ಭಾನುವಾರ, ನವೆಂಬರ್ 4, 2012

ಮೊದಲ ಓದು ಕುರಿತ ಪುಸ್ತಿಕೆ ಎದುರು ಕುಳಿತು



ಕುಂದಾಪುರದ ತಿಂಗಳ ಬೆಳಕು ಪ್ರಕಾಶನ ಇದೇ ವರ್ಷ  ಹರಿಯಪ್ಪ ಪೇಜಾವರರ ನೆನದದ್ದು ಹೆಚ್ಚಾಗಿ ಕವನ ಸಂಕಲನ ಕುರಿತು ಬಂದ ಪತ್ರಗಳು ಮತ್ತು ಪತ್ರಿಕಾ ವಿಮರ್ಶೆಗಳನ್ನು ಸಂಗ್ರಹಿಸಿ `ಪೇಜಾವರ ಕವಿತೆಗಳು ಪ್ರತಿಕ್ರಿಯೆ' ಎಂಬ ಹೆಸರಿನಲ್ಲಿ ಪ್ರಕಟ ಪಡಿಸಿದೆ. ಈ ನಲವತ್ತು ಪುಟಗಳ ಪುಸ್ತಿಕೆಯ ಬೆಲೆ ಇಪ್ಪತ್ತು ರೂಪಾಯಿಗಳಿವೆ. ಬೆನ್ನಿನ ಪುಟದಲ್ಲಿ ಸ.ರಘುನಾಥ, ಮುದ್ದು ಮೂಡುಬೆಳ್ಳೆ, ಅರವಿಂದ ನಾಡಕರ್ಣಿ, ಡಾ. ರಾಮಚಂದ್ರ ದೇವ, ಕೆ.ಸತ್ಯನಾರಾಯಣ, ಆರ್ಕೆ ಮಣಿಪಾಲ, ಡಾ.ರಹಮತ್ ತರೀಕೆರೆ, ಜಿ. ರಾಜೀವ, ಆನಂದ ಝಂಜರವಾಡ, ಕಿರಣ, ಎಚ್.ಎಸ್.ವೆಂಕಟೇಶಮೂರ್ತಿ, ಜಾನಕಿ, ಆಲ್ಮನೆ ರಘುಪತಿ, ಡಾ.ಎಸ್.ಬಿ.ಕಾಸರಗೋಡು, ಡಾ.ಸೀ. ಹೊಸಬೆಟ್ಟು, ಬಿ.ಕೆ.ರವಿಚಂದ್ರನಾಥ, ಶಶಿಧರ ಹೆಮ್ಮಾಡಿ, ಜಯಂತ್ ಕಾಯ್ಕಿಣಿ, ಮತ್ತು ಬಿ.ಜನಾರ್ಧನ್ ಭಟ್ ಇವರ ಹೆಸರುಗಳಿದ್ದು. ಈ ಪುಸ್ತಿಕೆಯಲ್ಲಿ ಇವರ ಪತ್ರ ಬರಹಗಳನ್ನು ಬಳಸಿಕೊಳ್ಳಲಾಗಿದೆ. ಇವನ್ನು ಪ್ರಬುದ್ಧ ವಾಚಕರು ಅನುಭವಿಸಿದ ಪೇಜಾವರ ಕವಿತೆಗಳ ಭಿನ್ನ ದೃಷ್ಟಿಕೋನಗಳು ಎಂದು ಹೇಳಬಹುದು. ಸಾಮಾನ್ಯ ಓದುಗರು ಈ ರಚನೆಗಳನ್ನು ಅರಿಯುವಲ್ಲಿ ಮತ್ತು ಅನುಭವಿಸುವಲ್ಲಿ ಹೆಚ್ಚು ನಿಕಟತೆಯನ್ನು ಇಲ್ಲಿನ ಪತ್ರ ಮತ್ತು ಪತ್ರಿಕಾ ಬರಹಗಳು ಉಂಟುಮಾಡಬಹುದು ಎಂಬುದರಲ್ಲಿ ಎರಡು ಮಾತಿಲ್ಲ. ಅದರೊಂದಿಗೆ ಇಲ್ಲಿನ ಪ್ರೌಢ ಓದುಗರ ಓದು ಯಾವುದೇ ಇತಿಮಿತಿಗೆ ಒಳಪಟ್ಟಿಲ್ಲ್ಲವೆಂದು ಹೇಳಲುಬರುವುದಿಲ್ಲ. ಇದು ಸಾಮಾನ್ಯ  ಓದುಗರಿಗೆ ತನ್ನ ಬುದ್ಧಿಭಾವಗಳ ಗ್ರಹಿಕೆಯ ಮಿತಿಯಲ್ಲಿ ತನ್ನದೆ ರೀತಿಯಲ್ಲಿ ಈ ರಚನೆಗಳ ಒಳಹೊಕ್ಕಲು ಸಾಧ್ಯವಾಗದಂತೆಯೂ ಮಾಡಬಹುದು. ಇದರಿಂದ ಓದುಗನೊಬ್ಬ ಮುಕ್ತವಾಗಿ ತಮ್ಮ ಮನಸ್ಸು ತೆರೆದಿಟ್ಟು ಇಲ್ಲಿನ ರಚನೆಗಳು ಕಟ್ಟಿಕೊಡುವ ಅನುಭವಕ್ಕೆ ತೆರೆದುಕೊಳ್ಳುವ ಸ್ಥಿತಿಗೆ ಅಡ್ಡಿಯುಂಟಾಗಲೂಬಹುದು. ಹೀಗೆ ಸಾಮಾನ್ಯ ಓದುಗನಿಗೆ ಇದರಿಂದ ಲಾಭ ನಷ್ಟಗಳೆರಡೂ ಇರುವಂತೆ ಕಾಣುತ್ತದೆ.
ಮೂಲ ಪುಸ್ತಕವನ್ನೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಹೆಣಗಾಡಬೇಕಾದ ಸ್ಥಿತಿ ಸದ್ಯ ಕನ್ನಡದಲ್ಲಿದೆ, ಪುಸ್ತಕ ಮಾರಾಟದ ಪರ್ಯಾಯ ವ್ಯವಸ್ಥೆಯಾಗಿ ಗ್ರಂಥಾಲಯದ ಸಗಟು ಖರೀದಿಯನ್ನು ಏರ್ಪಾಟು ಮಾಡಿಕೊಳ್ಳಲಾಗಿದೆ. ಅಂಥದ್ದರಲ್ಲಿ ಪುಸ್ತಕದ ಮೊದಲ ಓದಿನ ಅಭಿಪ್ರಾಯಗಳನ್ನು ಕನ್ನಡದ ಓದುಗರು ಹಣ ಕೊಟ್ಟು ನಿಜವಾಗಿ ಓದುವ ಸ್ಥಿತಿ ತಲುಪಿದ್ದಾರೆಯೆ? ಚಿಂತಿಸಬೇಕಿದೆ.
ಯಾವುದೇ ಒಂದು ಕೃತಿ ಕುರಿತು ವಿಚಾರ ಸಂಕಿರಣ ನಡೆದರೆ, ವಿಮರ್ಶಾ ಸಂಕಲನ ಪ್ರಕಟವಾದರೆ ಅದರಲ್ಲಿ ಅಂಥ ವಿಶೇಷವೇನೂ ಇರಲು ಸಾಧ್ಯವಿಲ್ಲ. ಆದರೆ ಒಂದು ಕೃತಿ ಪ್ರಕಟವಾದಾಗ ಅದರ ಮೊದಲ ಓದಿನಲ್ಲಿ ವ್ಯಕ್ತವಾದ ಅಥವಾ ಹಂಚಿಕೊಂಡ ಅಭಿಪ್ರಾಯಗಳನ್ನು ಸಂಗ್ರಹಿಸಿ ಒಂದು ಪುಸ್ತಿಕೆಯಾಗಿ ಪ್ರಕಟವಾದಲ್ಲಿ ಅದು ಏನೋ ವಿಚಿತ್ರವೆನಿಸದೆ ಇರದು. ಇದುವರೆಗೆ ಪ್ರಕಟವಾದ ಕೃತಿಯೊಂದರ ಬಗ್ಗೆ ವ್ಯಕ್ತವಾದ ಅಭಿಪ್ರಾಯಗಳನ್ನು ಪ್ರಕಟವಾದ ಹೊಸ ಪುಸ್ತಕದ ಕೊನೆಯಲ್ಲಿ ಒಂದು ಹಿಡಿ ರೂಪದಲ್ಲಿ ಪ್ರಕಟಿಸುವ ಕ್ರಮ ಈಗಾಗಲೇ ರೂಢಿಯಲ್ಲಿದೆ. ಇದು ಕನ್ನಡ ಪುಸ್ತಕಗಳಲ್ಲಿ ಕಾಣುವ ರೀತಿ-ರಿವಾಜು ಎಂದು ಹೇಳಬಹುದು. ಇಂಗ್ಲಿಶ್ ಪುಸ್ತಕಗಳನ್ನು ಪರಿಶೀಲಿಸಿದರೆ ಅಲ್ಲಿ ಅನುಬಂಧದ ರೂಪದಲ್ಲಿ ಮೂಲ ಬರಹಕ್ಕೆ ಪೂರಕವಾದ ಬರವಣಿಗೆಯನ್ನು ನೂರು ನೂರೈವತ್ತು ಪುಟಗಳವರೆಗೂ ನೀಡಿದ ಸಂದರ್ಭಗಳಿವೆ. ಅದು ಅವರ ಅಧ್ಯಯನ ಆಸಕ್ತಿಯ ಸ್ವರೂಪ ಮತ್ತು ವಿಷಯ ಕುರಿತು ಗಂಭೀರವಾಗಿ ಒಳಹೊಕ್ಕ ರೀತಿಯನ್ನು ಕಾಣಿಸುತ್ತದೆ. ಆದರೆ ಕನ್ನಡ ಪುಸ್ತಕಗಳಲ್ಲಿ ಲೇಖಕ ತನ್ನ ಓದುಗ ವಲಯದ ಮೇಲೆ ಪ್ರಭಾವ ಬೀರುವ ಮತ್ತೊಂದು ಮಾರ್ಗವಾಗಿ ಕಂಡುಕೊಂಡದ್ದಾಗಿದೆ - ಅಭಿಪ್ರಾಯಗಳನ್ನು ಒಂದು ಕಡೆ ನೀಡುವ ರೀತಿ . ಅದರೆ ಒಂದು ಕೃತಿಯ ಬಗ್ಗೆ ವಿಚಾರ ಸಂಕಿರಣವಾಗಲೀ ವಿಮರ್ಶಾ ಸಂಕಲನವಾಗಲೀ ಪ್ರಕಟವಾದಾಗ ಅದು ಲೇಖಕ ಓದುಗರ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಹಾದಿಯಾಗಿದ್ದರೂ ಅದರಲ್ಲಿ ಲೇಖಕನ ಪಾತ್ರ ಗೌಣವಾಗಿರುತ್ತದೆ ಮತ್ತು ಓದುಗರ ಪಾತ್ರ ಮುಖ್ಯವಾಗಿರುತ್ತದೆ. ಆದರಿಲ್ಲಿ ಓದುಗ ಮತ್ತು ಲೇಖಕನ ಪಾತ್ರ ವ್ಯತಿರಿಕ್ತ ಸ್ಥಿತಿಯಲ್ಲಿರುವುದರಿಂದ ಅಸಹಜವೆನಿಸಲು ಕಾರಣವಾಗಿದೆಯೆ? ಹೌದು ಇದೇಕೆ ಅಸಹಜ?
ಹರಿಯಪ್ಪ ಪೇಜಾವರ ಅವರ `ನೆನದದ್ದು ಹೆಚ್ಚಾಗಿ' ಕವನ ಸಂಕಲನದಲ್ಲೆ ಈ ವಿಷಯ ಕುರಿತು `ವಿಮರ್ಶಾಸಕ್ತ ಕವಿ' ಎಂಬ ರಚನೆಯೊಂದು ಹೀಗಿದೆ-
0
ಅಷ್ಟೇನೂ ಮುಖ್ಯ ಕವಿಯಲ್ಲದ ಆತ
ತನ್ನ ಪುಸ್ತಕಕ್ಕೆ
ಖ್ಯಾತ ಕವಿಯೊಬ್ಬರಿಂದ ಹಿನ್ನುಡಿಯನ್ನೂ
ಖ್ಯಾತ ವಿಮರ್ಶಕರೊಬ್ಬರಿಂದ ಮುನ್ನುಡಿಯನ್ನೂ ಬರೆಸಿದ.
ಆಮೇಲೆ ತುಂಬ ಖರ್ಚು ಮಾಡಿ
ಪುಸ್ತಕದ ಮುಖಪುಟಕ್ಕೆ
ವ್ಯಾನ್ ಗೋ ಚಿತ್ರ ಹಾಕಿಸಿ
ಪತ್ರಿಕೆಗಳ `ಪುಸ್ತಕಾಲೋಕನ'ಕ್ಕೆ ಕಳಿಸಿದ.
ನಂತರ ಅತ್ಯುತ್ಸಾಹದಿಂದ ಅದನ್ನು
ಕನ್ನಡದ ಬೇರೆ ಬೇರೆ ವಿಮರ್ಶಕರಿಗೆ
ಗೌರವಪೂರ್ವಕವಾಗಿ ರವಾನಿಸಿ
ತುಂಬ ಆಸೆಯಿಂದ ಅವರ ಪ್ರತಿಕ್ರಿಯೆಗೆ ಕಾದರೆ
ಯಾವ ಪರಿಚಿತ ವಿಮರ್ಶಕನಾಗಲೀ
ಯಾವ ಪರಿಚಿತ ಲೇಖಕನಾಗಲೀ
ಆ ಬಗ್ಗೆ ಏನಾದರೂ ಬರೆಯುವುದಿರಲಿ
ಅದು ತಲುಪಿದ ಬಗ್ಗೆ  ಸಾ
ಒಂದು ಗೀರು ಬರೆಯದಿದ್ದುದು ಕಂಡು
ತೀರ ನಿರಾಶನಾದ.

ಮುಂದೆ ಎಷ್ಟೋ ದಿನಗಳ ನಂತರ
ಈ ಸದರಿ ವಿಮರ್ಶಕರಲ್ಲಿ ಕೆಲವರು ಅಲ್ಲಲ್ಲಿ
ಬೇರೆ ಬೇರೆ ಸೆಮಿನಾರುಗಳಲ್ಲಿ ಸಿಕ್ಕು
ಈತ ಆಶೆಯಿಂದ ಅತ್ತ ಧಾವಿಸಿದರೆ
ಅವರು ಬೇರೆಲ್ಲೊ ಕೈಯೆತ್ತಿ
ಯಾರಿಗೋ ನಮಸ್ಕರಿಸಿ
ಈತನನ್ನು ಉಪಾಯವಾಗಿ ನಿವಾರಿಸಿಕೊಂಡರು
ತಪ್ಪಿಸಲಾಗದೆ ಸಿಕ್ಕಿದ ಇನ್ನು ಕೆಲವರಲ್ಲಿ
ಈತ ನನ್ನ ಪುಸ್ತಕ ಸಿಕ್ಕಿತೆ ಎಂದು ವಿಚಾರಿಸಿ
ಅದರ ವಿಮರ್ಶೆಗೆ ಕಾದರೆ ಅವರು
`ಹೌದು ಥ್ಯಾಂಕ್ಸ್' ಎಂದು ನಂತರ
`ತುಂಬ ಖರ್ಚಾಗಿರಬೇಕಲ್ಲ-ಕಷ್ಟ ಕಷ್ಟ'
ಎಂದು ವಿನಾಕಾರಣ ಸಹಾನುಭೂತಿ ತೋರಿಸಿದರು
ಇನ್ನು ಕೆಲವರು ಈತ ವಿಚಾರಿಸುವ ಮೊದಲೇ
ಬಹಳ ಚೆನ್ನಾಗಿದೆ ಎಂದು ಬಿಟ್ಟು
ಎದುರಿನ ರಸ್ತೆಯ ಬಿಸಿಲನ್ನು ದಿಟ್ಟಿಸಿದರು
ಈತ ಚೆನ್ನಾಗಿದೆ ಅಂದರೇನರ್ಥ ಎಂದು
ಗುಟ್ಟಿನಲ್ಲಿ ಅವರ ಮುಖ ನೋಡಿದರೆ
ಅಲ್ಲಿ ಹೆಪ್ಪುಗಟ್ಟಿರುವ ಮೌನ
ತನ್ನ ಬಗ್ಗೆ ಹೊಗಳಿಕೆಗೆ ತೀರ ಬೇರಾದುದನ್ನು
ಹೇಳುತ್ತಿದೆ ಅನ್ನಿಸಿ

ತನ್ನ ಪುಸ್ತಕವ ಬಯ್ಯುವುದಕ್ಕಾದರೂ
ಇವರು ಬಾಯಿ ಬಿಡಬಾರದೆ
ಎಂದು ಖಿನ್ನನಾದ.
0
ಆರಂಭಿಕ ಲೇಖಕನೊಬ್ಬ ತನ್ನ ಬರಹದ ಶಕ್ತಿಯನ್ನು ಹೆಚ್ಚಿಸುವ ಬಗೆಯಲ್ಲಿ ತೊಡಗಿಸಿಕೊಳ್ಳದೆ ಕೀರ್ತಿಯ ಬೆನ್ನು ಹತ್ತಿ ಅನುಭವಿಸಿದ ದಾರುಣ ಅನುಭವದ ಚಿತ್ರವಿದು. ಕೀರ್ತಿಯನ್ನು ಲೇಖಕ ಅರಸಿಹೋಗುವಂಥದ್ದಲ್ಲ, ಅದು ಲೇಖಕನನ್ನು ತಡಕಿ ಬರುವಂಥದ್ದಾಗಿರಬೇಕು ಎಂಬ ಪರೋಕ್ಷ ಧ್ವನಿಯಿದೆ ಇಲ್ಲಿ. ಇದು ಸದ್ಯದ ಕನ್ನಡ ಸಾಹಿತ್ಯ ವಲಯದಲ್ಲಿರುವ ಪ್ರವೃತ್ತಿಯನ್ನೂ ಬರಹಗಾರ/ವಿಮರ್ಶಕರ ಮನೋಭಾವವನ್ನೂ ಹಿಡಿದುಕೊಟ್ಟಿದೆ. ಕವಿಯ ಕೀರ್ತಿಯ ಹಂಬಲ ಈಡೇರಿದಲ್ಲಿ ಅವನಿಗೆ ಸಾರ್ಥಕ್ಯದ ಭಾವ ಮೂಡುತ್ತದೆ, ಹಿತಕರವಾದ ಸುಖಭಾವ ಉಂಟಾಗುತ್ತದೆ, ಅಹಂ ಸಂತೃಪ್ತವಾಗುತ್ತದೆ, ಸ್ವರತಿ-ಸಂಪ್ರೀತಿ ತಣಿಯುತ್ತದೆ. ಇಂಥ ಕೀರ್ತಿಯ ಹಂಬಲ ವ್ಯಕ್ತಿಗತವಾದುದು, ಕಲೆಯ ಸಾರ್ಥಕತೆ ಸಾಮೂಹಿಕ ಜೀವನಕ್ಕೆ ಸಂಬಂಧಿಸಿದುದು. ಕಲೆಯ ಸಾರ್ಥಕತೆ ಸಾಧಿತವಾಗದ ಕೀರ್ತಿಯ ಹಂಬಲದಿಂದ ಅಹಿತವೇ ಹೆಚ್ಚು. ಹಾಗಾಗಿ ಕವಿ ಕಲಾವಿದರ ವೈಯಕ್ತಿಕ ಪ್ರತಿಷ್ಟೆಯ ಕೀರ್ತಿ ಹಂಬಲ ದುಷ್ಪರಿಣಾಮವನ್ನೆ ಹೊತ್ತು ತರುತ್ತದೆ. ಏಕೆಂದರೆ ಅದು ವೈಯಕ್ತಿಕ ಆಸೆ ಆಕಾಂಕ್ಷೆ ಸಾಧಿಸಿಕೊಳ್ಳುವ ಕ್ರಮ. ಆದರೆ ಕವಿ ಕೀರ್ತಿಯ ಬಗ್ಗೆ ನಿರಾಸಕ್ತನಾಗಿದ್ದು ತನ್ನ ಸಾಧನೆಯ ಗರಿಮೆಯನ್ನು ಗಳಿಸುತ್ತ ಹೋದಲ್ಲಿ ಆಗದು ಓದುಗ ಸಮುದಾಯ ಅವನ ಕೃತಿಯಿಂದ ಬೌದ್ಧಿಕ-ವೈಚಾರಿಕ ಮಟ್ಟ ಬೆಳೆಸಿಕೊಳ್ಳುವ ಮೂಲಕ ತಮ್ಮ ಜೀವನ ಮಟ್ಟ ಎತ್ತರಿಸಿಕೊಳ್ಳುವ ಹಾದಿಯಲ್ಲಿ ತೋರುವ ಪ್ರೀತಿಗೆ ಪಾತ್ರನಾಗುವ ಕ್ರಮವಾಗಿರುತ್ತದೆ.
ಆದರೂ ಯಾವುದೇ ಲೇಖಕ ತನ್ನ ಪಾಡಿಗೆ ತಾನು ಬರೆಯಲು ಸಾಧ್ಯವಿಲ್ಲ. ತನ್ನ ಕೃತಿ ಕುರಿತು ಸಹೃದಯ ಓದುಗರು ಆಡುವ ಮಾತು ಬರಹಗಾರನೊಬ್ಬನನ್ನು ಚಿಮ್ಮು ಹಲಗೆಯಂತೆ ಮೇಲಕ್ಕೆ ಏರಿಸಬಲ್ಲದು, ಅವನ ಉತ್ಸಾಹವನ್ನು ಹೆಚ್ಚಿಸಬಲ್ಲದು ಎಂಬುದೆಲ್ಲ ಸತ್ಯವೆ. ಇದು ಖಂಡಿತ ಅತ್ಯಗತ್ಯ ಕೂಡ. ಆದರೆ ಲೇಖಕ ಅದರಲ್ಲಿಯೆ ತಾನು ಮೈ ಮರೆಯುವಂತಿಲ್ಲ. ಅದು ಕವಿ/ಕಲಾವಿದ/ಸಾಧಕನನ್ನು ತನ್ನ ಜವಾಬ್ದಾರಿಯಿಂದ ಹಿಂದೆ ಸರಿಯುವಂತೆ ಮಾಡಬಲ್ಲುದು. ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಕಾವ್ಯ ಪ್ರಯೋಜನ ಕುರಿತು ಕೀರ್ತಿ, ಸಂಪತ್ತು, ಸ್ಥಾನ-ಮಾನ(ಸಮ್ಮಾನ)ಗಳೆ ಕಾವ್ಯದ ಉಪಯೋಗಗಳು ಎಂದೂ ಹೇಳಲಾಗಿದೆ. ಇವೆಲ್ಲ ಕವಿಯ ಜೀವನದಲ್ಲಿ ದೊರಕಬೇಕಾದ ಲೌಕಿಕ ಲಾಭಗಳೇ ಎಂಬಲ್ಲಿ ಸಂದೇಹವಿಲ್ಲ. ಆದರೂ ಇದರಿಂದಲೇ ಕವಿ ಕಲಾವಿದರು ಹಾದಿ ತಪ್ಪಿರುವುದು ಕೂಡ ಅಷ್ಟೇ ನಿಜ. ಹೀಗಿದ್ದರೂ ಬರಹಗಾರನಾದವನು ಅವನ್ನು ಅರಸುವಂತಿಲ್ಲ, ಅಪೇಕ್ಷೆ ಪಡುವಂತಿಲ್ಲ, ಬೆನ್ನು ಹತ್ತುವಂತಿಲ್ಲ. ಅವು ತಾನೇ ಒದಗಿಬಂದಲ್ಲಿ ಒಪ್ಪತಕ್ಕದ್ದೆ ಹೊರತು ಅನ್ಯ ದಾರಿಯಿಲ್ಲ. ಈ ಕುರಿತು ಕವಿಯಾದವನು ನಿರಾಸಕ್ತನೂ ನಿರಾಪೇಕ್ಷಿತನೂ ಆಗಿರಬೇಕು. ಹೊಗಳಿಕೆ ಯಾವ ಮನುಷ್ಯನನ್ನು ತಾನೇ ಖುಷಿ ಪಡಿಸದೆ ಇರಬಲ್ಲದು? ಕೀರ್ತಿ ಯಾವ ಸಾಧಕನನ್ನು ತಾನೇ ಬೀಗದಂತೆ ಇರಿಸಬಲ್ಲದು? ಹಾಗಾಗಿದು ಮನುಷ್ಯ ದೌರ್ಬಲ್ಯವಲ್ಲದೆ ಬೇರೆಯಲ್ಲವೆಂದೇ ಹೇಳಬೇಕು. ಈ ಪುಸ್ತಿಕೆಯ ಸ್ವರೂಪಕ್ಕೂ ಕವಿಗೆ ಹಿಡಿದಿರುವ ಕೀರ್ತಿಶನಿಗೂ ನಿಕಟ ಸಂಬಂಧವಿದೆ. ಒಬ್ಬ ಸಾಧಕ/ಕಲಾವಿದ ಈ ಬಗ್ಗೆ ನಿರಾಸಕ್ತನಾಗದಿದ್ದಲ್ಲಿ ಪರಿಣಾಮ ಏನಾಗುತ್ತದೆ ಎಂದು ತಿಳಿಯುವಲ್ಲಿ ಕಲಾಕೃತಿ ಮಟ್ಟದ ಎರಡು ನಿದರ್ಶನಗಳು ನಮ್ಮ ಮುಂದಿವೆ. 1. ಶೇಕ್ಸ್ಪಿಯರ್ನ ಕಿಂಗ್ ಲಿಯರ್ ನಾಟಕ. 2. ಬೆಳದಿಂಗಳ ಬಾಲೆ ಕನ್ನಡ ಚಿತ್ರ.      
ಲಿಯರ್ ದೇಶದ ಒಬ್ಬ ದೊರೆಯಾಗಿ, ರಾಜಕಾರ್ಯ ನಿಪುಣನಾಗಿ, ಫ್ಯೂಡಲ್ ವ್ಯವಸ್ಥೆಯ ಅಧಿಪತಿಯಾಗಿ, ದೇಶ ಮತ್ತು ಕುಟುಂಬ ರಕ್ಷಣೆಯ ಹೊಣೆಯನ್ನು ಹೊತ್ತವನು. ಹೊಗಳಿಕೆಯ ಮಾತುಗಳನ್ನರಸಿ ಹೊರಟ ಲಿಯರ್ ನಿಗೆ ಪ್ರೀತಿ-ವಂಚನೆ, ವಾಸ್ತವ-ಅವಾಸ್ತವ, ಸತ್ಯ-ಸುಳ್ಳು, ಕಪಟತನ-ಮುಗ್ಧತನಗಳ ನಡುವೆ ವ್ಯತ್ಯಾಸ ಅರಿಯಲಾಗದ ಹಂತ ಒದಗುತ್ತದೆ. ಅದರ ಪರಿಣಾಮವಾಗಿ ಆತನ ಜೀವನವೆ ದುರಂತದತ್ತ ಜಾರಿಕೊಳ್ಳುತ್ತದೆ. ಅವನ ದೌರ್ಬಲ್ಯವನ್ನು ಆತನ ಹಿರಿಯ ಹೆಣ್ಣುಮಕ್ಕಳು ತಮ್ಮ ಸ್ವಹಿತಾಸಕ್ತಿ ಸಾಧಿಸಲು ಮೆಟ್ಟಿಲನ್ನಾಗಿ ಮಾಡಿಕೊಳ್ಳುತ್ತಾರೆ. ತಮ್ಮ ತಂದೆಯ ವ್ಯಕ್ತಿತ್ವವನ್ನು ದುರುಪಯೋಗ ಪಡಿಸಿಕೊಳ್ಳುವುದಲ್ಲದೆ ಆತನ ಕೊರತೆಯನ್ನು ಎಲ್ಲರಿಗೂ ಎದ್ದು ಕಾಣುವಂತೆ ಮಾಡುತ್ತಾರೆ. ಲಿಯರ್ ತನ್ನ ಜೀವನದಲ್ಲಿ ದಾರುಣತೆ ಮತ್ತು ದುರಂತತೆ ಒಡಮೂಡಲು ಹೊಗಳಿಕೆಯ ಮಾತುಗಳಿಗೆ ಮನಸೋತದ್ದೇ ಕಾರಣವಾಗುತ್ತದೆ. ಆದರೆ ವಾಸ್ತವದಲ್ಲಿ ಕವಿಯ ಸೋಲಿಗೆ ಕವಿಯೆ ಹೊಣೆಗಾರನೂ ಕಾರಣನೂ ಆಗಿರಬಾರದಲ್ಲವೆ? ಆಗವನು ಏನನ್ನು ಸಾಧಿಸಲಾರನಲ್ಲವೆ?
ಬೆಳದಿಂಗಳ ಬಾಲೆ ಚಿತ್ರದ ನಾಯಕ ಅಂತಾರಾಷ್ಟ್ರೀಯ ಚೆಸ್ ಚಾಂಪಿಯನ್. ಆತನೊಬ್ಬ ಕ್ರೀಡಾ ಕ್ಷೇತ್ರದ ಅಸಾಮಾನ್ಯ ಸಾಧಕ. ಆದರೂ ಆತ ಮೈಮರೆತು ತನ್ನ ಅಭಿಮಾನಿಯನ್ನರಸಿ ಬೆನ್ನು ಹತ್ತುತ್ತಾನೆ. ಅವನಲ್ಲಿ ಅಭಿಮಾನಿಯ ಮೋಹ ಎಷ್ಟು ಅಡರುತ್ತದೆ ಎಂದರೆ ಅವನಿಗೆ ತನ್ನ ಸಾಧಕ ಕ್ಷೇತ್ರವನ್ನೆ ಗೌಣವಾಗಿ ಕಂಡರಸುವ ಮತ್ತು ಅಭಿಮಾನಿಯ ಸಂಗವೇ ಪ್ರಮುಖವಾಗುವ ಭ್ರಮಾಲೋಕ ಉಂಟಾಗುತ್ತದೆ. ಸಾಧಕನ ಜೀವನದಲ್ಲಿ ಇದು ವ್ಯತಿರಿಕ್ತ ಸ್ಥಿತಿ. ಸಾಧಿತ ಸ್ಥಿತಿಯಿಲ್ಲದೆ ಮೆಚ್ಚುಗರೂ ಅಭಿಮಾನಿಗಳೂ ಇರಲು ಸಾಧ್ಯವಿಲ್ಲ. ಈ ಸೂಕ್ಷ್ಮವನ್ನು ಅರಿಯಲಾಗದ ನಾಯಕ ಚಲನಚಿತ್ರದ ಕೊನೆಗೆ ತನ್ನ ಸಾಧಿತ ಸ್ಥಿತಿಯನ್ನೂ ಅಭಿಮಾನಿಯನ್ನೂ ಕಳೆದುಕೊಂಡು ದುರಂತದ ಆಳದಲ್ಲಿ ಬಿದ್ದಿರುತ್ತಾನೆ. ಸಾಧಕ ನಾಯಕನ ಈ ಸ್ಥಿತಿಗೆ ಅವನು ಮಾರುಹೋದ ತನ್ನ ಅಭಿಮಾನಿ ಕುರಿತ ಮೋಹವೆ ಕಾರಣವೆಂಬುದನ್ನು ಚಿತ್ರ ಮನಗಾಣಿಸುತ್ತದೆ. ಒಂದು ಅತ್ಯುತ್ತಮ ಕವಿತೆಯನ್ನು ಈ ಭುವನದ ಭಾಗ್ಯವೆಂದು ಭಾವಿಸಲಾಗುತ್ತದೆ. ಕವಿಯೊಬ್ಬ ಅದನ್ನು ಸಾಧಿಸಬೇಕಾದರೆ ಆತ ತನ್ನ ಸರ್ವ ಶಕ್ತಿಯನ್ನಷ್ಟೇ ಅಲ್ಲದೆ ತನ್ನ ಜೀವಮಾನವನ್ನೂ ಸವೆಸಬೇಕಲ್ಲವೆ? ತನ್ನ ಸಾಧನೆಯ ಕಠಿಣ ಮತ್ತು ಗಂಭೀರ ಸವಾಲು ಅರಿಯದೆ ಅದನ್ನು ತೊರೆದು ಕೀರ್ತಿಯನ್ನು ಹಂಬಲಿಸಿ ಹಾದಿತಪ್ಪಿ ನಡೆದರೆ ಸವಾಲು ಸ್ವೀಕರಿಸುವ ಬಗೆಯಾದರೂ ಯಾವುದು? ಸಾಧಿಸುವುದಾದರೂ ಹೇಗೆ?
ಇಂಥದೇ ಎಳೆಯೊಂದು ಲಾರ್ಡ್ ಟೆನಿಸನ್ ನ ದೀರ್ಘ ಕವಿತೆ ದಿ ಲೇಡಿ ಆಫ್ ಶಾಲೆಟ್ ನಲ್ಲೂ ಇದೆ. ಗಾಜಿನ ಮನೆಯೊಳಗಿನ ಸಾಧಕ ಜಗತ್ತು ಮತ್ತು ಅದರಾಚೆಗಿನ ವಾಸ್ತವ ಜಗತ್ತು ಬೇರೆ ಬೇರೆ. ಸಾಧಕ ವಾಸ್ತವ ಜಗತ್ತಿನ ಸಮಸ್ತ ಸಂಗತಿಗಳ ಮಧ್ಯೆ ಇದ್ದರೂ ಅವನ್ನು ಕಂಡು ಅನುಭವಿಸುತ್ತಿದ್ದರೂ ವಾಸ್ತವ ಜಗತ್ತಿನ ಭಾಗವಾಗಿರುವುದಿಲ್ಲ. ಸಾಧಕ ಜಗತ್ತ್ತಿಗೆ ಅಗತ್ಯವಾದ ಎಲ್ಲ ಸತ್ವವನ್ನು ವಾಸ್ತವ ಜಗತ್ತಿನಿಂದಲೆ ಪಡೆದುಕೊಂಡರೂ ವಾಸ್ತವ ಜಗತ್ತಿನೊಂದಿಗೆ ವೈಯಕ್ತಿಕ ಸಂಪರ್ಕವಿರಿಸಿಕೊಳ್ಳುವಂತಿಲ್ಲ. ಹಾಗೆ ಆತನೇನಾದರೂ ವಾಸ್ತವ ಜಗತ್ತಿಗೆ ಕಾಲಿಟ್ಟಲ್ಲಿ ದುರಂತ ಸಂಭವಿಸದೆ ಇರುವುದಿಲ್ಲ. ಈ ಮಾತಿಗೆ ಕಾಕತಾಳೀಯವಾಗಿಯೋ ಅನಿವಾರ್ಯವಾಗಿಯೋ ಅನಿರೀಕ್ಷಿತವಾಗಿಯೋ ಕವಿತೆಯಲ್ಲಿ ದುರಂತದ ಛಾಯೆ ವ್ಯಾಪಿಸಿಕೊಳ್ಳುವುದನ್ನು ಕವಿತೆ ಬಣ್ಣಿಸಿದೆ. ಸಾಧಕನಿಗೆ ಸಾಧಕ ಜಗತ್ತು ಹೊರತುಪಡಿಸಿ ಅನ್ಯ ಜಗತ್ತಿಲ್ಲವೆಂಬುದನ್ನು ಕಾಣಿಸುತ್ತದೆ.
ಕನ್ನಡ ಚಲನಚಿತ್ರ ರಂಗ ಕಂಡ ಅತ್ಯಂತ ಜನಪ್ರಿಯ ನಾಯಕ ನಟ ರಾಜಕುಮಾರ್ ತಮ್ಮ ಸಿನಿಮಾ ನೋಡುಗರನ್ನು `ಅಭಿಮಾನಿ ದೇವರು' ಎಂದು ಕರೆದು ತಮ್ಮ ಅಭಿಮಾನಿಗಳೊಂದಿಗೆ ಗೌರವಾನ್ವಿತ ಅಂತರ ಕಾಪಾಡಿಕೊಂಡಿದ್ದನ್ನು ಕಾಣುತ್ತೇವೆ. ಇದರಿಂದ ಅವರಿಗೆ ಅಭಿಮಾನಿಗಳ ಬಗ್ಗೆ ನಿರಾಸಕ್ತರಾಗಿ ನಟನೆಯಲ್ಲಿ ಪಾತ್ರಕ್ಕೆ ಜೀವ ತುಂಬುವ ಕಾರ್ಯಸಾಧನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯವಾಯಿತು ಮಾತ್ರವಲ್ಲ ಆ ಅಭಿಮಾನಿ ದೇವರುಗಳಿಂದ ಎದುರಾಗುವ ಬಾಲಿಶವಾದ ಮುಜುಗರವನ್ನು ನಿಯಂತ್ರಿಸಲೂ ಸಾಧ್ಯವಾಯಿತು. ಇದು ಸಾಧನೆಯ ಹಾದಿಯಲ್ಲಿ ಕೀರ್ತಿ ಆಭಿಮಾನಗಳು ಇದ್ದೂ ಇಲ್ಲದ ಅಥವಾ ಅವಕ್ಕೆ ಅಂಟಿಯೂ ಅಂಟಿಕೊಂಡಿರದ ಮಾನಸಿಕ ಸ್ಥಿತಿಯನ್ನು ಸಾಧಕನಾದ ಕವಿ/ಕಲಾವಿದ ಪಡೆದುಕೊಳ್ಳುವ ಅಗತ್ಯವನ್ನು ಕಾಣಿಸುತ್ತದೆ.
ಸಾಧಕತನ ಎಂಬುದು ಸಾಧಕನ ಮನೋಪ್ರವೃತ್ತಿಯಲ್ಲದೆ ಬೇರೆಯಲ್ಲ. ಅದು ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುತ್ತದೆ. ಸಾಧಕನಾದವನು ಸದಾ ತನ್ನ ಸಾಧಿಸಬೇಕಾದ ಸಿದ್ಧಿಯ ಕಡೆ ಪೂರ್ಣ ತೊಡಗಿಸಿಕೊಂಡಿರುತ್ತಾನೆ. ಸಾಧಕರಲ್ಲದವರ ಕಣ್ಣಲ್ಲಿ ಆತ ಕೇವಲ ಬೆರಗು ಹುಟ್ಟಿಸಿ ತನ್ನ ಬಗ್ಗೆ ಅಭಿಮಾನ ತಳೆಯುವಂತೆ ಮಾಡುವ ಕ್ರಮದಲ್ಲಲ್ಲ. ಕವಿ/ಬರಹಗಾರ ಅದವನು ಉಳಿದವರಿಗೆಲ್ಲ ತಮ್ಮ ಜೀವನದಲ್ಲಿ ಕನಸು, ಆದರ್ಶ, ಆನಂದ ಕಟ್ಟಿಕೊಳ್ಳಲು ಮನೋಶಕ್ತಿ ವಿತರಿಸುವ ಹಂಚಿಕೆದಾರ. ಅವನು ತನ್ನ ಈ ಕಾರ್ಯಶಕ್ತಿಯ ಕುಂದುಕೊರತೆಯ ಬಗ್ಗೆ ಸದಾ ಕಾಲ ವಿವೇಚಿಸುವುದರಲ್ಲಿ, ಈ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸದಾ ಕಾಲ ಮಗ್ನನಾಗಿರುವಲ್ಲಿ ಮತ್ತು ಆ ಮೂಲಕ ಸಮಾಜದ ವೈಚಾರಿಕ ಮತ್ತು ವಾಸ್ತವ ಜಗತ್ತಿನ ಸ್ಥಿತಿ ಸುಧಾರಣೆಗೆ ಪ್ರಾಮಾಣಿಕವಾಗಿ ಸದಾ ಕಾಲ ತೊಡಗಿಸಿಕೊಂಡಿರುವಲ್ಲಿ ಖುಷಿ ಕಾಣುತ್ತಾನೆ. ಕವಿಯ ಅಹಂಕಾರ ತಣಿಸುವ ಮತ್ತು ಅವನ ಸ್ವರತಿ ಸಂಪ್ರೀತಿಯನ್ನು ಉದ್ದೀಪಿಸುವ ಕೇವಲ ಹೊಗಳಿಕೆ, ಕೀರ್ತಿ ಮತ್ತು ಅಭಿಮಾನಗಳಿಗೆ ತನ್ನನ್ನೆ ತಾನು ತೆತ್ತುಕೊಳ್ಳುವುದಿಲ್ಲ ಅಥವಾ ಅಂಥ ವಿಚಾರಗಳಿಗೆ ಮಣಿಯುವುದಿಲ್ಲ. ಹಾಗಾಗಿ ಅವನಿಗೆ ನೀಡಲಾಗುವ ಗೌರವ, ಸನ್ಮಾನ, ಪ್ರಶಸ್ತಿ, ಬಹುಮಾನ, ಪದವಿ, ಬಿರುದುಗಳು ಇತರರು ತನ್ನ ಬಗ್ಗೆ ತೋರುವ ಭಾವಾಭಿವ್ಯಕ್ತಿಯೆ ಹೊರತು ಅದೇ ತನ್ನ ಜೀವಮಾನ ಸಾಧನೆಯಲ್ಲ ಎಂಬ ಅರಿವು ಇರುತ್ತದೆ. ನೊಂದವನ ಕಣ್ಣಲ್ಲಿ ನಲಿವಿನ ನಗು ಹುಟ್ಟಿಸುವ ಕವಿ/ಕಲಾವಿದನ ಕಾರ್ಯಕ್ಕೆ ಯಾವ ಕೀರ್ತಿ ಪತಾಕೆಗಳು, ಯಾವ ಬಿರುದು ಬಹುಮಾನಗಳು ಸಮಾನ? ಕತ್ತಲಾಗಸದಲ್ಲಿ ಮಿನುಗುವ ಭರವಸೆಯ ಬೆಳ್ಳಿಚುಕ್ಕಿಗೆ ಉಂಟೆ ಮತ್ತೊಂದು ಸರಿಸಾಟಿ?  ಕೀರ್ತಿ, ಬಿರುದು ಬಹುಮಾನಗಳಿಗಾಗಿನ ಹಂಬಲಿಕೆ ಮತ್ತು ಬಾಳಿನಲ್ಲಿ ಬೆಳಕಿನ ಭರವಸೆ ನೀಡುವ ಆತ್ಮವಿಶ್ವಾಸ ಇವೆರಡರ ನಡುವಿನ ಅಂತರ ಅದೆಷ್ಟು ಅಗಾಧ!
ಮಾನವ ದೌರ್ಬಲ್ಯದ ಅಗಾಧತೆ, ಕ್ರೌರ್ಯತೆ, ಭೀಕರತೆಯನ್ನು ಇಡಿ ಮಾನವ ಜನಾಂಗಕ್ಕೆ ಮನವರಿಕೆ ಮಾಡಿಕೊಡುವ ಅರಿವಿನ ಹಾದಿಯಲ್ಲಿ ಇರುವವರೆ ಅಂಥ ಒಣ ಹೆಮ್ಮೆಯ ಮಾನವ ದೌರ್ಬಲ್ಯದ ಪ್ರಪಾತಕ್ಕೆ ಬೀಳಲು ಮುಂದಾದಲ್ಲಿ, ಆಗ ಅದಕ್ಕಾಗಿ ಮರುಗುವುದನ್ನು ಬಿಟ್ಟು, ಮಾನವನ ನಿಡಿದಾದ ದುರಂತ ಹಾದಿಯ ಕಂಡು ನಿಟ್ಟುಸಿರು ಬಿಡುವುದನ್ನು ಬಿಟ್ಟು, ದಿಗ್ ಭ್ರಮಿತನಾಗುವುದನ್ನು ಬಿಟ್ಟು ಬೇರೇನು ಮಾಡಲು ಸಾಧ್ಯ? ಓದುಗ ಎಂಬ ಸಮುದಾಯ ಹಿತದೃಷ್ಟಿಗಿಂತ ಲೇಖಕ ಎಂಬ ವೈಯಕ್ತಿಕ ಹಿತದೃಷ್ಟಿ ಮುಂಚೂಣಿಯಲ್ಲಿರುವಾಗ ಬೇರೇನು ಮಾಡಲು ಸಾಧ್ಯ?

1 ಕಾಮೆಂಟ್‌:

lakshmikanth s.b ಹೇಳಿದರು...

ನಿಮ್ಮ ಈ ಲೇಖನ ಚೆನ್ನಾಗಿದೆ. ಕವಿಯ ಆಸಕ್ತಿ, ಅವನ ಹೊಣೆಗಾರಿಕೆ ಬಗ್ಗೆ ತುಂಬಾ ಅರ್ಥಪೂರ್ಣವಾಗಿ ಬರೆದಿದ್ದೀರಿ.ಸಾಮಾನ್ಯವಾಗಿ ಇವತ್ತಿನ ಒಬ್ಬ ಲೇಖಕ ತನ್ನ ಬಗ್ಗೆ ಹೊಗಳಿಸಿಕೊಳ್ಳುವ ಪ್ರಯತ್ನದಲ್ಲಿ ಮುಂದಿರುತ್ತಾನೆಯೇ ಹೊರತು ಹೊಗಳಿಕೆಯಿಂದ ಅಥವಾ ತನ್ನನ್ನು ಬಿಂಬಿಸಿಕೊಳ್ಳುವ ಪ್ರಯತ್ನದಿಂದ ದೂರ ಉಳಿಯಲು ಬಯಸುತ್ತಿಲ್ಲ ಎಂದು ಅನಿಸುತ್ತಿದೆ. ಆದ್ದರಿಂದ ನಿಮ್ಮ ಈ ಲೇಖನ ಓದುಗರ ಮನದ ಬಯಕೆಯನ್ನು ಅರಿಯುವ ಕವಿ ಅಥವಾ ಲೇಖಕನನ್ನು ಹುಡುಕಲು, ಅರಸಲು ಪ್ರೇರೇಪಿಸುತ್ತಿದೆ.ನಿಮ್ಮ ಈ ಲೇಖನವು ಎಲ್ಲಾ ಕವಿ,ಲೇಖಕ,ಬರಹಗಾರರಿಗೂ ತಮ್ಮ ಕರ್ತವ್ಯದ ಬಗ್ಗೆ ಮಾರ್ಗದರ್ಶಕನಂತೆ ಇದೆ.

ಧನ್ಯವಾದಗಳು
ಲಕ್ಷ್ಮೀಕಾಂತ್ ಎಸ್.ಬಿ