ಭಾನುವಾರ, ಮೇ 8, 2011

ಅನುಭವದ ಮಾತು

ಭಕ್ತರ ಸಮೂಹದಲ್ಲಿ ದೈವ ಮಾನವನೆಂದು ನಂಬಲಾಗಿದ್ದ ಸತ್ಯಸಾಯಿ ಬಾಬಾ ಅವರು ಕಳೆದ ವಾರ ಮರಣ ಹೊಂದಿ ನರಮಾನವರ ಜಗತ್ತನ್ನು ತೊರೆದ ನಂತರ ಕನ್ನಡದ ಕವಿಗಳೂ ಅನುಭಾವಿಗಳೆಂದೂ ಪ್ರಸಿದ್ಧರಾದ ಡಾ. ಎಚ್ .ಎಸ್.ಶಿವಪ್ರಕಾಶ್ ಅವರು ಪ್ರಜಾವಾಣಿಯಲ್ಲಿ 'ಮಹಾತ್ಮರೂ ಮನುಷ್ಯರೂ ಮರ್ತ್ಯರೂ' ಎಂಬ ಹೆಸರಿನ ಲೇಖನವನ್ನು ಅನುಸಂಧಾನ ಅಂಕಣದಲ್ಲಿ ಬರೆದರು. ನಾನು ಬೆಂಗಳೂರಿನಲ್ಲಿದ್ದ 1991ರಿಂದ1996ರ ಕೆಲಕಾಲ ಅವರ ನಿಕಟವರ್ತಿಯಾಗಿದ್ದೆ.  ಆ ಕಾಲಾವಧಿಯಲ್ಲಿ  ಅವರು ನನಗೆ ಹಲವು ಬಗೆಯಲ್ಲಿ ನೆರವು ನೀಡಿದ್ದಾರೆ.ನನ್ನ ಹಲವು ಸಮಸ್ಯೆಯಿಂದ ಹೊರಬರಲು ನನಗವರು ನೈತಿಕ ಸ್ಥೈರ್ಯ ನೀಡಿದ್ದಾರೆ. ಅನುಭಾವದ ಹಾದಿಯಲ್ಲಿ ಕ್ರಮಿಸಬೇಕಾದ ಕ್ರಮವನ್ನು ತಿಳಿಸಿ ಹೇಳಿದ್ದಾರೆ. ಅವರು ದೆಹಲಿಗೆ ಹೋದ ನಂತರ ಅವರೊಂದಿಗೆ ನಿಕಟ ಸಂಪರ್ಕ ಸಾಧ್ಯವಾಗಿಲ್ಲವಾದರೂ ಅವರ ಬಗ್ಗೆ ಗೌರವವಿದೆ. ಅವರ ಈ ಲೇಖನ ಓದಿದ ಮೇಲೆ ಅವರು ಅನುಸರಿಸಿರುವ ಬರೆಹದ ಭಿನ್ನ ಶೈಲಿ, ವಿಧಾನದ ಬಗ್ಗೆ ಬೆರಗಾಗಿದ್ದೇನೆ. ಹಲವು ಸಲ ಅವರ ಈ ಬರೆಹ ನನ್ನ ಮನಸ್ಸಿನಲ್ಲಿ ಸುಸುಳಿ ನೆನಪಿನಲ್ಲಿ ಮೇಲೆದ್ದು ಬಂದಿದೆ. ಒಂದು ವಾರದ ನಂತರ ಇಂದು ಬೆಳಗಿನ ಜಾವ ನನ್ನ ಮನಸ್ಸಿಗೆ ಬಂದ ಸಾಲುಗಳನ್ನು ಸ್ವಲ್ಪ ಹೊತ್ತಿನ ಮುಂಚೆ ಹೀಗೆ ಬರೆದಿಟ್ಟಿದ್ದೇನೆ. ಇದನ್ನು ಸುಮ್ಮನೆ ನಿಮ್ಮ ಮುಂದೆ ಇರಿಸುತ್ತಿದ್ದೇನೆ.
#





ಸಾವಿನ ಹೆದರಿಕೆಯ ನೆರಳಲ್ಲಿ
ಅರಳಿದ ಪರಿಮಳದ ಹೂವೆಂದು
ನಂಬಿಸಿದ ಸಂತರು ಮಹಾತ್ಮರು

ನಂಬಿಕೆಯ ನೀರಲ್ಲಿ ಮುಳುಗಿ
ಆ ನೀರೆ ಹಾಲೆಂದು ನಂಬಿ ಕುಡಿದ
ನರ ಕುನ್ನಿಗಳು ಮನುಷ್ಯರು

ಕ್ರಿಮಿಕೀಟಾದಿ ಸಸ್ಯ ಲೋಕ
ತನ್ನಂತೆ ಜನಮನ ಪ್ರೀತಿಸಿ
ಬೆದರದೆ ಸತ್ತವರು ಮರ್ತ್ಯರು

ಶಿವಪ್ರಕಾಶರ ಆನುಭವದ ವಾಣಿ
ಜಗದ ಕಣ್ಣಲ್ಲಿ ಅನುಭಾವಿ
ತನಗೆ ತಾನೇ ಶಿವಯೋಗಿ

2 ಕಾಮೆಂಟ್‌ಗಳು:

niranjana ಹೇಳಿದರು...

Dear sir i am sincier reader of NUDIGANNU but i can't reaply in kannada because of kannada typinng thank u

parasurama kalal ಹೇಳಿದರು...

ಶಿವ ಪ್ರಕಾಶ್‌ರ ಬಗ್ಗೆ ಚೆಂದ ಬರೆದಿದ್ದೀರಿ. ’ಸುಳಿವ ಜಾಡು’ ಅರ್ಥಪ್ರರ್ಣ ಹೆಸರು. ಕವಿತೆಯೂ ಬರೆಯುತ್ತೀರಿ ಎಂದು ಗೊತ್ತಾಗಿ ಸಂತಸವಾಯಿತು. ಒಳಗೊಳಗತ್ತ ಪ್ರತಿಭೆ ನಿಮ್ಮದು.