ಬುಧವಾರ, ಜುಲೈ 20, 2011

ಸರಕಾರಿ ಶಾಲೆಗಳು ಮುಚ್ಚುತ್ತಿವೆ. ಏಕೆ?

ಕನ್ನಡ ಶಾಲೆಗಳು ಮುಚ್ಚಿಹೋಗುತ್ತಿರುವ ಸುದ್ದಿ ಕಳೆದ 2011ರ ಜುಲೈ ತಿಂಗಳಿನಲ್ಲಿ ಪ್ರಕಟವಾದ ನಂತರ ಈ ಕುರಿತು ಸಾಕಷ್ಟು ವ್ಯಾಪಕವಾಗಿ ಚರ್ಚೆ ನಡೆದಿದೆ. ಅವಸಾನದ ಹಾದಿ ಹಿಡಿದಿರುವ ವಿಶ್ವದ ಹಲವು ಭಾಷೆಗಳಲ್ಲಿ ಕನ್ನಡವೂ ಒಂದೆಂಬ ವಿಶ್ವಸಂಸ್ಥೆಯ ವರದಿ ಪ್ರಕಟವಾದ ನಂತರದಲ್ಲಿ ಇದು ಕನ್ನಡಿಗರನ್ನು  ಆತಂಕಕ್ಕೆ ದೂಡಿತು. ಕನ್ನಡ ಶಾಲೆಗಳ ಸ್ಥಿತಿಗತಿಗಳನ್ನು ಸುಧಾರಿಸುವ ಬಗ್ಗೆ, ಈ ದಿಕ್ಕಿನಲ್ಲಿ ಸರಕಾರ ವಹಿಸಬೇಕಾದ ಪಾತ್ರದ ಬಗ್ಗೆ ಪುಂಖಾನುಪುಂಖವಾಗಿ ಪುಕ್ಕಟೆ ಸಲಹೆ ಸೂಚನೆಗಳು ವ್ಯಕ್ತವಾಗಿವೆ. ಇವನ್ನು ಮೂರು ವಿಧವಾಗಿ ಗುರುತಿಸಬಹುದು. 1. ಕನ್ನಡ ಪರ ಸಂಘ ಸಂಸ್ಥೆಗಳು ಮತ್ತು ಕನ್ನಡ ಪರ ಚಿಂತಕರ ವೇದಿಕೆಗಳು ಕನ್ನಡದ ಆತಂಕವನ್ನು ತಮ್ಮ ಅಳಿವು ಉಳಿವಿನ ಪ್ರಶ್ನೆಯಾಗಿ ಕೈಗೆತ್ತಿಕೊಂಡಿದ್ದು, ಮತ್ತು ಕನ್ನಡ ಜಾಗೃತಿ ಮೂಡಿಸುವ ಕೆಲಸದಲ್ಲಿ ತಮ್ಮನ್ನೇ ಬಿಂಬಿಸಿಕೊಂಡು ಸ್ವಾಭಿಮಾನದ ಹೆಸರಿನಲ್ಲಿ ವಿವೇಚನಾರಹಿತ ದುರಭಿಮಾನ ವ್ಯಕ್ತಪಡಿಸಿದ್ದು.  2. ದೇಶಭಾಷೆ (ಕನ್ನಡ)ಅಭಿವೃದ್ಧಿ ಪರ ಚಿಂತನೆ ಕುರಿತು; ಉದಾಹರಣೆಗೆ-ಕನ್ನಡಿಗರಿಗೆ ಅಪ್ಪಟ ಕನ್ನಡ ಕಲಿಸುವ ಅಗತ್ಯ, ಗುಣಮಟ್ಟದ ಶಿಕ್ಷಣ, ಕನ್ನಡ ಮಾಧ್ಯಮದಲ್ಲೆ ಉನ್ನತ ಮತ್ತು ತಾಂತ್ರಿಕ ಶಿಕ್ಷಣದ ಆದ್ಯತೆ ಮೊದಲಾಗಿ ಮೇಲುಮಟ್ಟದ ತಾತ್ವಿಕ ಚರ್ಚೆ ಪ್ರಸಕ್ತ ಸಮಸ್ಯೆಯ ವಾಸ್ತವ ಸ್ಥಿತಿಗಳನ್ನು ಆಧರಿಸದೆ ಹೋದದ್ದು. 3. ಕನ್ನಡ ಅಭಿವೃದ್ಧಿಯ ಭಾಗವಾಗಿಯೆ ಇಂಗ್ಲಿಶ್ ಕಲಿಕೆಯ ಅಗತ್ಯತೆ ಪ್ರತಿಪಾದಿಸುವ ಅಭಿಪ್ರಾಯಗಳು ಇತ್ತೀಚೆಗೆ ಒಡಮೂಡತೊಡಗಿದ್ದು.
ಈ ನಡುವೆ ಸರಕಾರಿ ಪ್ರಾಥಮಿಕ ಶಾಲೆಯ ಮಟ್ಟದಲ್ಲಿಯೆ ಇಂಗ್ಲಿಶ್ ಕಲಿಸುವ ಉತ್ಸಾಹ ಪ್ರಕಟಿಸಿದ್ದ ಸರಕಾರ, ಮುಚ್ಚುತ್ತಿರುವ ಶಾಲೆಗಳ ಕುರಿತ ಚರ್ಚೆ ತಾರಕಕ್ಕೇರಿದಂತೆ ವಿಲೀನಗೊಳಿಸುವ ಕಾರ್ಯಕ್ರಮ ಮುಂದಿಟ್ಟು ಗೊಂದಲಕ್ಕೆ ಒಳಗಾಯಿತು. ಆಗ ಈ ಯಾವ ಕ್ರಮಗಳನ್ನು ತೆಗೆದುಕೊಳ್ಳದೆ ಸರಕಾರ ಶಾಲೆಗಳ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ನ್ಯಾಯಾಲಯ ಸೂಚಿಸಿತು. ಇದರಿಂದ ಸರಕಾರ ತನ್ನ ಮತ್ತು ಕನ್ನಡ ಪರ ಇಮೇಜನ್ನು ಉಳಿಸಿಕೊಳ್ಳುವ ಅವಸರದಲ್ಲಿ ತೆಗೆದುಕೊಳ್ಳುವ ಅಪಾಯಕಾರಿ ನಿಲುವನ್ನು ತಡೆಗಟ್ಟಿದಂತಾಗಿದೆ.
ಆದರೂ ಇವೆಲ್ಲವೂ ಸರಕಾರಿ ಕನ್ನಡ ಶಾಲೆಗಳು ಮುಚ್ಚುವ ಹಂತ ತಲುಪಿದ ಮೂಲ ಸಮಸ್ಯೆಯನ್ನು ಕಂಡುಕೊಂಡು ನಡೆಸಿದ ಕಾರ್ಯವಿಧಾನ ಎನ್ನುವಂತಿಲ್ಲ.     
ಸಾಂಸ್ಕೃತಿಕ ರಾಜಕಾರಣ
ಸಮಾಜದ ಬಡ ಮತ್ತು ಕೆಳ ಸಮುದಾಯಗಳಿಗೆ ಬಹುಪಾಲು ಸೀಮೀತವಾಗಿರುವ ಈಗಿನ ಸರಕಾರಿ ಶಾಲೆಗಳು ಸಮಾನ ಅವಕಾಶ ಕಲ್ಪಿಸುವ ಇಂದಿನ ಅಗತ್ಯ ಬೇಡಿಕೆಯನ್ನು ಪೂರೈಸುವ ಮಟ್ಟದಲ್ಲಿಲ್ಲ  ಎಂಬ ಆರೋಪ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿಯೆ ಸರಕಾರ ಇಂಗ್ಲಿಶ್  ಕಲಿಸುವ ನಿರ್ಧಾರ ಪ್ರಕಟಿಸಿದ್ದು ಕೂಡ. ಸಮಾಜದ ಬಡ ಮತ್ತು ಕೆಳ ಸಮುದಾಯಗಳಿಗೆ ಇಂಗ್ಲಿಶ್ ಕಲಿಯುವ ಅವಕಾಶವನ್ನು ಸಕಲ ಸೌಲಭ್ಯ ಹೊಂದಿರುವ ಮೇಲು ವರ್ಗಗಳು ವಿರೋಧಿಸುವ ಮೂಲಕ ಕನ್ನಡ ಅವನತಿಯ ಬಗ್ಗೆ ಗುಲ್ಲೆಬ್ಬಿಸುತ್ತಿವೆ ಎಂದು ಹೇಳಲಾಗಿದೆ. ಇದು ಕನ್ನಡ ಹೆಸರಿನಲ್ಲಿ ಸಮಾಜದ ಬಹು ಸಮುದಾಯಗಳ ನಡುವೆ ನಡೆಯುತ್ತಿರುವ ಸ್ವ ಕೇಂದ್ರಿತ ರಾಜಕಾರಣವಷ್ಟೆ. ಈ ಮನಸ್ಥಿತಿ ವಾಸ್ತವ ಸಾಂಸ್ಕೃತಿಕ ರಾಜಕಾರಣಕ್ಕೆ ದೂರವೆಂದು ಹೇಳಲು ಆಗದಿದ್ದರೂ ಸರಕಾರಿ ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿ ತಲುಪಲು ಕಾರಣವೆಂದು ಗುರುತಿಸಲಾಗದು.
ಈಗಿನ ಶಿಕ್ಷಣ ಪರಿಸ್ಥಿತಿ
ಶೈಕ್ಷಣಿಕ ಸಂಸ್ಥೆಯೊಂದರ ಉತ್ತಮ ಫಲಿತಾಂಶ ಆ ಸಂಸ್ಥೆಯಲ್ಲಿರುವ ಉತ್ತಮ  ಶೈಕ್ಷಣಿಕ ಗುಣಮಟ್ಟದ ಸಂಕೇತವೆಂದು ನಂಬಿಸಲಾಗಿದೆ. ಹಾಗೆಯೇ ಉತ್ತಮ ಫಲಿತಾಂಶ ಪಡೆಯುವ ಸಲುವಾಗಿ ಪರೀಕ್ಷೆಗಳಲ್ಲಿ ನಕಲು ಮಾಡಲು ನೇರವಾಗಿ ಉತ್ತೇಜಿಸಲಾಗುತ್ತಿದೆ. ಇದು ಸರಕಾರಿ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳೆಲ್ಲವಕ್ಕೂ ಅನ್ವಯವಾಗುವ ಅಂಶ. ಇದಕ್ಕೆ ಶಿಕ್ಷಣದ ಮುಖ್ಯ ಗುರಿ ಪರೀಕ್ಷೆ ಮತ್ತು ಫಲಿತಾಂಶ ಕೇಂದ್ರಿತವಾಗಿರುವುದೂ ಕಾರಣವಾಗಿದೆ. ಉದ್ಯೋಗ ನಿಮಿತ್ತ ಅಧ್ಯಾಪಕರಾದವರು ತಮ್ಮ ಜವಾಬ್ದಾರಿ ಮರೆತು ಸೋಮಾರಿಗಳಾಗಿದ್ದಾರೆ. ತಮ್ಮನ್ನು ರಕ್ಷಿಸಿಕೊಳ್ಳಲು ನಕಲು ಮಾಡಿಸಿ ಫಲಿತಾಂಶ ಪಡೆಯುವ ಮಾರ್ಗ ಅನುಸರಿಸಿದ್ದಾರೆ. ಹಾಗಾಗಿ ನಕಲು ಅಕ್ಷರ ಕಲಿಸದ ಅಧ್ಯಾಪಕರ ಮತ್ತು ಕಲಿಯದ ಮಕ್ಕಳಿಗೆ ಅತ್ಯುತ್ತಮವಾಗಿ ಸಹಾಯಕ್ಕೆ ಬಂದಿದೆ.
ಕಲಿಯುವ ಕಲಿಸುವ ಆಸಕ್ತಿಯನ್ನು ತಮ್ಮ ಪ್ರವೃತ್ತಿಯನ್ನಾಗಿ ಮಾಡಿಕೊಂಡಿರದ ಈ ಶಿಕ್ಷಕ ವರ್ಗ ತಮ್ಮ ಹುಟ್ಟೂರಿಗೆ ವರ್ಗಾವಣೆ ಮಾಡಿಸಿಕೊಂಡು ಕೃಷಿ ಚಟುಟಿಕೆಯಲ್ಲಿ ತೊಡಗಿಸಿಕೊಳ್ಳುವುದು, ಇಲ್ಲ ಚೀಟಿ ವ್ಯವಹಾರ, ಅಂಗಡಿ ವ್ಯವಹಾರಗಳಲ್ಲಿ ನಿರತರಾಗುವುದು ಮುಂತಾದ ಗಳಿಕೆಯ ಇತರ ಕಾರ್ಯಗಳಲ್ಲಿ ಕಳೆದುಹೋಗಿದ್ದಾರೆ. ಕಾಲೇಜು ಮತ್ತು ಉನ್ನತ ಶಿಕ್ಷಣದಲ್ಲೂ ನಿರಾಸಕ್ತ ಅಧ್ಯಾಪಕ ವರ್ಗ ಮನೆಪಾಠ, ಚೀಟಿ ಮತ್ತಿತರ ವ್ಯವಹಾರಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದು  ಇಲ್ಲವೆ ಶಿಕ್ಷಣೇತರ ಹುದ್ದೆಗಳಿಗೆ ತಮ್ಮನ್ನು ನಿಯುಕ್ತಿ ಮಾಡಿಸಿಕೊಳ್ಳುವುದು ನಡೆಯುತ್ತಿದೆ. ಅಂದರೆ ಉಪಭೋಗ ಜೀವನ ನಡೆಸಲು ಅಗತ್ಯವಾದ ಸಂಪತ್ತಿನ ಶೇಖರಣೆಯಲ್ಲಿ ಶಿಕ್ಷಕ ವರ್ಗ ಮೈಮರೆತಿದೆ.
ಇದು ಸ.ರಘುನಾಥರಂಥ ಅತ್ಯುತ್ತಮ ಕ್ರಿಯಾಶೀಲ ಶಿಕ್ಷಕ ವರ್ಗ ಕಾಣೆಯಾಗುತ್ತಿರುವ ದ್ಯೋತಕವಾಗಿದೆ.

ಪ್ರಾಥಮಿಕ ಹಂತದಲ್ಲಿ ಅಕ್ಷರ ಕಲಿಯದೆ, ನಪಾಸಾಗದೆ ಮಾಧ್ಯಮಿಕ ಹಂತ ತಲುಪಿದ  ವಿದ್ಯಾರ್ಥಿಗೆ ಆ ಹಂತ ಕಲಿಕೆಯ ಮೇಲಿನ ಹಂತವಾಗುತ್ತದೆ. ಅವನಿಗೆ ಮಾಧ್ಯಮಿಕ ಹಂತದಲ್ಲೆ ಕಲಿಯುವಿಕೆ ಅಸಾಮಾನ್ಯವಾಗಿಬಿಡುತ್ತದೆ. ಆತ ಕಲಿಯುವ ಪ್ರಯತ್ನ ಮಾಡದೆ ಅಕ್ಷರಗಳ ಪರಿಚಯದೊಂದಿಗೆ ಪ್ರೌಢಶಾಲೆಯ ಮೆಟ್ಟಿಲು ಏರುತ್ತಾನೆ. ವಿದ್ಯಾರ್ಥಿಯ ಕಲಿಕೆ ಮತ್ತು ವಿಷಯ ಗ್ರಹಿಕೆಯ ಮಟ್ಟಕ್ಕೂ ಪ್ರೌಢ ಮಟ್ಟದ ಪಠ್ಯ ವಿಷಯ ಮತ್ತು ನಿರೂಪಣೆಗಳ ನಡುವೆ ಅಂತರ ಉಂಟಾಗಿ ಕಲಿಕೆಯ ಪ್ರಕ್ರಿಯೆ ಮುರುಟುತ್ತ ಹೋಗುತ್ತದೆ ಮತ್ತು ಪ್ರಾಮಾಣಿಕ ಅಧ್ಯಾಪಕರು ಕಲಿಕೆಯ ತರಬೇತು ನೀಡುವ ಹಂತವನ್ನೂ ಮೀರುತ್ತದೆ. ಪರೀಕ್ಷೆ ಮತ್ತು ಫಲಿತಾಂಶ ಕೇಂದ್ರಿತ ಶಿಕ್ಷಣ ವ್ಯವಸ್ಥೆಯಲ್ಲಿ ಅಧ್ಯಾಪಕರಿಗೂ ವಿದ್ಯಾರ್ಥಿಗಳಿಗೂ ಪರೀಕ್ಷೆಯಲ್ಲಿ ನಕಲು ಮಾಡುವುದು ಅನಿವಾರ್ಯವಾಗಿಹೋಗಿದೆ.ಹಾಗಾಗಿಯೇ ಅವರಿಬ್ಬರ ನಡುವೆ ಸುಪ್ತ ಒಪ್ಪಂದ ಏರ್ಪಡುತ್ತದೆ. ಕಲಿಯದೆಯೂ ನಪಾಸಾಗದೆ ಇರುವ ಈ ಕಲೆ ವ್ಯಕ್ತಿಯ ಜೀವನದಲ್ಲಿ ಉತ್ತಮ ವಿದ್ಯಾವಂತನೆಂಬ ಸರ್ಟಿಫೀಕೇಟನ್ನು ತಂದುಕೊಡುತ್ತದೆ.
ವಿದ್ಯೆಯನ್ನು ಕಲಿಯದೆಯೆ ಅಡ್ಡ ಮತ್ತು ಸುಲಭದ ದಾರಿಯಲ್ಲಿ ಸರ್ಟಿಫಿಕೇಟುಗಳನ್ನು ಪಡೆದ ನಂತರದಲ್ಲಿ ಈ ಸರ್ಟಿಪೀಕೇಟುಗಳು ಉದ್ಯೋಗಕ್ಕಾಗಿ ಬೇಟೆ ನಡೆಸಲು ಅಗತ್ಯವಾದ ಆತ್ಮವಿಶ್ವಾಸ, ಉತ್ಸಾಹ, ಹುಮ್ಮಸ್ಸು ತಂದುಕೊಡುತ್ತದೆ. ಉದ್ಯೋಗ ಪಡೆಯಲು ವಿದ್ಯಾರ್ಹತೆ ನೆಪ ಮಾತ್ರವಾಗಿದ್ದು, ಹಣ ಮತ್ತು ರಾಜಕೀಯ ಶಿಫಾರಸ್ಸಿನ ಬಲ ಪ್ರಮುಖ ಪಾತ್ರ ವಹಿಸುತ್ತಿವೆ.  ಮುಂದಿನ ಜೀವನದಲ್ಲಿ  ಹಣ ಗಳಿಸುವುದು ಅತ್ಯಗತ್ಯ ಮತ್ತು ಜರೂರಿನದಾಗಿದ್ದು ಅದಕ್ಕಾಗಿ ನೌಕರಿಯೊಂದನ್ನು ಸರ್ವ ಪ್ರಯತ್ನಗಳೊಂದಿಗೆ ಪಡೆಯಲಾಗುತ್ತದೆ. ಇಂಥ ಅಭ್ಯರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ವಿವಿಧ ಮಟ್ಟಗಳಲ್ಲಿ ಅಧ್ಯಾಪಕರಾಗಿಯೂ ನೇಮಕವಾಗುತ್ತಾರೆ. ಈ ಅಧ್ಯಾಪಕರು ತಾವೇ ಸರಿಯಾಗಿ ಕಲಿಯದಿದ್ದವರು, ಇನ್ನೂ ಶಾಲೆಗೆ ಬರುವ ಮಕ್ಕಳಿಗೆ ಕಲಿಸುವ ಮಾತು ದೂರವೇ ಉಳಿಯುತ್ತದೆ. ಶಾಲೆಗೆ ಸೇರಿದ ಮಕ್ಕಳ ಹೆಸರನ್ನು ಕಾಗುಣಿತ ತಪ್ಪಿಲ್ಲದೆ ಬರೆಯಲು ಬರದ ಅಧ್ಯಾಪಕರ ದೊಡ್ಡ ಸಂಖ್ಯೆಯೇ ಇಂದು ಪ್ರಾಥಮಿಕ ಶಾಲೆಗಳಲ್ಲಿ ಇರುವುದು ಮಕ್ಕಳ ದುರಾದೃಷ್ಟ. ನನ್ನ ವೈಯಕ್ತಿಕ ಅನುಭವದಲ್ಲಿ ಹೇಳುವುದಾದರೆ, ಇಂಥ ಅಧ್ಯಾಪಕರೊಬ್ಬರು ಹಿರಿಯ ಅಧ್ಯಾಪಕರೆನಿಸಿ ಮುಖ್ಯೋಪಾಧ್ಯಾಯರಾಗಿ ಸಾಕಷ್ಟು ಕಾಲ ಸೇವೆ ಸಲ್ಲಿಸಿ ಮಕ್ಕಳ ಹೆಸರನ್ನು ದಾಖಲಾತಿ ಪುಸ್ತಕದಲ್ಲಿ ಸರಿಯಾಗಿ ನಮೂದಿಸದೆ ತದ ನಂತರದಲ್ಲಿ ತಿದ್ದಲೂ ಸಿದ್ಧವಿಲ್ಲದೆ ಆ ಮಕ್ಕಳ ಜೀವನದಲ್ಲಿ ಕಂಟಕರಾಗಿ ನಿಂತಿದ್ದಾರೆ, ಸರಕಾರಿ ಶಾಲೆಯಲ್ಲಿ ಇಂಥ ಅಧ್ಯಾಪಕರಿಂದ ಮಕ್ಕಳು ಏನನ್ನು ತಾನೇ ಕಲಿಯಲು ಸಾಧ್ಯ?
ಅಕ್ಷರ ಕಲಿತ ತಂದೆತಾಯಿಯರು ತಮ್ಮ ಮಕ್ಕಳ ಕಲಿಕೆಯ ಜವಾಬ್ದಾರಿಯನ್ನು ತಾವೇ ಹೊರಬೇಕು ಇಲ್ಲದಿದ್ದ ಪಕ್ಷದಲ್ಲಿ ಕಲಿಸುವ ಶಾಲೆಗೆ ಮಕ್ಕಳನ್ನು ಸೇರಿಸಬೇಕು. ತಂದೆತಾಯಿಯರು ಸರಕಾರಿ ಶಾಲೆಯ  ಅಧ್ಯಾಪಕರಷ್ಟೆ ವಿದ್ಯಾವಂತರಾಗಿದ್ದರೆ ಅಥವಾ ತಾವು ಕೂಡ ಅರೆಬರೆ ವಿದ್ಯಾವಂತರಾಗಿದ್ದರೆ ಕಲಿಸುವ ಶಾಲೆಗೆ ಮಕ್ಕಳನ್ನು ಸೇರಿಸುವುದು ಅನಿವಾರ್ಯ. ಹೀಗೆ ಮಧ್ಯಮ ವರ್ಗದ ಮತ್ತು ನೌಕರಿದಾರರ ಮಕ್ಕಳು ಸರಕಾರಿ ಶಾಲೆಯಿಂದ ದೂರವಾದ ಮೇಲೆ ಇಂಗ್ಲಿಶ್ ಶಿಕ್ಷಣವೇ ಜೀವನದ ಹಾದಿಯೆಂದು ನಂಬಿರುವ ಬಡ ಮತ್ತು ತಳ ಸಮುದಾಯದ ಮಕ್ಕಳು ಸರಕಾರಿ ಶಾಲೆಯಿಂದ ದೂರವಾಗುತ್ತಿರುವುದು ಅಸಹಜವೇನಲ್ಲ. ಎಲ್ಲಿ ತಮ್ಮ ಮಕ್ಕಳಿಗೆ ನಿಜವಾದ ಕಲಿಕೆಯ ಅಗತ್ಯವಿದೆ ಎಂದು ಹೆತ್ತವರು ಮನಗಂಡಿದ್ದಾರೋ ಅಲ್ಲಿ ಅವರು ಸರಕಾರಿ ಶಾಲೆಗೆ ಸೇರಿಸದಿರುವ ಹಟವನ್ನೂ ತೊಟ್ಟಿರುತ್ತಾರೆ. ಹಾಗಾಗಿದು ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ತಗ್ಗಲು ಕಾರಣವಾಗಿದೆ.
ಅನರ್ಹ ಅಧ್ಯಾಪಕರ ನೇಮಕ ಮಾಡಿಕೊಂಡಿರುವ ಸರಕಾರ ತಾನು ಎಡವಿರುವುದೆಲ್ಲಿ ಎಂದು ಆತ್ಮಾವಲೋಕನ ಮಾಡಿಕೊಂಡಲ್ಲಿ ಈ ಸಮಸ್ಯೆಯನ್ನು ಸರಿಪಡಿಸುವ ದಾರಿಗಳು ಕಾಣುತ್ತವೆ. ಅಧ್ಯಾಪಕರಾಗಿ ನೇಮಕಗೊಂಡ ಯಾವುದೇ ಅಭ್ಯರ್ಥಿಯ ಅಂಕಪಟ್ಟಿ ಆತನ ವಿದ್ಯಾರ್ಹತೆಯ ಗುಣಮಟ್ಟವನ್ನು ಸಾರುವುದಿಲ್ಲ  ಎಂಬ ಸತ್ಯವನ್ನು ಮನಗಾಣಬೇಕಿದೆ. .
ಸರಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿರುವುದು ನಮ್ಮೆಲ್ಲರ ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದಲ್ಲಿ ನೈತಿಕತೆಯೆ ಇಲ್ಲದ  ಭ್ರಷ್ಟತೆ ತುಂಬಿಕೊಂಡಿರುವ ಸೂಚಕವಾಗಿದೆ.
ನಮ್ಮ ಜೀವನದ ಕ್ರಮ ವಿಧಾನಗಳಲ್ಲಿ, ಮೌಲ್ಯಗಳಲ್ಲಿ, ಆದ್ಯತೆಗಳಲ್ಲಿ ಬದಲಾವಣೆಯಾಗಬೇಕಿದೆ. ಅಗತ್ಯ ನೈತಿಕತೆ ಮತ್ತು ಪ್ರಾಮಾಣಿಕತೆ ನಮ್ಮ ಜೀವನದ ಉಸಿರಾಗ ಬೇಕಿದೆ. ಕೇವಲ ಸೋಗು ಸಂಸ್ಕೃತಿಯನ್ನಷ್ಟೆ ಪೋಷಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ನಮ್ಮ ಅಧೋಗತಿಯ ಚಲನೆಯನ್ನೆ ಉನ್ನತಿ ಸಾಧನೆಯ ಚಲನೆಯೆಂದು ಭ್ರಮಿಸಲಾಗುತ್ತಿದೆ.
ಈ ಶೈಕ್ಷಣಿಕ ವಿಷಮ ಚಕ್ರದಿಂದ ಬಿಡುಗಡೆ ಹೊಂದುವ ಪ್ರಜ್ಞೆ, ಮೊಳೆತು, ಹೋರಾಟದ ಛಲ ಬೆಳೆದು ಸಾಧಕತನ ಮೈಗೂಡಿದಲ್ಲಿ ಮಾತ್ರ ಹೊಸಹಾದಿಯ ಕನಸು ಗರಿ ಕಟ್ಟುತ್ತದೆ.
ನಕಾರಾತ್ಮಕ ಮುಖವನ್ನೆ ಪ್ರಮುಖವಾಗಿ ಚಿತ್ರಿಸಿದಂತೆ ಇದು ಕಾಣಬಹುದು. ಆದರೆ  ನಕಾರಾತ್ಮಕ ಮುಖವೇ ನಮ್ಮ ಪ್ರಧಾನ ಮುಖವೂ ಆಗಿಬಿಟ್ಟಿರುವುದು ಸಮಸ್ಯೆಯ ಮೂಲವಾಗಿದೆ.

ಸೋಮವಾರ, ಜುಲೈ 18, 2011

ನಾನು ರೋಗಿಯಲ್ಲ, ಆದರೂ

ನಾನು ರೋಗಿಯಲ್ಲ
ಆದರೂ ನರಳುತ್ತೇನೆ ರೋಗಿಯ ಹಾಗೆ

ಮೈ ಮುಟ್ಟಿ ಡಾಕುಟರು
ಇರುಬು ಕಚ್ಚಿದಂತೆ ಸೂಜಿ ಚುಚ್ಚಿ
ಕೊಡದಿದ್ದಾಗ ಗುಡ್ಡೆ ಗುಡ್ಡೆ ಪಿಲ್ಸು

ಮನೆಮಂದಿ ನನ್ನ ಮಲಗಿಸಿ
ಬಿಸಿನೀರು ಹಾಲು ಬ್ರೆಡ್ಡು ಗಂಜಿ ಪಿಲ್ಸು
ಕುಡಿಸದಿದ್ದಾಗ ಕಾಲಕಾಲಕ್ಕೆ ನಿಗಾವಹಿಸಿ

ಹೋಗದಿದ್ದರೂ ಕೆಲಸಕ್ಕೆ
ಜೊತೆ ಕೆಲಸಗಾರರು ಸಂಜೆ ಮನೆಗೆ ಬಂದು
ವಿಚಾರಿಸಿಕೊಂಡು ಹೋಗದಿದ್ದಾಗ

ಅಕ್ಕಪಕ್ಕದ ಜನ ಕಿಟಕಿ ಬಾಗಿಲಲ್ಲಿಣುಕಿ
ಲೊಚಗುಟ್ಟಿ ಪಾಪ ಏನಾಯ್ತೆಂದು
ತೋರದಿದ್ದಾಗ ಒಣ ಕರುಣೆ

ಪಡುವಣದ ಪಡಖಾನೆಯಲ್ಲಿ ಸೂರ್ಯ
ಕೆಂಪೇರಿ ಹಿಂಬೆಳಗು ಚೆಲ್ಲದಿದ್ದಾಗ
ನರಳುತ್ತೇನೆ ನಾನೂ ಒಬ್ಬ ರೋಗಿಯ ಹಾಗೆ.
#  #


ಕಳೆದ ಒಂದೆರಡು ವರುಷಗಳ ಹಿಂದೆ ಇದನ್ನು ಬರೆದ ನೆನಪು. ತಾನು ನಂಬದೆ ಪರರನ್ನು ನಂಬಿಸುವ ಮತ ಜಾತಿ ಮನಸ್ಥಿತಿಯ ಭಾರತೀಯ ಸ್ವಭಾವಕ್ಕಿದು ಅಲಂಕಾರ ತೊಟ್ಟು ನಿಂತಂತೆ ನನಗೀಚೆಗೆ ಅನುಭವವಾಗತೊಡಗಿ ನಿಮ್ಮ ಮುಂದಿರಿಸುತ್ತಿದ್ದೇನೆ.

ಸೋಮವಾರ, ಜುಲೈ 11, 2011

ಶಾಲೆಯಲ್ಲಿ ಭಾಷಾ ಕಲಿಕೆಯ ನೀತಿ-ನಮಗೆ ಬೇಕಿರುವ ಇಂಗ್ಲಿಶ್

ರಾಜ್ಯ ಸರಕಾರ ಪ್ರಾಥಮಿಕ ಹಂತದಿಂದ ಇಂಗ್ಲಿಶ್ ಮಾಧ್ಯಮ ಆರಂಭಿಸುವ ಬಗ್ಗೆ ಹೇಳಿಕೆ ನೀಡಿದೆ. ಇದರಿಂದ ಕರ್ನಾಟಕದಲ್ಲಿ ಮತ್ತೆ ಕನ್ನಡ ಅಥವಾ ಇಂಗ್ಲಿಶ್ ಕಲಿಕೆಯಲ್ಲಿ ಭಾಷಾ ಸ್ಥಾನಮಾನದ ಬಗ್ಗೆ ಚರ್ಚೆ ಆರಂಭವಾಗಿದೆ. ಇದುವರೆಗೂ ಸರಕಾರಿ ಶಾಲೆಯಲ್ಲಿ ಪ್ರಾದೇಶಿಕ ಭಾಷಾ ಮಾಧ್ಯಮ ಮತ್ತು ತ್ರಿಭಾಷಾ ನೀತಿಯನ್ನು ಅನುಸರಿಸಿಕೊಂಡು ಬರಲಾಗಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಮೂರನೆಯ ಭಾಷೆಯಾಗಿರುವ ಹಿಂದಿಯನ್ನು ಆಯಾ ರಾಜ್ಯದ ಜನರ ಇಷ್ಟಾನಿಷ್ಟಗಳನ್ನು ಕಡೆಗಣಿಸಿ ರಾಷ್ಟ್ರ ಭಾಷೆ ಎಂಬ ಹೆಸರಿನಲ್ಲಿ ಬಲವಂತವಾಗಿ ಕಲಿಸಲಾಗುತ್ತಿದೆ. ಇಂಗ್ಲಿಶ್ ಮಾಧ್ಯಮ ಶಾಲೆಗಳಲ್ಲಿ ಎರಡನೆಯ ಭಾಷೆಯಾಗಿದ್ದರೂ ಕನ್ನಡ/ಪ್ರಾದೇಶಿಕ ಭಾಷೆಯನ್ನು ಕಲಿಸುವಲ್ಲಿನ ಅವಜ್ಞೆ ಮತ್ತು ಇಂಗ್ಲಿಶ್ ಮೇಲಿನ ಅನಗತ್ಯ ಒತ್ತಿನಿಂದ ಮಕ್ಕಳಲ್ಲಿ ಕನ್ನಡ ಕಲಿಕೆ ಸಮರ್ಪಕವಾಗಿಲ್ಲ.  ಸರಕಾರಿ / ಕನ್ನಡ ಮಾಧ್ಯಮ ಶಾಲೆಗಳಲ್ಲಿ ಜಾಗತಿಕ ಭಾಷೆಯಾದ ಇಂಗ್ಲಿಶ್ ಕಲಿಕೆ ತೀರಾ ಕೆಳಮಟ್ಟದಲ್ಲಿದ್ದು ಇಂದಿನ ಅಗತ್ಯವನ್ನು ಪೂರೈಸಲು ಆಗುತ್ತಿಲ್ಲ. ಮಕ್ಕಳ ಕೊರತೆಯಿಂದ ಸರಕಾರಿ ಕನ್ನಡ ಶಾಲೆಗಳು ಮುಚ್ಚುವ ಹೊಸ ಬೆಳವಣಿಗೆಯೂ ಆರಂಭವಾಗಿದೆ. ನ್ಯಾಯಾಲಯ ಕೂಡ ತಂದೆತಾಯಿ/ಪೋಷಕರು ತಮ್ಮ ಮಕ್ಕಳಿಗೆ ಇಂಗ್ಲಿಶ್ ಕಲಿಸುವ ಹಕ್ಕನ್ನು ಎತ್ತಿಹಿಡಿದಿದೆ. ಶಾಲಾ ಮಟ್ಟದ ಭಾಷಾ ಕಲಿಕೆಯಲ್ಲಿನ ಇಂಥ ಸಂಗತಿಗಳಿಂದ ಮತ್ತೆ ಮತ್ತೆ ಭಾಷಾ ನೀತಿ ಪರಿಶೀಲನೆಗೆ ಒಳಗಾಗುತ್ತಿದೆ. ಇದಕ್ಕೆ ಕಾರಣಗಳೇನು ಮತ್ತು ಅನುಸರಿಸಬೇಕಾದ ನೀತಿ ಯಾವುದಿರಬೇಕು?

ಬ್ರಿಟಿಷರು ಆರಂಭಿಸಿದ ಶಾಲೆಗಳ ಉದ್ದೇಶವೇ ಭಾರತೀಯರು ಭಾರತೀಯರಂತೆ ಆಲೋಚಿಸಬಾರದು ಎಂಬುದಾಗಿತ್ತು. ಹಾಗಾಗಿ ಇಂಗ್ಲಿಶ್ ಶಾಲೆಗಳು ಇಂಗ್ಲಿಶ್ ಭಾಷೆಯೊಂದಿಗೆ ಇಂಗ್ಲಿಶ್ ವ್ಯವಹಾರಿಕ ಬುದ್ಧಿ, ವಿಜ್ಞಾನ, ಸಂಸ್ಕೃತಿ ಹಾಗೂ ಜೀವನ ಕ್ರಮವನ್ನೂ ಕಲಿಸಲು ಉತ್ಸುಕವಾಗಿತ್ತು. ಈ ಧೋರಣೆ ಆರಂಭಿಕ ಇಂಗ್ಲಿಶ್ ಶಾಲೆಗಷ್ಟೆ ಸೀಮೀತವಾಗಿರದೆ ಇಂದಿನ ಇಂಗ್ಲಿಶ್ ಮಾಧ್ಯಮ ಶಾಲೆಗೂ ಅನ್ವಯವಾಗುತ್ತದೆ. ಆದರೆ ಈ ವಾಸ್ತವ ಇಂಗ್ಲಿಶ್ ನಿಂದ ಉಪಕೃತರಾದವರಿಗೆ ಇಷ್ಟವಾಗುವುದಿಲ್ಲ. ಮಿಶನರಿ ಸಂಸ್ಥೆಗಳ ಬಿಗಿ ಹಿಡಿತದಿಂದಾಚೆಗೆ ಇಂಗ್ಲಿಶ್ ಮಾಧ್ಯಮ ಶಾಲೆಗಳು ಇಂದು ಬೆಳೆದಿದ್ದರೂ ಮೂಲ ಧೋರಣೆಯಲ್ಲಿ ವ್ಯತ್ಯಾಸ ಇಲ್ಲದಿರುವುದು ಅಚ್ಚರಿಯೇ ಸರಿ. ಏಕಾಕೃತಿ ಮಾದರಿ ಸಂಸ್ಕೃತಿಯನ್ನು ಆದರ್ಶವಾಗಿರಿಸಿಕೊಂಡಿರುವ ಇವು ಭಾರತದ ದೇಶೀಯ ಬಹುಭಾಷೆಗಳು ಮತ್ತು ಬಹು ಸಂಸ್ಕೃತಿಯನ್ನು ಆಪೋಶನ ತೆಗೆದುಕೊಳ್ಳುವ ಹಾದಿಯಲ್ಲೆ ತನ್ನ ಅಸ್ತಿತ್ವವನ್ನು ಕಂಡುಕೊಂಡಿವೆ. ಆದರೂ ಜಾಗತಿಕ ಭಾಷೆಯಾಗಿ, ವ್ಯವಹಾರ ಭಾಷೆಯಾಗಿ, ಜ್ಞಾನ ಭಾಷೆಯಾಗಿ, ಶ್ರೀಮಂತ ಸಾಹಿತ್ಯ ಪಡೆದಿರುವ ಭಾಷೆಯಾಗಿ ತನ್ನದೇ ವಿಶಿಷ್ಟ ಸ್ಥಾನ ಹೊಂದಿರುವ ಇಂಗ್ಲಿಶ್ ನ ಅಗತ್ಯತೆ ಭಾರತೀಯರಿಗೆ ಖಂಡಿತ ಇದೆ. ಅದರ ಸ್ವರೂಪ ಯಾವ ಬಗೆಯದಾಗಿರಬೇಕು ಎಂಬುದರ ಬಗ್ಗೆ ನಮ್ಮಲ್ಲಿ ಖಚಿತತೆ ಇಲ್ಲ. ಇಂಗ್ಲಿಶ್ ಕಲಿಕೆಯ ಲಾಭವನ್ನು ಭಾರತೀಯ ಸಮಾಜದ ಮೇಲು ಜಾತಿಗಳು ಪಡೆದಿರುವುದು ನಿಜ. ಹಾಗೆಯೇ ಕೆಳ ಜಾತಿಗಳೂ ಇಂಗ್ಲಿಶ್ ಕಲಿಕೆಯ ಲಾಭವನ್ನು ಪಡೆಯಲು ಹಕ್ಕುಳ್ಳವರಾಗಿ ತಮ್ಮ ಬೇಡಿಕೆಯನ್ನಿಟ್ಟಿರುವುದು ಸಾಮಾಜಿಕ ನ್ಯಾಯಕ್ಕೆ ತಕ್ಕುದಾಗಿದೆ. ಈ ಬೆಳವಣಿಗೆ ಇಂಗ್ಲಿಶ್ ಕಲಿಕೆ ಭಾರತೀಯರಿಗೆ ಅನಿವಾರ್ಯವಾಗಿರುವುದರ ಸೂಚಕವಾಗಿದೆ. ಇಂಗ್ಲಿಶ್ ಕಲಿಕೆಯ ಲಾಭ ನಷ್ಟಗಳಾಚೆಗೆ ನಿಂತು ಆಧುನಿಕ ಯುಗದಲ್ಲಿ ಆ ಭಾಷೆಯ ಮೂಲಕ ನಮ್ಮನ್ನು ಗುರುತಿಸಿಕೊಳ್ಳುವ ಹಂತ ತಲುಪಿದ್ದೇವೆ. ಇಂದು ಇಂಗ್ಲಿಶ್ ನಮ್ಮ ಅಭಿವೃದ್ಧಿಯ ಭಾಗವಾಗಿದೆ. ಇದರಿಂದ ನಮ್ಮ ಮನೆ ಭಾಷೆ/ತಾಯಿ ಭಾಷೆ ಮತ್ತು ಬೀದಿ ಭಾಷೆಗಳನ್ನು ಬಿಟ್ಟುಕೊಡುವ ಸ್ಥಿತಿಯಲ್ಲಿದ್ದೇವೆಯೆ?

ಭಾರತೀಯರಲ್ಲಿ ಏಕ ಭಾಷಿಕರು ದ್ವಿಭಾಷಿಕರು ಮತ್ತು ಬಹುಭಾಷಿಕರು ಎಂಬ ಗುಂಪುಗಳನ್ನು ಮಾಡಿದ್ದಲ್ಲಿ ಏಕಭಾಷಿಕರಿಗಿಂತ ದ್ವಿಭಾಷಿಕರು ಮತ್ತು ಬಹುಭಾಷಿಕರು ಬಹುಸಂಖ್ಯಾತರಾಗಿ ಹೊರಹೊಮ್ಮುತ್ತಾರೆ. ಭಾರತ ಬಹು ಸಂಸ್ಕೃತಿ ಮತ್ತು ಭಾಷಿಕ ಸಮುದಾಯಗಳ ನಾಡು. ಅನಿವಾರ್ಯವಾಗಿ ಮನೆ ಭಾಷೆಯೊಂದಿಗೆ ಬೀದಿ ಭಾಷೆಯನ್ನು ನಾವು ಕಲಿತಿದ್ದೇವೆ. ಭಾರತದ ಯಾವುದೇ ರಾಜ್ಯದ ಜನ ದೇಶದ ಯಾವುದೇ ಮೂಲೆಯಲ್ಲಿ ನೆಲೆಸುವ ಮತ್ತು ವ್ಯಾಪಾರ ವ್ಯವಹಾರ ವೃತ್ತಿ ನಡೆಸುವ ಹಕ್ಕುಳ್ಳುವರಾಗಿದ್ದಾರೆ. ಆದ್ದರಿಂದ ದ್ವಿಭಾಷಿಕತೆ ರಾಜ್ಯಗಳ ಗಡಿ ನಾಡುಗಳಿಗೆ ಮಾತ್ರ ಸೀಮಿತವಾಗಿಲ್ಲ. ಕೆನರಾ ಬ್ಯಾಂಕು ಮತ್ತು ಉಡುಪಿ ಹೋಟೆಲುಗಳನ್ನು ನಾವು ದೇಶದ ಯಾವುದೇ ಮೂಲೆಯಲ್ಲೂ ಕಾಣಬಹುದು, ಕನ್ನಡ ಭಾಷಿಕರನ್ನೂ ಗುರುತಿಸಬಹುದು. ಇಂದು  ದೇಶದ ಎಲ್ಲ ರಾಜ್ಯಗಳ ರಾಜಧಾನಿಗಳೂ ದ್ವಿಭಾಷಿಕ/ಬಹುಭಾಷಿಕ ನೆಲೆಗಳಾಗಿವೆ. ಈ ಮಾತು ಎಲ್ಲ ಜಿಲ್ಲಾ  ಮತ್ತು ತಾಲೂಕು ಕೇಂದ್ರಗಳಿಗೂ ಅನ್ವಯಿಸುತ್ತದೆ.  ಕರ್ನಾಟಕದಲ್ಲಿರುವ ಮಲಯಾಳಿಗಳು, ತಮಿಳಿಗರು, ತೆಲುಗರು, ಮರಾಟಿಗರು, ರಾಜಸ್ತಾನಿಗಳು, ಪಂಜಾಬಿ, ಹಿಂದಿ, ಉರ್ದು ಭಾಷಿಕರು, ಕನ್ನಡಿಗರೇ ಆದ ಕೊಡಗರು, ಬಂಟರು, ಕೊಂಕಣಿಗರು, ಕರ್ನಾಟಕದ ಮೂಲನಿವಾಸಿಗಳಾದ ವಿವಿಧ ಭಾಷಿಕ ಬುಡಕಟ್ಟು ಜನಾಂಗಗಳು ಮೊದಲಾದವರು ದ್ವಿಭಾಷಿಕ/ಬಹುಭಾಷಿಕ ಸಮುದಾಯಗಳಾಗಿವೆ. ಇದು ದೇಶದ ಪ್ರತಿಯೊಂದೂ ರಾಜ್ಯದಲ್ಲಿ ಕಂಡುಬರುವ ಸ್ಥಿತಿಯೇ ಆಗಿದೆ. ಇವರೆಲ್ಲ ಪ್ರಾದೇಶಿಕ ಭಾಷೆಯನ್ನು ಹಣ ಸಂಪಾದನೆಗೊ, ತಾನು ಜೀವಿಸುವ ಪ್ರದೇಶದ ಸಾರ್ವಜನಿಕ ಸಂಪರ್ಕಕ್ಕೊ ಕಲಿಯಲೇಬೇಕು ಕಲಿತಿರುತ್ತಾರೆ. ತಮ್ಮ ಮಕ್ಕಳನ್ನು ಪ್ರಾದೇಶಿಕ ಭಾಷೆಯ ರಾಜ್ಯಗಳ ನಿಯಮದಡಿ ಆಯಾ ಭಾಷೆಗಳನ್ನು ಕಲಿಸಲೇಬೇಕು. ಅದರೊಂದಿಗೆ ರಾಷ್ಟ್ರೀಯ ಭಾಷೆಯಾಗಿ ಹಿಂದಿಯನ್ನೂ ಅಂತಾರಾಷ್ಟ್ರೀಯ ಭಾಷೆಯಾಗಿ ಇಂಗ್ಲಿಶನ್ನೂ ಕಲಿಯಬೇಕು. ಈ ಸಮುದಾಯಗಳಿಗೆ ತಮ್ಮ ಮನೆ ಭಾಷೆಯನ್ನು ಕಲಿಯುವ ಅವಕಾಶ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಕಡೆಗಣಿಸಲಾಗಿದೆ. ಅನ್ಯ ಭಾಷಿಕ ರಾಜ್ಯಗಳಲ್ಲಿ ಮನೆ ಭಾಷೆಯನ್ನಾಗಿ ಉಳಿಸಿಕೊಂಡ ಜನ ಸಮುದಾಯಗಳು ಸ್ವಭಾಷಾ ಜನ ಸಂಪರ್ಕದಿಂದ, ಸಂಸ್ಕೃತಿಯಿಂದ ಮತ್ತು ಭಾಷೆಯಿಂದ ಪ್ರತ್ಯೇಕಿಸಲ್ಪಟ್ಟ ದ್ವೀಪವಾಗಿ ಉಳಿದಿವೆ. ಪ್ರತಿಯೊಬ್ಬರಿಗೂ ತಮ್ಮ ಸ್ವಭಾಷೆ/ತಾಯಿಭಾಷೆಯನ್ನು ಆಮೂಲಾಗ್ರವಾಗಿ ಕಲಿಯುವುದು ಪ್ರಕೃತಿ ಸಹಜ ಹಕ್ಕಾಗಿದೆ, ಅಲ್ಲವೆ?
ಹಿಂದಿ ಭಾಷಿಕರ ರಾಷ್ಟ್ರ ಭಾಷೆಯ ಹೆಮ್ಮೆಯನ್ನು ಗೌರವಿಸಲು ದೇಶದಾದ್ಯಂತ ಹರಡಿರುವ ವಿವಿಧ ಭಾಷಿಕ ಸಮುದಾಯಗಳು ಹಿಂದಿಯನ್ನು ಅನಗತ್ಯವಾಗಿ ಕಲಿಯುವ ಬದಲು ತಮ್ಮ ಸ್ವಭಾಷೆಯನ್ನು ಕಲಿಯುವುದು ಹೆಚ್ಚು ತರ್ಕಬದ್ಧವಲ್ಲವೆ?

ಆಗ ಪ್ರಾದೇಶಿಕ ಭಾಷೆಯನ್ನು ಮೊದಲ ಭಾಷೆಯಾಗಿಯೂ, ಸ್ವಭಾಷೆ/ಮನೆಭಾಷೆ/ತಾಯಿಭಾಷೆಯನ್ನು ಎರಡನೆಯ ಭಾಷೆಯಾಗಿಯೂ ಮತ್ತು ಅಂತಾರಾಷ್ಟ್ರೀಯ ಭಾಷೆಯಾದ ಇಂಗ್ಲಿಶನ್ನು ಮೂರನೆಯ ಭಾಷೆಯಾಗಿ ಕಲಿಯುವುದು ಹೆಚ್ಚು ಸೂಕ್ತ..
ಭಾರತ ಸರಕಾರ ಮಾನ್ಯ ಮಾಡಿರುವ ಎಲ್ಲ ಭಾಷೆಗಳೂ ರಾಷ್ಟ್ರ ಭಾಷೆಗಳೇ ಆಗಿವೆ.ಹಿಂದಿ ಭಾಷಿಕರು ಹಿಂದಿ ಭಾಷಿಕ ರಾಜ್ಯಗಳಲ್ಲಿ ಪ್ರಾದೇಶಿಕ ಮೊದಲ ಭಾಷೆಯಾಗಿಯೂ ಇತರ ಭಾಷಿಕ ರಾಜ್ಯಗಳಲ್ಲಿ ಎರಡನೆಯಭಾಷೆಯಾಗಿಯೂ ಕಲಿಯುವುದು ಅಪಮಾನಕರವೇನಲ್ಲ. ಇತರ ಭಾಷೆಗಳೊಂದಿಗೆ ಸಮಾನವಾಗಿ  ಹಿಂದಿಯನ್ನು ಕಲಿಯಲು ಅವಕಾಶ ಮಾಡಿಕೊಡುವುದು ಯಾವ ರೀತಿಯಲ್ಲೂ ಹಿಂದಿಯ ಸ್ಥಾನವನ್ನು ಕಸಿದುಕೊಂಡಂತಲ್ಲ.

ಮೊದಲ ಭಾಷೆಯಾದ ಪ್ರಾದೇಶಿಕ ಭಾಷೆ ಆಯಾ ರಾಜ್ಯದ ಆಡಳಿತ ಭಾಷೆ ಮಾತ್ರವಾಗಿರದೆ ಆಯಾ ರಾಜ್ಯದ ಸಾಹಿತ್ಯ, ಸಂಸ್ಕೃತಿ, ವ್ಯವಹಾರ ಮಾಧ್ಯಮವೂ ಆಗಿರುತ್ತದೆ. ಈ ಎಲ್ಲವೂ ಆಯಾ ರಾಜ್ಯ ಭಾಷೆಯಲ್ಲಿ ನಡೆಯಬೇಕಿರುವುದರಿಂದ ಆ ರಾಜ್ಯದ ಎಲ್ಲ ಭಾಷಿಕ ಜನ ಅಲ್ಲಿನ ಪ್ರಾದೇಶಿಕ ಭಾಷೆಯನ್ನು ಆಮೂಲಾಗ್ರವಾಗಿ ಕಲಿಯಲೇಬೇಕು. ಪ್ರಾದೇಶಿಕ ಭಾಷೆಗೆ ಶಾಲಾ ಕಲಿಕೆಯಲ್ಲಿ ಅಗ್ರಪಟ್ಟ ದೊರಕಲೇಬೇಕು.ಎರಡನೆಯ ಭಾಷೆಯಾದ  ಸ್ವಭಾಷೆ/ಮನೆ ಭಾಷೆ/ತಾಯಿ ಭಾಷೆ ಪ್ರಾದೇಶಿಕ ಭಾಷೆಯಷ್ಟೆ ಮುಖ್ಯ. ಈ ಭಾಷಿಕ ಸಮುದಾಯಗಳು ದೇಶದ ಮುಖ್ಯ ಭಾಷಿಕ ವಾಹಿನಿಯಾಗಿದ್ದರೂ ಅನ್ಯ ಕಾರಣಗಳಿಂದ ಬೇರೆ ಭಾಷೆಯ ರಾಜ್ಯಗಳಲ್ಲಿ ನೆಲೆಸಿದವರು.ಇವರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಅನ್ಯ ಭಾಷಿಕ ಪ್ರಧಾನ ಸಮುದಾಯದ ನಡುವೆಯೂ ಉಳಿಸಿ ಬೆಳೆಸಿಕೊಳ್ಳುವ ಅಗತ್ಯವಿದೆ. ಯಾವುದೇ ರಾಜ್ಯದಲ್ಲೂ ದೇಶದ ಇತರ ರಾಜ್ಯಗಳ ಜನ ಸಮುದಾಯ ಪರತಂತ್ರರಾಗಿರದೆ ತಮ್ಮ ಸೋದರ ಭಾಷೆಯೊಂದಿಗೆ  ಸಮಾನವಾಗಿರತಕ್ಕ ಪರಿಸರವನ್ನು ಶಾಲಾ ಕಲಿಕೆಯಲ್ಲಿ ಕಲ್ಪಿಸುವುದು ದೇಶದ ಗಣತಂತ್ರ ಕಲ್ಪನೆಗೆ ತಕ್ಕುದಾದುದು. ಮನೆ ಭಾಷೆಯನ್ನು ಶಾಲಾ ಕಲಿಕೆಯಲ್ಲಿ ಎರಡನೆಯ ಭಾಷೆಯನ್ನಾಗಿ ಪಡೆದವರು ತಮ್ಮ ಸ್ವಭಾಷಾ ಸಾಹಿತ್ಯ ಸಂಸ್ಕೃತಿಯನ್ನು ಅರಿಯಲು ಸೂಕ್ತವಾಗಿರಬೇಕು.
ಇನ್ನು ಮೂರನೆಯ ಭಾಷೆಯಾಗಿ ಅಂತಾರಾಷ್ಟ್ರೀಯ ಭಾಷೆಯಾದ ಇಂಗ್ಲಿಶಿನ ಕಲಿಕೆ ಇರಬೇಕು. ಇದನ್ನು ಕಲಿಯುವ  ಧ್ಯೇಯೋದ್ದೇಶಗಳು ಆ ಭಾಷೆಯಲ್ಲಿ ಸಮರ್ಪಕವಾಗಿ ವ್ಯವಹಾರ ನಡೆಸಲು ಮತ್ತು ಸಂಪರ್ಕ ಭಾಷೆಯಾಗಿ ಬಳಸಲು ತಕ್ಕ ಪರಿಣತಿ ನೀಡುವಂತಿರಬೇಕು  ಈಗ ಎದ್ದಿರುವ ಇಂಗ್ಲಿಶ್ ಮಾಧ್ಯಮದ ಅಗತ್ಯದ ಹುಯಿಲು ಆ ಭಾಷೆ ಕಲಿಕೆಯ ವಂಚಿತ ಸ್ಥಿತಿ ತಂದುಕೊಡುವ ಪಾರಂಪರಿಕ ಬಲಹೀನ ಸ್ಥಿತಿಯಿಂದ ಹುಟ್ಟಿದುದು. ಮೂರನೆಯ ಭಾಷೆಯಾಗಿ ಇಂಗ್ಲಿಶನ್ನು ಕಲಿತರೂ ಅದು ನಮ್ಮ ಅಗತ್ಯಗಳೆಲ್ಲವನ್ನು ಪೂರೈಸುವಂತಿರಬೇಕು. ಇಂಗ್ಲಿಶ್ ಅನ್ನು ಜ್ಞಾನದ ಭಾಷೆಯಾಗಿ, ಸಾಹಿತ್ಯದ ಭಾಷೆಯಾಗಿ ಕಲಿಯುವರಿಗೆ ಉನ್ನತ ಶಿಕ್ಷಣದಲ್ಲಿ ಮುಕ್ತ ಅವಕಾಶ ಇರಬೇಕು. ಆದರೆ ಇಂಗ್ಲಿಶ್ ಮಾಧ್ಯಮದ ಪರವಾದ ಅಂತಾರಾಷ್ಟ್ರೀಯ ಮಟ್ಟದ ಕಾಣದ ಕೈಗಳ ಲಾಬಿಗೆ ಮಣಿದು ಪ್ರಾಥಮಿಕ ಶಿಕ್ಷಣದಲ್ಲಿ ಇಂಗ್ಲಿಶ್ ಮಾಧ್ಯಮವನ್ನು ಅಳವಡಿಸಿದರೆ ಅನರ್ಥವಾದಂತೆಯೆ ಸರಿ. ಇದರಿಂದ ದೇಶದ ಬಹು ಭಾಷಿಕ ಸಂಸ್ಕೃತಿಯ ಸ್ಥಾನದಲ್ಲಿ ಇಂಗ್ಲಿಶ್ ನ ಏಕಸಂಸ್ಕೃತಿಯನ್ನು ಮಾತ್ರ ನೆಲೆಗೊಳಿಸಲು ಸಹಾಯಕವಾಗುತ್ತದೆ.  ಇಂಗ್ಲಿಶಿನಲ್ಲಿ ವ್ಯವಹಾರ ಮಾಡಲು ಮತ್ತು ಸಂಪರ್ಕ ಮಾಧ್ಯಮದಲ್ಲಿ ಸುಗಮತೆ ಸಾಧಿಸಲು ಕಲಿಸಲಾಗುವ ಮೂರನೆಯ ಭಾಷೆಯ ಗುಣಮಟ್ಟ ಪರಿಪೂರ್ಣವಾಗಿರಬೇಕು. ಈ ಹಿಂದೆ ಹೇಳಿದಂತೆ ಅದು ಭಾರತದ ಬಹು ಭಾಷಿಕ ಸಮುದಾಯಗಳ ಬಹುಮುಖಿ ಅಗತ್ಯಗಳನ್ನು ಪೂರೈಸಬೇಕು. ಆಗ ನಮ್ಮ ಅಗತ್ಯದ ಇಂಗ್ಲಿಶ್ ಭಾಷೆ ಮತ್ತು ಇಂಗ್ಲಿಶ್ ಮಾಧ್ಯಮದ ಅನಗತ್ಯತೆ ನಡುವಿನ ಅಂತರ ನಮಗೆ ಅರ್ಥವಾಗುತ್ತದೆ. ಜಾಗತಿಕ ಭಾಷೆಯಾಗಿರುವ ಇಂಗ್ಲಿಶ್ ನ ಶಕ್ತಿ ಸಾಮರ್ಥ್ಯ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಬಳಕೆಯ ವ್ಯಾಪ್ತಿ ಈಗಲೂ ಹೆಚ್ಚುತ್ತಿದೆ. ನಮ್ಮ ಆ ಅಗತ್ಯವನ್ನು ಪೂರೈಸದ ಇಂಗ್ಲಿಶ್ ನ ಅಸಮರ್ಪಕ ಕಲಿಕೆಯಿಂದ ಇಂಗ್ಲಿಶ್ ಮಾಧ್ಯಮದ ಬೇಡಿಕೆ ದಿನೇ ದಿನೇ ಹೆಚ್ಚುತ್ತದೆ. ಆಗ ಪ್ರಾಥಮಿಕ ಹಂತದ ಇಂಗ್ಲಿಶ್ ಮಾಧ್ಯಮದಿಂದ ಇಂಗ್ಲಿಶ್ ಸಂಸ್ಕೃತಿಯ ಪಾರಮ್ಯ ಸಾಧನೆಗೆ ನಾವೇ ರತ್ನಗಂಬಳಿಯನ್ನು ಹಾಸಿಕೊಟ್ಟಂತಾಗುತ್ತದೆ. ಇದರಿಂದ ಭಾರತೀಯರು ತಮ್ಮ ದಾಸ್ಯ ಮನೋಭಾವವನ್ನು  ಸ್ವತಂತ್ರ ಮನೋಭಾವವಾಗಿ ಬೆಳೆಸಿಕೊಳ್ಳಲು ಮುಂದಿನ ಹಲವು ಶತಮಾನಗಳ ಕಾಲ ಕಾಯಬೇಕಾಗಿ ಬರಬಹುದು.