್ಟಿಕೊಡುತ್ತದೆಯೋ? ಲಕ್ವ ಹೊಡೆದ ನಾಯಕನ ಸ್ಥಿತಿ ಸಮಾಜವಾದಿ ಚಳವಳಿ ಮತ್ತು ಅದರ ವಿಚಾರಧಾರೆಗಳು ತಲುಪಿದ ರೋಗಗ್ರಸ್ತವಾದ  ಅಸಹಾಯಕ ಸ್ಥಿತಿಯನ್ನು ಬಿಂಬಿಸುತ್ತದೆ. ಎಡವಾದಿ ಕಾರ್ಯಕರ್ತರು ಮತ್ತು ಸಂಘಟನೆಯ ದಾರುಣ ಸ್ಥಿತಿಯ ಚಿತ್ರಣ ಆ ಕುರಿತ ಲೇಖಕರ ಸಹಾನುಭೂತಿ ಯಾರ ಪರವೆಂದು ನಿರೂಪಿಸುತ್ತದೆ. ಅಲೌಕಿಕ ಶಕ್ತಿಯ ಮುದುಕನೊಬ್ಬನ ಪಾತ್ರ ಚಿತ್ರಣದ ಮುಂದೆ ನಾಯಕನ ಪಾತ್ರ ಚಿತ್ರಣ ಪೇಲವವಾಗಿದೆ. ನಾಯಕ ಮತ್ತು ಆತನ ಸಂಪರ್ಕಕ್ಕೆ ಬರುವ ಹೆಣ್ಣಿನ ಪಾತ್ರದೊಂದಿಗೆ ನಡೆಯುವ ವೈಯಕ್ತಿಕ ಜೀವನದ ವಿವರಗಳು ಲೇಖಕರು ತಮ್ಮ ತೆವಲುಗಳನ್ನು ನಾಯಕನಿಗೆ ಆರೋಪಿಸಿ ಚಿತ್ರಿಸಿದಂತೆ ಇದೆ. ಇದು ಗೋಪಾಲಗೌಡರ ವ್ಯಕ್ತಿತ್ವಕ್ಕೆ ಮಸಿ ಬಳಿದ ರೀತಿಯಲ್ಲದೆ ಬೇರೆಯಲ್ಲ. ತಮ್ಮ ಭವ ಕಾದಂಬರಿಯ ಮೂಲಕ ಅನಂತಮೂರ್ತಿಯವರಂತೂ ವೈಯಕ್ತಿಕ ತೀಟೆ ತೆವಲುಗಳನ್ನು ಕಾದಂಬರಿ ಹೆಸರಿನಲ್ಲಿ ಬರೆದುಕೊಂಡಿರುವ ಎಸ್ ಎಲ್ ಭೈರಪ್ಪ ಅವರಿಗೆ ಯಾವ ರೀತಿಯಲ್ಲೂ ಅಸಮಾನರೆಂದು ಹೇಳಲು ಬರುವುದಿಲ್ಲ.
00
ಬನ್ನಾಡಿ ನಿರೂಪಿಸಿರುವ ಅನಂತಮೂರ್ತಿಯವರ ಸಾಂಸ್ಕೃತಿಕ ವಲಯದ ಪಾತ್ರವಾಗಲೀ ಅವರ ವೈಯಕ್ತಿಕ ಜೀವನದ ಪಾತ್ರವಾಗಲೀ ಅವರು ತಮ್ಮ ಕಲಾಕೃತಿಗಳ ಮೂಲಕ ಚಿತ್ರಿಸಿರುವ ವಿಚಾರಗಳಾಗಲೀ  `ಪ್ರಾಮಾಣಿಕವಾದ ಅಪ್ರಾಮಾಣಿಕತೆ'ಯೇ ಆಗಿದೆ. ಅನಂತಮೂರ್ತಿ ಅಭಿವ್ಯಕ್ತಿಸಿರುವ ಸಮುದಾಯ ಪರವಾದ  ಹಿತಾಸಕ್ತಿಗಳೆಲ್ಲ ಕೊನೆ ಕಂಡಿರುವುದು ಸ್ವಹಿತಾಸಕ್ತಿಯಲ್ಲಿಯೆ ಎಂಬುದು ಸಾಧಿತವಾಗಬೇಕಾದ ಪ್ರಮೇಯವಾಗುಳಿದಿಲ್ಲ. ಅನಂತಮೂರ್ತಿಯವರು ತಮ್ಮ ಗುರಿ ಸಾಧನೆಗೆ ಬಳಸುವ ವಿಧಾನ ಕ್ರಮ ಮತ್ತೊಬ್ಬರನ್ನು ದಾರಿತಪ್ಪಿಸಿ ವೈಯಕ್ತಿಕ ಸ್ವಾರ್ಥ ಸಾಧಿಸುವ ಬಳಸು ಮಾರ್ಗವಾಗಿದೆ. ಅದು ಮುಖವಾಡ ಧರಿಸಿದ ಮಾದರಿಯದು. ಸುಳ್ಳು ಬುರುಕಿ ಹಾಕಿಕೊಂಡಿರುವ ಸೋಗು ಸಂಸ್ಕೃತಿಯ ರೀತಿಯದೂ ಆಗಿದೆ. ಈ ಸೋಗು ಸಂಸ್ಕೃತಿ ತನ್ನ ಕಪಟತನ, ತರತಮ ನೀತಿ, ಶ್ರೇಷ್ಟ-ನೀಚ ಕಲ್ಪನೆ ಮಾತ್ರವಲ್ಲದೆ ಅನ್ಯ ಸಮುದಾಯಗಳ ಸಾಮರ್ಥ್ಯವನ್ನು ತಾನು ಕದಿಯುತ್ತ ಅನ್ಯ ಸಮುದಾಯದ ದೌರ್ಬಲ್ಯವನ್ನು ತಾನೇ ಹೆಚ್ಚಿಸುತ್ತ  ಎಲ್ಲ ಕಾಲಗಳಲ್ಲೂ ಬಹುಸಮುದಾಯಗಳ ಮೇಲೆ `ಪ್ರಾಮಾಣಿಕವಾದ ಅಪ್ರಾಮಾಣಿಕತನ'ದಿಂದ ಸವಾರಿ ಮಾಡಿಕೊಂಡು ಬಂದಿರುವ ಮೇಲು ಸಮುದಾಯದ ಕೇಂದ್ರ ಬಿಂದುವಾಗಿದೆ. ಅದರ ಮೂಲದಿಂದ ಬಂದಿರುವ ಅನಂತಮೂರ್ತಿ ಅದರ ಪ್ರತಿನಿಧಿ ಮತ್ತು ಪ್ರತೀಕವಾಗಿರುವುದು ಬೆರಗೇನೂ ಅಲ್ಲ. ಅನಂತಮೂರ್ತಿ ಕಾಲದಿಂದ ಕಾಲಕ್ಕೆ ಮಂಡಿಸಿದ ನಡತೆಗೆಟ್ಟ ಹುಸಿ ವಿಚಾರ ಚಿಂತನೆಗಳನ್ನು ಮಾನ್ಯ ಮಾಡುತ್ತ ಅವರನ್ನು ಅವರ ಸೋಗು ಸಂಸ್ಕೃತಿಯ ಹಿರಿಮೆಗಾಗಿ ಸೋಗು ಸಂಸ್ಕೃತಿಯೆಂದು ಅರಿಯದೆ ಮಣೆ ಹಾಕುತ್ತ ಬಂದಿರುವ ನಾವಷ್ಟೇ ಮೂರ್ಖರೂ ದಡ್ಡರೂ ಆಗಿರುವುದು; ಅಷ್ಟೇ ಅಲ್ಲ ಕುವೆಂಪು ಅಥವಾ ಕಂಬಾರರನ್ನು ಒಬ್ಬ ಶೂದ್ರ ಲೇಖಕನೆಂದು ಹೆಮ್ಮೆ ಪಡುವಷ್ಟೇ ದಾರುಣವೂ ದುರಂತವೂ ಆಗಿದೆ.