ಬುಧವಾರ, ಮೇ 16, 2012

ಭೋಜನಶಾಲಾ ಮತ್ತು ವೈಭವೀಕರಣ

ಕರ್ನಾಟಕದ ಗತವನ್ನು ವೈಭವೀಕರಿಸುವ ಪ್ರಕ್ರಿಯೆಯೊಂದು ಕರ್ನಾಟಕದ ಏಕೀಕರಣ ಚಳವಳಿಯಲ್ಲಿ ಭಾವನಾತ್ಮಕ ಪೂರ್ವಭಾವಿ ನೆಲೆಯನ್ನು ಒದಗಿಸಿದ್ದು ಇಂದು ಇತಿಹಾಸದ ಭಾಗವಾಗಿದೆ. ಭಾರತೀಯ ಪುನರುತ್ಥಾನ ಕಾಲದಲ್ಲಿ ಭಾರತೀಯರು ಅನಾಗರಿಕರು, ಆಳ್ವಿಕೆಗೆ ಒಳಪಡಲು ಅರ್ಹರು ಎಂಬ ವಸಾಹತುಶಾಹಿ ಹುಟ್ಟಿಹಾಕಿದ ವಾದಕ್ಕೆ ಪ್ರತಿಯಾಗಿ ಅನ್ಯ ಸಂಸ್ಕೃತಿಗಳ ದಾಳಿಗಳ ಪೂರ್ವದಲ್ಲಿ ಭಾರತ ಉನ್ನತ ಸಂಸ್ಕೃತಿಯನ್ನು ಹೊಂದಿತ್ತ್ತು ಎಂದು ಪ್ರತಿಪಾದಿಸಲು ಪೂರ್ವವನ್ನು ವೈಭವೀಕರಿಸಿ ಮರುಕಟ್ಟಿದ ರೀತಿ ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸಿರುವಂತೆ ತೋರುತ್ತದೆ.  ಭಾರತೀಯ ಸಂದರ್ಭದಲ್ಲಿ 'ವೈಭವೀಕರಣ' ಅನ್ಯ ಸಂಸ್ಕೃತಿಗೆ ಸೆಡ್ಡು ಹೊಡೆಯಲು ಬಳಕೆಯಾಗಿದ್ದರೆ, ಕರ್ನಾಟಕದ ಸಂದರ್ಭದಲ್ಲಿ ಬೇರೆ ಬೇರೆ ಪ್ರಾಂತಗಳ ಆಡಳಿತಗಳಡಿ ಹರಿದು ಹಂಚಿಹೋಗಿದ್ದ ಕನ್ನಡದ ಜನ ಮತ್ತು ಪ್ರದೇಶಗಳನ್ನು ಕನ್ನಡ ಹಿತಾಸಕ್ತಿಯ(?) ಆಡಳಿತದ ಅಡಿಯಲ್ಲಿ ಒಗ್ಗೂಡಿಸುವ ಚಳವಳಿಗೆ ವೈಚಾರಿಕ ನೆಲೆ ಒದಗಿಸುವ ಪರಿಕರವಾಗಿ ಬಳಕೆಯಾಗಿರುವಂತಿದೆ. ಆದರೂ ಈ ಎರಡೂ ಸಂದರ್ಭದಲ್ಲಿ ಮೈದೋರಿದ ಸಾಂಸ್ಕೃತಿಕ ರಾಜಕಾರಣ ಒಂದೇ ಬಗೆಯದಾಗಿ ಇರುವಂತೆ ಕಂಡುಬರುತ್ತದೆಯೆ? ಬಹು ಸಮುದಾಯಗಳ ಸಮಾಜದಲ್ಲಿ ನಿರ್ದಿಷ್ಟ ಸಮುದಾಯವೊಂದು ತನ್ನ ಹಿತಾಸಕ್ತಿ ಕೇಂದ್ರಿತ ತತ್ವ ಧೋರಣೆಯನ್ನು ಪ್ರತಿಪಾದಿಸಲು ಮತ್ತು ಈ ಧೋರಣೆಯ ನಕಾರಾತ್ಮಕ ಪರಿಣಾಮಗಳನ್ನು ಸಕಾರಾತ್ಮಕವಾಗಿ ಬಿಂಬಿಸಲು ವೈಭವೀಕರಣದ ಚಿಂತನಾಕ್ರಮವನ್ನು ಬಳಕೆಗೆ ತಂದಿತೆ? ಇದು ಅಧ್ಯಯನಗಳಿಂದ ಸ್ಪಷ್ಟವಾಗಬೇಕಾದ ಅಂಶವಾಗಿದೆ.

ವೈಭವೀಕರಣ

ಈ ಚಿಂತನಾ ಕ್ರಮ ಭಾರತ ಮತ್ತು ಕರ್ನಾಟಕದ ಸಂದರ್ಭದಲ್ಲಿ ಮೈ ಪಡೆದುಕೊಂಡಿದ್ದಾದರೂ ಹೇಗೆ ಎಂಬುದನ್ನು ಸೂಚಿಸಲು ಮೇಲಿನ ಆರಂಭಿಕ ಮಾತುಗಳನ್ನು ಆಡಬೇಕಾಯಿತು. ಏಕೆಂದರೆ ವಿಜಯನಗರಕ್ಕೆ ಸಂಬಂಧಪಟ್ಟ ಇತಿಹಾಸ ಮತ್ತು ಸ್ಮಾರಕಗಳಿಗೂ 'ವೈಭವೀಕರಣ' ಚಿಂತನೆಯ ಪರಿಕರ ಬಳಕೆಯಾಗಿರುವಂತಿದೆ. ವಿಜಯನಗರ ಸಾಮ್ರಾಜ್ಯದ ಅಧಿಕಾರ ಕೇಂದ್ರವಿದ್ದ ಅಂದಿನ ಪ್ರದೇಶವಿಂದು 'ಹಾಳು ಹಂಪೆ' ಎಂದು ಪ್ರಸಿದ್ಧಿಪಡೆದಿದೆ. ಈ ಜೋಡಿಪದಗಳು ಪ್ರಸ್ತುತ ಸ್ಥಿತಿ ಕುರಿತು ಕೊರಗನ್ನೂ ಅದರ ಪೂರ್ವದ ಸ್ಥಿತಿ ಕುರಿತು ವೈಭವೀಕೃತ ಹೆಮ್ಮೆಯ ಕಲ್ಪನೆಯನ್ನೂ ಕಟ್ಟಿಕೊಡುತ್ತವೆ. ಇತಿಹಾಸದ ಪುಟಗಳು ಕೂಡ 'ವೈಭವ'ದ ಕನ್ನಡಿಯ ಮೂಲಕವೇ ಹಿಂದಿನ ಸ್ಥಿತಿಗತಿಗಳನ್ನು ಕಾಣಿಸಲು ಮತ್ತು ತಕ್ಕ ಸಾಕ್ಷ್ಯಾಧಾರಗಳನ್ನು ಕಟ್ಟಿಕೊಡಲು ಸಕಲ ಪ್ರಯತ್ನಪಟ್ಟಿರುವಂತೆ ಕಾಣುತ್ತದೆ. ಸಾಮ್ರಾಜ್ಯದ ನಿರ್ದಿಷ್ಟ ಅವಧಿಯಲ್ಲಿ ಅರಮನೆ ಹೊಂದಿದ್ದ ಸಂಪತ್ತಿನ ವೈಭವವನ್ನು ಇಡೀ ಸಾಮ್ರಾಜ್ಯದ ಸುಖ ಸಂಪತ್ತಿನ ವೈಭವವಾಗಿ ಭಾವಿಸುವಂತೆ ಕಾಣಿಸಲಾಗುತ್ತದೆ. ಹಿಂದೂ ಧರ್ಮದ ಶೈವ ಮತ್ತು ವೈಷ್ಣವ ಶಾಖೆಗಳ ಹಿರಿಮೆಯನ್ನು ವಿಜಯನಗರ ಸಾಮ್ರಾಜ್ಯದೊಂದಿಗೆ ಸಮೀಕರಿಸುವ ಇತಿಹಾಸದ ನಿರೂಪಣೆಗಳು, ಸಂಗಮ ವಂಶದ ಎರಡನೆಯ ವಿರೂಪಾಕ್ಷ 1470ರಲ್ಲಿ ತುಂಗಭದ್ರೆಯ ವರೆಗೂ ತನ್ನನ್ನು ಹಿಮ್ಮೆಟ್ಟಿಸಿಕೊಂಡು ಬಂದ ಬಹಮನಿ ಸುಲ್ತಾನ ಮೂರನೆಯ ಮಹಮದ್ ಶಾ ಲಷ್ಕರ್ ನಿಗೆ ತನ್ನ ಮಗಳನ್ನು ಮದುವೆ ಮಾಡಿಕೊಟ್ಟು ರಾಜಿ ಮೂಲಕ ತನ್ನ ರಾಜ್ಯ ಭದ್ರ ಮಾಡಿಕೊಂಡ ಸಂಗತಿಯನ್ನು ಮುಂಚೂಣಿಗೆ ತರುವುದೆ ಇಲ್ಲ. ತಾಳಿಕೋಟೆ ಯುದ್ಧದಲ್ಲಿ ಎಡಪಾರ್ಶ್ವದಲ್ಲಿ ತಿರುಮಲನೂ ಮಧ್ಯದಲ್ಲಿ ರಾಮರಾಯನೂ ಬಲಪಾರ್ಶ್ವದಲ್ಲಿ ವೆಂಕಟಾದ್ರಿಯೂ ವಿಜಯನಗರ ಸೈನ್ಯದ ದಂಡನಾಯಕರಾಗಿದ್ದು(ಸಿವೆಲ್ ಪು.209), ವೈರಿಪಡೆಗಳು ರಾಮರಾಯನ ತಲೆ ಕಡಿದ ನಂತರ ಉಳಿದಿಬ್ಬರು ದಂಡನಾಯಕರು ಸೈನ್ಯವನ್ನು ಮುನ್ನಡೆಸದೆ ವಿಜಯನಗರಕ್ಕೆ ಒಂದೇ ಉಸಿರಲ್ಲಿ ಓಡಿಬಂದು ಅರಮನೆಯ ಚರ ಸಂಪತ್ತನ್ನು ಪೆನುಗೊಂಡೆಗೆ ಲೂಟಿ ಮಾಡಿಕೊಂಡು ಹೋದ ಬಗ್ಗೆಯಾಗಲೀ ಈ ಮೂಲಕ ವೈರಿಪಡೆಗಳಿಂದ ಒಳಗೊಂಡು ಹಲವು ಬಗೆಗಳಲ್ಲಿ ಲೂಟಿ-ದರೋಡೆ ಪ್ರಕ್ರಿಯೆಗೆ ಮತ್ತು ವಿಜಯನಗರದ ಅರಾಜಕತೆಗೆ ನಾಂದಿ ಹಾಡಿದ ಬಗ್ಗೆಯಾಗಲೀ ಚಕಾರವೆತ್ತದೆ ವಿಜಯನಗರದ ನಾಶವನ್ನು ಬಹಮನಿ ಸೈನಿಕರ ತಲೆಗೆ ಕಟ್ಟಿಬಿಡಲಾಗಿದೆ. ಇಂಥ ಎಲ್ಲ ಸಂಗತಿಗಳ ಹಿಂದೆ 'ವೈಭವೀಕರಣ'ದ ಪರಿಕರವೆ ಕಾರ್ಯನಿರ್ವಹಿಸಿದೆ ಎನ್ನಬೇಕು. ಐತಿಹಾಸಿಕ ಅಂಶಗಳ ಸೂಕ್ಷ್ಮ ಹಾಗೂ ಸಮಗ್ರ ಪರಿಶೀಲನೆಯಿಂದ ವಿಜಯನಗರದ ಇತಿಹಾಸಕ್ಕೂ 'ವೈಭವೀಕರಣ' ಚಿಂತನೆಗೂ ನಂಟಿರುವುದು ತಿಳಿಯಬಹುದು. ಅಷ್ಟೇ ಅಲ್ಲ ಇಂದಿನ ಹಂಪಿಯಲ್ಲಿರುವ ಸ್ಮಾರಕಗಳೂ ಅವಶೇಷಗಳೂ ಈ ಪ್ರಕ್ರಿಯೆಯಿಂದ ಹೊರತಾಗಿರುವಂತೆ ಕಾಣುವುದಿಲ್ಲ. 

ಉಗ್ರ ನರಸಿಂಹ

ವಿಜಯನಗರದ ಅವನತಿಯ ಕಾಲಾವಧಿಯಲ್ಲಿ ಉಗ್ರ ನರಸಿಂಹ ವಿಗ್ರಹ ಹಾಳಾಯಿತೆಂದು ಹೇಳಲಾಗುತ್ತದೆ. ಇದರ ಅವಶೇಷಗಳ ಜೋಡಣೆ ಮತ್ತು ಸಂರಕ್ಷಣೆ ಕುರಿತ ಪ್ರಕರಣವನ್ನೆ 'ವೈಭವೀಕರಣ' ಚಿಂತನೆಗೆ ನಿದರ್ಶನಾರ್ಥವಾಗಿ ನೋಡಬಹುದು. ಹಂಪಿ ಬೇರೆ ಬೇರೆ ಕಾಲಘಟ್ಟಗಳಲ್ಲಿ ಬೌದ್ಧ, ಜೈನ, ಶೈವ, ವೈಷ್ಣವ ಮತಧರ್ಮಗಳ ಕೇಂದ್ರ ಮಾತ್ರವಾಗಿರದೆ ಎಲ್ಲ ಕಾಲಗಳಲ್ಲಿ ಸ್ತ್ರೀ ದೈವಾರಾಧನೆಯ ಕೇಂದ್ರವೂ ಆಗಿತ್ತು. ರಾಜ್ಯ ಮತ್ತು ಕೇಂದ್ರ ಸರಕಾರಗಳ ಸಂಬಂಧಪಟ್ಟ ಇಲಾಖೆಗಳಲ್ಲಿದ್ದ ಅಧಿಕಾರಿಗಳು ತಮ್ಮ ನಿರ್ದಿಷ್ಟ ಮತ ಧರ್ಮದ ದೈವವನ್ನು ಹಂಪಿಯ ಪ್ರಾತಿನಿಧಿಕ ದೈವವನ್ನಾಗಿ ಮುಂಚೂಣಿಗೆ ತರುವ ಅವಸರದಲ್ಲಿ, ಒಡೆದು ಹೋಗಿದ್ದ ನರಸಿಂಹ ವಿಗ್ರಹದ ಸಂರಕ್ಷಣಾ ಕಾರ್ಯವನ್ನು ಮೊದಲ ಆದ್ಯತೆಯ ಮೇಲೆ ಕೈಗೆತ್ತಿಕೊಂಡರು, ಮುರಿದ ಕಾಲುಗಳನ್ನು ಅಡ್ಡಪಟ್ಟಿ ಕೊಟ್ಟು ನಿಲ್ಲಿಸಿ ಉಗ್ರ ನರಸಿಂಹನೆಂದು ಹೆಸರಿಸಿದರು, ಹಂಪಿಯೆಂದರೆ ಉಗ್ರ ನರಸಿಂಹ ಮತ್ತು ಕಲ್ಲಿನ ರಥ ಎನ್ನುವಷ್ಟರ ಮಟ್ಟಿಗೆ ಅವನ್ನು ಪ್ರಸಿದ್ಧಿ ಪಡಿಸಿದರು. ಕಾಲಾನಂತರದಲ್ಲಿ ಶಿವರಾಮ ಕಾರಂತರು ಹಂಪಿಗೆ ಭೇಟಿ ನೀಡಿ ಉಗ್ರ ನರಸಿಂಹನ ಕುರಿತು ತಮ್ಮ ತಕರಾರು ತೆಗೆದರು. ಸೌಂದರ್ಯ ಪ್ರಜ್ಞೆ ಮತ್ತು ವಿವೇಚನೆ ಇಲ್ಲದೆ ಶಾಂತ ಮುಖಮುದ್ರೆಯ ಲಕ್ಷ್ಮೀನರಸಿಂಹ ವಿಗ್ರಹಕ್ಕೆ ಅಡ್ಡಪಟ್ಟಿ ಕೊಟ್ಟು ಸಂರಕ್ಷಣೆಯ ಹೆಸರಿನಲ್ಲಿ ವಿಕಾರಗೊಳಿಸಿರುವುದಲ್ಲದೆ ಉಗ್ರ ನರಸಿಂಹನೆಂದು ಪ್ರಚುರಪಡಿಸಿದ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡರು. ಕಾರಂತರ ವಾದಕ್ಕೆ ಪೂರಕವಾಗಿ ನರಸಿಂಹ ವಿಗ್ರಹದ ಎಡತೊಡೆಯ ಮೇಲೆ ಆಸೀನಳಾಗಿದ್ದ ಲಕ್ಷ್ಮೀ ವಿಗ್ರಹದ ಕೈಯೊಂದು ಬೆನ್ನ ಹಿಂಭಾಗಕ್ಕೆ ಆಸರೆಗಾಗಿ ಚಾಚಿಕೊಂಡಿದ್ದು, ಮುರಿದುಹೋದ ಅದರ ಮುಂದಿನ ಭಾಗ ಇಂದಿಗೂ ಹಾಗೆಯೇ ಉಳಿದಿದೆ.  ಕಾರಂತರ ಅಭಿಪ್ರಾಯ ವ್ಯಾಪಕ ಮನ್ನಣೆಗೆ ಪಾತ್ರವಾಯಿತು. ಇಲಾಖೆಯ ವಿಕೃತರೂಪ ಶಾಶ್ವತವಾಗಿ ಉಳಿದುಹೋಯಿತು. ಈ ಎಲ್ಲ ಅವಾಂತರಗಳಿಗೆ ಮೂಲಬೀಜ ಸ್ವಮತ ಕುರಿತ ಅಂಧಾಭಿಮಾನ ಮತ್ತು ಸ್ವಮತದ ದೈವವನ್ನು ಪ್ರಸ್ತುತ ಸಮಾಜದಲ್ಲಿ ಪ್ರಭಾವಿಯನ್ನಾಗಿಯೂ ಉನ್ನತಸ್ಥಿತಿಯಲ್ಲಿಯೂ ಇರಿಸಬೇಕೆನ್ನುವ ಹುಚ್ಚುಸಾಹಸ ಮಾತ್ರ. ಇಲ್ಲಿ ಇತಿಹಾಸ ನಿಷ್ಟೆಯಾಗಲೀ ಆ ಮೂಲಕ ಒಂದು ಕಾಲಘಟ್ಟದ ಸಾಂಸ್ಕೃತಿಕ ಸ್ಥಿತಿಗತಿಯ ಸಂರಕ್ಷಣೆಯಾಗಲೀ ಎಲ್ಲವೂ ಶೂನ್ಯಸ್ಥಿತಿ ತಲುಪಿತ್ತು ಎಂಬುದು ಬೇರೆ ಮಾತು. ಪ್ರಾಚ್ಯ ವಸ್ತುಗಳ ಸಂರಕ್ಷಣೆಯ ಸಂದರ್ಭದಲ್ಲಿ ವೈಭವೀಕರಣ ಪ್ರಕ್ರಿಯೆ ಕಾರ್ಯಗತಗೊಂಡ ಸ್ವರೂಪಕ್ಕೆ ಇದೊಂದು ಉತ್ತಮ ಪ್ರಕರಣವಾಗಿದ್ದು, ಭೋಜನಶಾಲಾ ಸ್ಮಾರಕವನ್ನು ಕೂಡ ಇದೇ ಹಿನ್ನೆಲೆಯಲ್ಲಿ ಪರಿಶೀಲಿಸಬಹುದು.

ಭೋಜನಶಾಲಾ

ಕಮಲಾಪುರದಿಂದ ಹಂಪಿಗೆ ಹೋಗುವ ರಸ್ತೆಯಲ್ಲಿ ಕೋಟೆಗೋಡೆ, ರಾಣಿ ಸ್ನಾನಗೃಹ ದಾಟಿ ಮುಂದೆ ಹೋದಲ್ಲಿ ಅಂದರೆ ಕಮಲಾಪುರದಿಂದ ಒಂದು ಕಿ.ಮೀ. ನಂತರದಲ್ಲಿ ರಸ್ತೆಯ ಎಡಗಡೆಗೆ ಭೋಜನಶಾಲಾ ಎಂಬ ಬೋರ್ಡ್ (ಕಳೆದ ಶತಮಾನದ ತೊಂಬತ್ತರ ದಶಕದಲ್ಲಿ) ಇತ್ತು. (ಈಗ ಬೋರ್ಡ್ ಹಾಕಲು ಹೊಸ ಕಂಬ ನೆಡಲಾಗಿದೆ. ಬೋರ್ಡ್ ಇಲ್ಲ.) ಅದರ ಪಕ್ಕದಲ್ಲಿ ರಸ್ತೆಯಿಂದ ಸುಮಾರು ನೂರಿಪ್ಪತ್ತು ನೂರನಲವತ್ತು ಅಡಿಗಳ ದೂರದ ವರೆಗೆ ಗ್ರಾನೈಟ್ ಕಲ್ಲಿನಿಂದ ಕಟ್ಟಿದ, ಇಬ್ಬರು ಓಡಾಡಬಹುದಾದಷ್ಟು ಅಗಲವಿರುವ ನಾಲೆಯೊಂದು ಚಾಚಿಕೊಂಡಿದೆ. ಕೆಳಗೂ ಗ್ರಾನೈಟ್ ಕಲ್ಲು ಹಾಸಿರುವುದನ್ನು ಗುರುತಿಸಬಹುದು. ನಾಲೆಯ ಎರಡೂ ಬದಿಯ ಕಲ್ಲು ದಂಡೆಯ ಮೇಲೆ ಜೋಡಿಸಿದ ಕಪ್ಪು ಕಲ್ಲು ಚಪ್ಪಡಿಗಳ ಮೇಲೆ ಕೆತ್ತಿದ ಬಾಳೆ ಎಲೆ ಹಾಗೂ ಗುಂಡಗಿನ ಊಟದ ತಟ್ಟೆ ಮತ್ತು ಅದರ ಸುತ್ತ ಸಣ್ಣ ಬಟ್ಟಲುಗಳ ಆಕಾರಗಳು ಪ್ರವಾಸಿಗರ ಕುತೂಹಲವನ್ನು ಸೆಳೆಯುತ್ತವೆ. ರಸ್ತೆಯಂಚಿನ ಅರಂಭದಲ್ಲಿ ಅಂಥ ಕಪ್ಪು ಚಪ್ಪಡಿ ಕಲ್ಲುಗಳನ್ನು ಮಕಾಡೆ ಹಾಕಿದಂತಿದ್ದು ಅದರ ಮೇಲೆ ಯಾವುದೇ ಕೆತ್ತನೆಯ ಚಿತ್ತಾರ ಕಂಡುಬರುವುದಿಲ್ಲ. ಸುಮಾರು ಎರಡೂವರೆ ಅಡಿ ಅಗಲ ಮತ್ತು ಏಳೆಂಟು ಆಡಿ ಉದ್ದದ ಅಂಥ ಒರಟು ಚಪ್ಪಡಿ ಕಪ್ಪುಕಲ್ಲುಗಳು ಎರಡೂ ದಂಡೆಯ ಮೇಲೆ ಸುಮಾರು ಎರಡು ಮೂರು ಇರಬಹುದು. ರಸ್ತೆಯಿಂದ ಸುಮಾರು ಮೂವತ್ತು ನಲವತ್ತು ಅಡಿಗಳಲ್ಲಿ ನಾಲೆ ಸುಮಾರು 70 ಡಿಗ್ರಿಗಳಲ್ಲಿ ಎಡಕ್ಕೆ ತಿರುಗುತ್ತದೆ. ಹಾಗೆಯೆ ಮುಂದೆ ಹೋದಲ್ಲಿ ಊಟದ ತಟ್ಟೆಗಳು ಕೆತ್ತಿದ ಕಪ್ಪು ಕಲ್ಲಿನ ಚಪ್ಪಡಿಗಳು ಇಲ್ಲವಾಗಿ, ಕೇವಲ ಗ್ರಾನೈಟ್ ಕಲ್ಲಿನ ನಾಲೆ ಮುಂದುವರೆಯುತ್ತದೆ. ಈ ಗ್ರಾನೈಟ್ ಕಲ್ಲುಗಳ ಮೇಲೂ ಅಲ್ಲಲ್ಲಿ ಕೆತ್ತನೆ ಮಾಡಿದ್ದು ಆಕಾರಗಳು ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಕೆಲವು ಕಡೆ ಊಟದ ತಟ್ಟೆಯಾಕಾರ ಕೆತ್ತಿರುವ ಗ್ರಾನೈಟ್ ಕಲ್ಲುಗಳನ್ನು ನಾಲೆ ದಂಡೆಯ ಕಟ್ಟಡಕ್ಕೆ ಬಳಸಿರುವುದು ಕಂಡುಬರುತ್ತದೆ. ಈ ನಾಲೆ ಮುಗಿಯುವಲ್ಲಿ ಸೈಜುಗಲ್ಲುಗಳ ರಾಸಿ ಬಿದ್ದಿದೆ. ನಾಲೆಯ ಎರಡೂ ದಂಡೆಗಳಿಂದ ಅದರ ಹಿಂಭಾಗಕ್ಕೆ ಹತ್ತು ಅಡಿಗಳವರೆಗೆ ಕಲ್ಲುಕಟ್ಟಿ ವೇದಿಕೆಯಂತೆ ಎತ್ತರಿಸಲಾಗಿದೆ. ಬಟ್ಟ ಬಯಲಲ್ಲಿ, ನಾಲೆಯ ಮೇಲಿರುವ ಕಲ್ಲು ತಟ್ಟೆಗಳು ಯಾವ ಬಗೆಯ ಭೋಜನ ಶಾಲೆ ಆಗಿರಬಹುದು ಎಂಬ ಅನುಮಾನ ಈ ಸ್ಮಾರಕವನ್ನು ನೋಡುತ್ತಿರುವಂತೆ ಯಾವ ಪ್ರವಾಸಿಗನಿಗೂ ಕಾಡದೆ ಇರದು. ಊಟದ ಕಲ್ಲಿನ ತಟ್ಟೆಗಳಿರುವ ನಾಲೆ ರಸ್ತೆಯಂಚಿನಲ್ಲಿ ಇದ್ದಕ್ಕಿದ್ದಂತೆ ಕೊನೆಗೊಂಡಂತೆ ಭಾಸವಾಗುತ್ತದೆ. ಸ್ವಲ್ಪ ಎಚ್ಚರದಿಂದ ಗಮನಿಸಿದರೆ ಬ್ರಿಟಿಷರು ಕಮಲಾಪುರದಿಂದ ಹಂಪಿಗೆ ಹೊಸ ರಸ್ತೆ ಮಾಡುವ ಸಂದರ್ಭದಲ್ಲಿ ಇಂದಿನ ರಸ್ತೆಯ ಭಾಗದಲ್ಲಿ ಮುಂದುವರೆದಿದ್ದ ಕಲ್ಲಿನ ಊಟದ ತಟ್ಟೆಗಳ ನಾಲೆಯನ್ನು ಅಗೆದು ನಾಶಪಡಿಸಿರಬಹುದಾದ ಸಾಧ್ಯತೆ ಗೋಚರಿಸುತ್ತದೆ. ಬಟ್ಟ ಬಯಲಿನಲ್ಲಿ ಊಟದ ತಟ್ಟೆಗಳನ್ನು ಕೆತ್ತಿರುವ ಕಪ್ಪು ಕಲ್ಲಿನ ಚಪ್ಪಡಿ ಹಾಸಿದ ನಾಲೆಗೆ ಭೋಜನ ಶಾಲೆ ಎಂದು ಕರೆದಿರುವುದು, ಏಕೆ? ಇದು ಕೇವಲ ಕೆತ್ತನೆ ವಿಶೇಷವೇ ಅಥವಾ ಈ ಕಲ್ಲಿನ ತಟ್ಟೆಗಳ ಮೇಲೆ ಊಟಕ್ಕೆ ಬಡಿಸಲಾಗುತ್ತಿತ್ತೆ? ಹಾಗಿದ್ದಲ್ಲಿ ಬಟ್ಟ ಬಯಲಲ್ಲಿ ಊಟ ಮಾಡುತಿದ್ದ ಜನವರ್ಗ ಯಾವುದು? ಭೋಜನ ಶಾಲೆಯ ನುಡಿಗಟ್ಟು ನೀಡುವ ಭವ್ಯ ಮತ್ತು ವೈಭವದ ಕಲ್ಪನೆ ಮತ್ತು ಬೋಳುಬೋಳಾದ ಕಲ್ಲಿನ ಊಟದ ತಟ್ಟೆಗಳ ನಾಲೆ ಇರುವ ಸ್ಥಿತಿಯ ವೈರುಧ್ಯದ ನಡುವೆ ಇದ್ದಿರಬಹುದಾದ ವಾಸ್ತವ ಯಾವುದು? ಮೂಲ ಸ್ಥಿತಿ ಮತ್ತು ಕಾಲಾಂತರದಲ್ಲಿ ಬದಲಾದ ಸ್ಥಿತಿ- ಇವುಗಳ ನಡುವಿನ ಸಂಬಂಧ ಮತ್ತು ಸ್ವರೂಪಗಳು ಯಾವ ಬಗೆಯವು? 

ರಸ್ತೆಯ ಆಚೆಗೆ ಆದರೆ ಸ್ವಲ್ಪ ಮುಂದಕ್ಕೆ ಮಂಟಪದ ಆಕಾರವುಳ್ಳ ಒಂದು ಕಟ್ಟಡ ಇಂದಿಗೂ ಸುಭದ್ರವಾಗಿದೆ. ಕಲ್ಲಿನ ತೊಟ್ಟಿ/ಗಚ್ಚು ಇರುವ ಅದನ್ನು ನೀರಿನ ಅರವಂಟಿಗೆ ಎಂದು ಹೇಳಲಾಗುತ್ತದೆ.  ಈ ಕಟ್ಟಡ ಕಟ್ಟಿದ ಕಾಲಕ್ಕೆ ಸುಂದರವಾಗಿದ್ದಿಬಹುದು. ಆದರೆ ಅದನ್ನು ನೀರಿನ ಅರವಂಟಿಗೆಗಾಗಿಯೆ ಕಟ್ಟಿಸಲಾಗಿತ್ತು ಎನ್ನುವುದಾದರೆ ಈಗಲೂ ಭವ್ಯವಾಗಿ ಕಾಣುತ್ತದೆ. ಅರಮನೆಗೆ ಹೋಗಿಬರಲು ಸಣ್ಣ ಬಾಗಿಲೊಂದು ಸ್ವಲ್ಪ ದೂರದಲ್ಲೆ ಇದ್ದು ಅರಮನೆಗೆ ಅಂಟಿಕೊಂಡಂತಿರುವ, ಅರಮನೆಯ ಅಕ್ಕಪಕ್ಕದ ಈ ಜಾಗ ಸಾಮಾನ್ಯ ಜನರಿಗೆ ನಿರ್ಬಂಧಿತ ಪ್ರದೇಶವಾಗಿರುವಂತೆ ಕಾಣುತ್ತದೆ. ಇನ್ನೂ ಹೊರನಾಡ ಅಗುಂತುಕ ಪ್ರವಾಸಿಗರಿಗಂತೂ ಇಲ್ಲಿಗೆ ಖಂಡಿತ ಪ್ರವೇಶವಿರಲಾರದು. ಹಾಗಿದ್ದಲ್ಲಿ ಇಲ್ಲಿನ ನೀರಿನ ಅರವಂಟಿಗೆ ಯಾರಿಗಾಗಿ ಕಟ್ಟಿಸಿದ್ದಿರಬಹುದು ಎಂಬ ಪ್ರಶ್ನೆ ಎದುರಾಗುತ್ತದೆ. ಇಟ್ಟಿಗೆ ಗೋಡೆಯದು ಇದ್ದಿರಬಹುದಾದ ಐದಾರು ಕಂಬಗಳನ್ನೊಳಗೊಂಡು ಹಲವು ಕಮಾನುಗಳುಳ್ಳ ಈ ಕಟ್ಟಡವನ್ನು ದಾಟಿ ಬೇಲಿಯ ಒಳಗೆ ಹೋದರೆ ಕಲ್ಲು ಮಣ್ಣಿನ ಸಣ್ಣ ಪುಟ್ಟ ಗುಡ್ಡೆಗಳು, ಕಲ್ಲು ಮಳ್ಳು, ಮುಳ್ಳುಗಿಡಗಳನ್ನು ಒಳಗೊಂಡು ಇತರ ಎಲ್ಲ ಬಗೆಯ ಸಣ್ಣ ಪುಟ್ಟ ಗಿಡಗಳು ವ್ಯಾಪಿಸಿಕೊಂಡಿವೆ. ಸ್ಥಳಮೂಲ ಬಲ್ಲವರೊಂದಿಗೆ ಮುಂದೆ ಹೋದಲ್ಲಿ ಅಕ್ಕಪಕ್ಕದಲ್ಲೆ ಅಳವಡಿಸಿದ್ದ ಐದಾರು ಇಂಚು ಅಗಲದ ಸುಟ್ಟ ಮಣ್ಣಿನ ಪೈಪುಗಳ ಮುಂಭಾಗದ ಅವಶೇಷ ಅಲ್ಲಿ ಕಂಡುಬರುತ್ತದೆ. ಹಾಗೆಯೆ ರಸ್ತೆಗೆ ಪರ್ಯಾಯವಾಗಿ ಮುಂದುವರೆದಲ್ಲಿ ಗಾರೆಯಿಂದ ಮಾಡಿದ ದೊಡ್ಡ ತೊಟ್ಟಿಯೊಂದು ಕಣ್ಣಿಗೆ ಬೀಳುತ್ತದೆ. ಅದಕ್ಕೆ ಕಮಲಾಪುರದ ದಿಕ್ಕಿನಲ್ಲಿ ಮೇಲೆ ಹೇಳಿದಂತೆ ಎರಡು ಪೈಪುಗಳು ಅಳವಡಿಕೆಯಾಗಿದ್ದು ಅದರ ವಿರುದ್ದ ದಿಕ್ಕಿನಲ್ಲಿ ಸಮಾನ ಅಂತರದ ನಡುವೆ ಇರುವ ನಾಲ್ಕು ಪೈಪುಗಳ ಬಾಯಿಗಳಿವೆ. ಬಹುಶಹ ಇದೊಂದು ಅರಮನೆಗೆ ನೀರು ವ್ಯವಸ್ಥೆ ಮಾಡುವ ನಿಯಂತ್ರಕ ಕೊಠಡಿಯಾಗಿದ್ದಿರಬಹುದೆಂಬ ಊಹೆ ತಜ್ಞ ಸ್ನೇಹಿತರದ್ದಾಗಿದೆ. ಪಯಸ್ ಸೂಚಿಸಿರುವಂತೆ ಹಣ್ಣಿನ ತೋಟಕ್ಕೆ ನೀರು ಒದಗಿಸುವ ಹಾಗೂ ಅರಮನೆಗೆ ನೀರು ಒದಗಿಸುವ ನೀರು ನಿಯಂತ್ರಕ ವ್ಯವಸ್ಥೆಯ ಭಾಗವಾಗಿ ಅರವಂಟಿಗೆ ಕಟ್ಟಡ ಮತ್ತು ಊಟದ ಕಲ್ಲಿನ ತಟ್ಟೆಗಳು ಕೆತ್ತಿರುವ ನಾಲೆ ಸೇರಿರಬಹುದೆ ಎಂಬ ಪ್ರಶ್ನೆ ಕೇಳಿಕೊಳ್ಳುವಂತೆ ಇದೆ. ಈ ಮೂರೂ ಅವಶೇಷಗಳು ಒಂದು ವ್ಯವಸ್ಥೆಗೆ ಸೇರಿದ್ದೊ ಅಥವಾ ಬೇರೆ ಬೇರೆ ವ್ಯವಸ್ಥೆಗಳು ನೆಲೆಗೊಂಡ ಏಕ ಪ್ರದೇಶವಾಗಿತ್ತೋ ನಿರ್ದಿಷ್ಟವಾಗಿ ಏನೂ ಹೇಳಲಾಗದು.

ಈ ಕುರಿತು ಸಂಬಂಧಪಟ್ಟ ಇಲಾಖೆಯಲ್ಲಿ ಕೆಲಸ ಮಾಡುವರನ್ನು ವಿಚಾರಿಸಬಹುದು. ಅವರ ಪ್ರಕಾರ ಭೋಜನಶಾಲೆಯೆಂದು ಸೂಚಿಸಿರುವ ನಾಲೆ ಕಮಲಾಪುರದ ಕೆರೆಯಿಂದ ನೀರು ಹರಿಯುವ ನಾಲೆಯಾಗಿತ್ತು, ಊಟದ ತಟ್ಟೆ ಕೆತ್ತಿರುವ ಕಪ್ಪು ಕಲ್ಲಿನ ಚಪ್ಪಡಿಗಳು ಆನೆಗೊಂದಿ ಮತ್ತು ಹಂಪಿಯ ಅರಮನೆ ಆವರಣದ ಸುತ್ತಲ ಇತರ ಸ್ಥಳಗಳಲ್ಲಿ ಕೂಡ ಕಂಡುಬರುತ್ತವೆ; ಗ್ರಾನೈಟ್ ಕಲ್ಲಿನಿಂದ ಕಟ್ಟಿದ ನಾಲೆ ಮೇಲಿರುವ ಊಟದ ತಟ್ಟೆಯ ಕಲ್ಲುಗಳು ಮೊದಲಿಗೆ ಅದೇ ಪ್ರದೇಶದಲ್ಲಿ ಇತರ ಕಡೆಗಳಲ್ಲಿದ್ದು ಅವನ್ನು ತಂದು ಇಲ್ಲಿ ಸಣ್ಣ ಕಲ್ಲುಕೊಟ್ಟು ಜೋಡಿಸಲಾಗಿದೆ; ಸಾಮ್ರಾಜ್ಯದ ಕಾಲದಲ್ಲಿ ಗಣ್ಯ ಅತಿಥಿಗಳನ್ನು ಉಪಚರಿಸಲು ಭೋಜನಶಾಲೆ ಎಂಬ ಪ್ರತ್ಯೇಕ ಕಟ್ಟಡವೊಂದು ಅರಮನೆಯ ಆವರಣದೊಳಗೊ ಹೊರಗೊ ಇದ್ದಿರಬಹುದಾಗಿದ್ದು ಅದು ಎಲ್ಲಿತ್ತೆಂಬ ಸುಳಿವು ಈಗ ಯಾರಿಗೂ ತಿಳಿಯದಾಗಿದೆ.

ಈ ವಿವರಗಳು ವಾಸ್ತವ ಸ್ಥಿತಿಗತಿಗಳಿಗೆ ಹತ್ತಿರವೆಂದು ತಿಳಿಯುವುದಾದಲ್ಲಿ, ಭೋಜನಶಾಲೆಗೂ ಊಟದ ತಟ್ಟೆ ಕೆತ್ತಿರುವ ಕಪ್ಪು ಕಲ್ಲಿನ ಚಪ್ಪಡಿಗಳಿಗೂ ಅವು ಇರುವ ಗ್ರಾನೈಟ್ ಕಲ್ಲಿನಿಂದ ಕಟ್ಟಿದ ನಾಲೆಗೂ ಪರಸ್ಪರ ಯಾವ ಸಂಬಂಧವೂ ಇಲ್ಲ ಎನ್ನುವ ಸಂಗತಿ ತಿಳಿದುಬರುತ್ತದೆ. ಅಲ್ಲದೆ ನಾಲೆಗೂ ಅರವಂಟಿಗೆ ಮಂಟಪಕ್ಕೂ ಈಗ ಅವಶೇಷವಾಗಿರುವ ಮತ್ತು ನೀರು ವಿತರಣ ವ್ಯವಸ್ಥೆಯ ನಿಯಂತ್ರಕ ಕಟ್ಟಡವಿದ್ದಿರಬಹುದಾದ ಅದರ ಹತ್ತಿರದ ಕಟ್ಟಡಕ್ಕೂ ಪರಸ್ಪರ ಸಂಬಂಧವಿರುವ ಸಾಧ್ಯತೆಗಳು ಗೋಚರಿಸುತ್ತದೆ. ಹಾಗಿದ್ದಲ್ಲಿ ಕಲ್ಲಿನ ಊಟದ ತಟ್ಟೆಗಳ ಸಾಲಿಗೆ ಭೋಜನ ಶಾಲೆ ಎಂದು ಹೆಸರು ಬಂದದ್ದಾದರೂ ಏಕೆ? ಹೇಗೆ?
ಕುತೂಹಲದ ಅಂಶವೆಂದರೆ, ಅಲ್ಲಿಂದ ಸುಮಾರು ನೂರು ಇನ್ನೂರು ಅಡಿ ಮುಂದೆ ರಸ್ತೆಯಲ್ಲಿ ಹೋದರೆ ಮಾವಿನ ಮರಗಳಿಂದ ಆವೃತ್ತವಾದ ಪ್ರವೇಶ ದ್ವಾರವೊಂದು ಕಣ್ಣಿಗೆ ಬೀಳುತ್ತದೆ. ಈ ಕಲ್ಲಿನ ಕಟ್ಟಡ ಸಾಮ್ರಾಜ್ಯವೊಂದರ ಯಾವುದೇ ಸಾಮಾನ್ಯ ಪ್ರವೇಶ ದ್ವಾರದಂತೆ ಇದ್ದಿರಬಹುದಾದರೂ ಇಂದಿಗೆ ದೊಡ್ಡದಾಗಿಯೆ ಕಾಣುತ್ತದೆ. ಅರಮನೆ ಆವರಣದ ಕೋಟೆ ಗೋಡೆಯ ಎದುರಿಗೆ ಇಂಥ ಪ್ರವೇಶ ದ್ವಾರದ ನಿರ್ಮಾಣ ಯಾವ ಉದ್ದೇಶಕ್ಕಾಗಿ ನಡೆದಿದೆ ಎಂಬುದು ಕೌತುಕವೂ ನಿಗೂಢವೂ ಆಗಿ ಕಾಣುತ್ತದೆ. ಇಲ್ಲಿಂದ ಎಲ್ಲಿಗೆ ದಾರಿಯಿತ್ತೊ ತಿಳಿಯದು. ಈಗಂತೂ ಈ ಜಾಗ ದೊಡ್ಡ ಮಾವಿನ ಮರಗಳಿಂದ ಆವೃತ್ತವಾಗಿದ್ದು, ಹೂವಿನ ದ್ವಾರವೆಂದು ಕರೆಯುತ್ತಾರೆ. ಆ ದ್ವಾರದ ಕಾವಲು ಮನೆಗಂಟಿಕೊಂಡಂತೆ ಇರುವ ದೇವರಗೂಡಿನಲ್ಲಿ ಅಂದಾಜು ಒಂದಡಿ ಅಗಲ ಮತ್ತು ಎರಡೂವರಡಿ ಎತ್ತರದ ಕಲ್ಲೊಂದಿದ್ದು, ಹರಿಷಿಣ ಕುಂಕುಮಗಳಿಂದ ಸಾರಿಸಿದಂತೆ ಅದರ ಮೇಲೆ ಕೇಸರಿ ಮತ್ತು ಹಳದಿ ಬಣ್ಣಗಳು ತುಂಬಿಹೋಗಿದೆ. ಅದರ ಆಕಾರ ಏನೂ ಸರಿಯಾಗಿ ಕಾಣದಂತಿದೆ. ಈ ಕುರಿತು ಸ್ಥಳಿಯರನ್ನು ಕೇಳಿದಲ್ಲಿ ಅವರಿದನ್ನು ಹೂವಿನವ್ವ ಎಂದೆನ್ನುತ್ತಾರೆ. ಈ ದೈವದ ಮೂಲ ಹೆಸರು ಏನೆಂದು ಕೇಳಿದರೆ ಗೊತ್ತಿಲ್ಲವೆನ್ನುತ್ತಾರೆ. ಗೆಳೆಯರಿಂದ ತಿಳಿದುಬಂದ ವಿಷಯವೆಂದರೆ, ಈ ಜಾಗ ಈಗಲೂ ಹೂಗಾರರಿಗೆ ಸೇರಿದುದಾಗಿದೆ.

ಈ ಎಲ್ಲ ಗೊಂದಲ, ಅಸ್ಪಷ್ಟತೆ ಮತ್ತು ನಿರ್ದಿಷ್ಟ ಸಂಬಂಧಗಳಿಲ್ಲದ ಮಾಹಿತಿಗಳ ನಡುವೆ ನಾನೊಮ್ಮೆ  ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದ ಸದಾನಂದ ಕನವಳ್ಳಿ ಅನುವಾದಿತ ರಾಬರ್ಟ್ ಸಿವೆಲ್ ನ ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ (2010 ಆವೃತ್ತಿ) ಓದುತ್ತಿದ್ದೆ. ಬಹುಶಃ ಕ್ರಿ.ಶ.1520-21ರಲ್ಲಿ ಬರೆದುದೆಂದು ಹೇಳಲಾದ ಡೊಮಿಂಗೊ ಪಯಸ್ ನ ಕಥನದಲ್ಲಿ ಕೆಲವು ವಿವರಗಳನ್ನು ಪುಟ.262ರಲ್ಲಿ ಓದಿ ಅಚ್ಚರಿಪಟ್ಟೆ. ಅದು ಹೀಗಿದೆ -

ರಾಜ ತನ್ನ ಅರಮನೆಯ ಹತ್ತಿರವೇ ತೆಂಗಿನ ತೋಪು ಮತ್ತು ಇತರ ಸಂಪದ್ಭರಿತ ಹಣ್ಣಿನ ಗಿಡಗಳನ್ನು ಹೊಂದಿದ್ದಾನೆ. ಮೂರರ ವಾಸಸ್ಥಾನದ ಕೆಳಗಡೆ ಒಂದು ಚಿಕ್ಕನದಿಯಿದೆ. ಅದರ ಈ ಬದಿಗೆ ಅನೇಕ ಹಣ್ಣಿನ ತೋಟಗಳು ಮತ್ತು ಅನೇಕ ಹಣ್ಣಿನ ಗಿಡಗಳುಳ್ಳ ತೋಟಗಳು ಇವೆ. ಅವುಗಳಲ್ಲಿ ಬಹುಮಟ್ಟಿಗೆ ಇರುವುದು ಮಾವು, ಅಡಿಕೆ, ಹಲಸು ಮತ್ತು ಅನೇಕ ನಿಂಬೆ, ಕಿತ್ತಲೆ ಗಿಡಗಳು. ಅವುಗಳೋ ಒಂದಕ್ಕೊಂದು ಎಷ್ಟು ಗುತ್ತಾಗಿ ಬೆಳೆದಿವೆಯೆಂದರೆ ಅದು ದಟ್ಟ ಅರಣ್ಯದಂತೆ ತೋರುತ್ತದೆ. ಮತ್ತು ಅಲ್ಲಿ ಬಿಳಿದ್ರಾಕ್ಷಿಗಳೂ ಉಂಟು. ನಗರದಲ್ಲಿರುವ ನೀರೆಲ್ಲ ಪ್ರಥಮ ಸುತ್ತಿನ ಗೋಡೆಯ ಹೊರಗೆ ಇರುವ ನಾನು ಹೇಳಿದ ಎರಡು ಕೆರೆಗಳಿಂದ ಬರುತ್ತದೆ.

ಇದರಿಂದ ಕೃಷ್ಣದೇವರಾಯನ ಕಾಲದಲ್ಲಿ ಅರಮನೆಯ ಅಗತ್ಯಗಳಿಗಾಗಿ ಅರಮನೆಗೆ ಹೊಂದಿಕೊಂಡಂತೆ ಮತ್ತು ಚಿಕ್ಕ ನದಿಯ ನಡುವೆ ದೊಡ್ಡದೊಂದು ಹಣ್ಣಿನ ತೋಟವೊಂದಿತ್ತು, ಚಿಕ್ಕ ನದಿಯ ಕೆಳಗೆ ಮೂರರ ವಾಸಸ್ಥಾನವಿತ್ತು ಎಂಬ ವಿಷಯಗಳು ತಿಳಿದುಬರುತ್ತದೆ. ಇದರ ಬಗ್ಗೆ ಕುತೂಹಲ ಹುಟ್ಟಿ ಈ ಪ್ರದೇಶ ಎಲ್ಲಿ ಬರಬಹುದೆಂದು ಹುಡುಕಲು ಪ್ರಯತ್ನಪಟ್ಟೆ. ಕಮಲಾಪುರ-ಹಂಪಿ ರಸ್ತೆಯಲ್ಲಿ ಮೊದಲಿಗೆ ಸಿಗುವ ಕೋಟೆ ಆಂಜನೇಯ ಗುಡಿ ಎಡಗಡೆಗೆ ಗದ್ದೆಗಳಿಗೆ ಹೋಗುವ ರಸ್ತೆಯಿದೆ. ಅದರ ಬೆನ್ನು ಹತ್ತಿ ಹೋದಾಗ ಸುಮಾರು ಒಂದು ಕಿ.ಮೀ ನಂತರ ರಸ್ತೆ ಬಲಗಡೆಗೆ ತಿರುಗುತ್ತದೆ. ಆನಂತರ ಸುಮಾರು ಒಂದೂವರೆ ಕಿ.ಮೀ. ಕ್ರಮಿಸಿದ ನಂತರ ಮತ್ತೆ ಬಲಗಡೆಗೆ ತಿರುವು ಪಡೆದು ಸ್ವಲ್ಪ ಮುಂದೆ ಹೋಗಿ, ಎಡಕ್ಕೆ ತಿರುಗಿ ನಡೆದು, ಬಲಕ್ಕೆ ಮುಂದುವರೆದರೆ ಹಳ್ಳವೊಂದು ಸಿಗುತ್ತದೆ. ಅದನ್ನು ದಾಟಿ ಕಾಲುಹಾದಿಯಲ್ಲಿ ಸುಮಾರು ದೂರ ಸಾಗಿದರೆ ಅದು ಅಕ್ಕತಂಗಿ ಗುಂಡುಕಲ್ಲಿನಿಂದ ಕಡ್ಡಿರಾಂಪುರಕ್ಕೆ ಹೋಗುವ ರಸ್ತೆಗೆ ತಲುಪುತ್ತದೆ. ನಾನು ಕ್ರಮಿಸಿದ ಹಾದಿಯನ್ನು ಗಮನಿಸಿದಾಗ ಆಂಜನೇಯ ಗುಡಿಯಿಂದ ಹಳ್ಳದವರೆಗೆ ಕೋಟೆ ಮೇಲಿನ ಹಾದಿಯಾಗಿದೆ. ಉದ್ದಕ್ಕೂ ಕೋಟೆಗೋಡೆಯ ಕಲ್ಲುಗಳನ್ನು ಕಾಣಬಹುದು. ಕಮಲಾಪುರ - ಹಂಪಿ ಟಾರ್ ರಸ್ತೆಯ ಎಡಗಡೆಯಲ್ಲಿ ಉದ್ದಕ್ಕೂ ಕೋಟೆಗೋಡೆಯೊಂದು ಸಾಗುವುದನ್ನು ಗಮನಿಸಬಹುದು. ಆಂಜನೇಯ ಗುಡಿಯಿಂದ ಗದ್ದೆ ರಸ್ತೆ, ಹಳ್ಳ, ಕಡ್ಡಿರಾಂಪುರ ರಸ್ತೆ ಮೂಲಕ ಅಕ್ಕತಂಗಿ ಗುಂಡುಕಲ್ಲು ಮತ್ತು ಅಲ್ಲಿಂದ ಆಂಜನೇಯ ಗುಡಿಗೆ ಸುಮಾರು 7-8 ಕಿ.ಮೀ. ವ್ಯಾಪ್ತಿಯ ಪ್ರದೇಶ ಡೊಮಿಂಗೊ ಪಯಸ್ ಸೂಚಿಸಿರುವ ಅರಮನೆ ಹಣ್ಣಿನ ತೋಟವೆಂದು ಕಾಣುತ್ತದೆ. ಹಳ್ಳವೇ ಆತ ಸೂಚಿಸುವ ಚಿಕ್ಕನದಿ ಇರಬಹುದು. ಯೂರೋಪಿಯನ್ ಸಮಾಜದಲ್ಲಿ ಕರಿಯ ಗುಲಾಮರಾಗಿದ್ದ ಮೂರರು ಎಂದರ್ಥದಲ್ಲಿ ಇಂಡಿಯಾದ ಸಾಮಾಜಿಕ ಶ್ರೇಣೀಕರಣದಲ್ಲಿ ಅಂದು ಊರ ಹೊರಗೆ ವಾಸಿಸುತ್ತಿದ್ದ ಪಂಚಮರು, ಅಂದರೆ ಇಂದಿನ ಅಸ್ಪೃಶ್ಯರನ್ನು ಪಯಸ್ ಸೂಚಿಸಿದ್ದಾನೆಂದು ತೋರುತ್ತದೆ.  

ಇಂದು ಹೂವಿನ ದ್ವಾರವೆಂದು ಕರೆಯುವ ಅರಮನೆಯ ಕೋಟೆ ಗೋಡೆಗೆ ಎದುರಿರುವ ಪ್ರವೇಶ ದ್ವಾರ ಬಹುಶಹ ಅಂದಿನ ಹಣ್ಣಿನ ತೋಟಕ್ಕೆ ಅರಮನೆಯ ಮಂದಿ ಹೋಗಿ ಬರುವ ಬಾಗಿಲಾಗಿರಬಹುದು. ಈ ದ್ವಾರ ಮತ್ತು ಅರವಂಟಿಗೆ ಹಿಂಭಾಗದಲ್ಲಿರುವ ಅರಮನೆಯಿಂದ ತೋಟದ ಕಡೆಗೆ ಹೊರ ಬರುವ ಸಣ್ಣ ಬಾಗಿಲು ಪರಸ್ಪರ ಸಂಬಂಧವಿರುವ ಮಾರ್ಗಗಳಾಗಿರಬಹುದು. ಈ ಎಲ್ಲ ಸಾಧ್ಯತೆಗಳನ್ನು ಒಪ್ಪಬಹುದಾದಲ್ಲಿ 'ಭೋಜನಶಾಲೆ' ಗೊಂದಲ ಮತ್ತು ಅಸ್ಪಷ್ಟತೆ ಕಡೆಗೆ ಹೊರಳಬಹುದು.

ಇಲಾಖೆಯ ಸಿಬ್ಬಂದಿ ಸಾಮಾನ್ಯವಾಗಿ ಭಾವಿಸುವಂತೆ ಭೋಜನಶಾಲೆ ಅರಮನೆ ಆರವಣದಲ್ಲಿ ಇದ್ದಿತೊ ಇಲ್ಲವೊ ಯಾವುದನ್ನೂ ಸಾಧಿಸಲು ಆಧಾರಗಳಿಲ್ಲ. ಆದರೆ ಗ್ರಾನೈಟ್ ಕಲ್ಲಿನ ನಾಲೆ, ಅರವಂಟಿಗೆ ಮತ್ತು ನೀರು ವ್ಯವಸ್ಥೆ ನಿಯಂತ್ರಕ ಕಟ್ಟಡ-ಇವೆಲ್ಲ ಕಮಲಾಪುರದಿಂದ ಹರಿಯುತ್ತಿದ್ದ ನೀರಿನ ನಾಲೆಗೆ ಸಂಬಂಧಿಸಿದ್ದಿರಬಹುದೆ ಹೊರತು ಗ್ರಾನೈಟ್ ಕಲ್ಲಿನ ನಾಲೆ ಮೇಲೆ ಜೋಡಿಸಿಟ್ಟಿರುವ ತಟ್ಟೆಗಳನ್ನು ಕೆತ್ತಿದ ಚಪ್ಪಡಿ ಕಲ್ಲುಗಳಿಗಲ್ಲ ಎಂಬುದು ಸ್ಪಷ್ಟ. ಹಾಗಿದ್ದರೆ ಏನಿದು ಈ ಭೋಜನಶಾಲೆ? 
ಇಲಾಖೆಯ ಸಿಬ್ಬಂದಿ ಸಾಮಾನ್ಯವಾಗಿ ಸೂಚಿಸುವಂತೆ, ಊಟದ ತಟ್ಟೆಯ ಕಲ್ಲುಗಳು ಹಂಪಿಯ ಆ ಪ್ರದೇಶದ ವಿವಿಧೆಡೆಗಳಲ್ಲಿ ಮತ್ತು ಆನೆಗೊಂದಿಯಲ್ಲಿ ಇರಬಹುದು. ಅವು ದೊರೆತ ಅಂಥ ಇನ್ನೊಂದು ಜಾಗ ಅರಮನೆಯ ಹಣ್ಣಿನ ತೋಟವೂ ಆಗಿದ್ದಿರಬಹುದು. ಡೊಮಿಂಗೊ ಪಯಸ್ ಹೇಳಿರುವ ಭಾರತೀಯ ಮೂರರು ತಮ್ಮ ಕೂಲಿ ಕೆಲಸಗಳಿಗಾಗಿ ಹೊರಹೋದ ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಸಮತಟ್ಟಾದ ಕಲ್ಲನ್ನು ತೊಳೆದು ಅದರ ಮೇಲೆ ಊಟ ಮಾಡುವುದನ್ನು ಇಂದಿಗೂ ಅಪರೂಪಕ್ಕಾದರೂ ಉಳಿಸಿಕೊಂಡಿರುವುದು ಸುಳ್ಳಲ್ಲ. ಬಾಳೆ ಎಲೆಗಳನ್ನು ಸಮಾಜದ ಮೇಲು ವರ್ಗಗಳು ಊಟಕ್ಕೆ ಬಳಸುತ್ತಿರುವುದು ಉನ್ನತ ಸಂಸ್ಕೃತಿಯ ಹೆಮ್ಮೆಯ ಭಾಗವಾಗಿರುವ ಹಾಗೆಯೆ ಶೋಷಿತ ಸಮುದಾಯಗಳು ತಾರತಮ್ಯ ನೀತಿಗೆ ಒಳಗಾಗಿ ಬಾಳೆ ಎಲೆಗೂ ಎರವಾಗಿ ಬರಿಯ ಕಲ್ಲಿನ ಮೇಲೆ ಊಟ ಮಾಡುವಂಥ ಹೀನಸ್ಥಿತಿ ತಲುಪಿದ್ದಕ್ಕೆ  ಭಾರತೀಯ ಸಾಮಾಜಿಕ ಶ್ರೇಣೀಕೃತ ವ್ಯವಸ್ಥೆ ಎಂದು ಸೂಚಿಸುವಲ್ಲಿ ಯಾವುದೇ ವಿಶೇಷತೆ ಇಲ್ಲ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಪಂಚಮರಾಗಿ ಊರ ಹೊರಗಿದ್ದ ಅಸ್ಪೃಶ್ಯರನ್ನು ಅರಮನೆ ವ್ಯವಸ್ಥೆ ತನ್ನ ಹಣ್ಣಿನ ತೋಟದಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಿದ್ದಿರಬೇಕು. ಅದನ್ನು ಪಯಸ್ ಚಿಕ್ಕ ನದಿಯ ಆಚೆಗೆ ವಾಸಿಸುತ್ತಿದ್ದ ಮೂರರು ಎಂದು ಹೇಳುವ ಮೂಲಕ ಸೂಚನೆ ನೀಡಿದ್ದಾನೆ. ಕಲ್ಲಿನ ಮೇಲೆ ಊಟ ಬಡಿಸುವ ಅಂದಿನ ಅರಮನೆ ವ್ಯವಸ್ಥೆ ಅವರಿಗೆ ಕಲ್ಲು ತಟ್ಟೆಗಳನ್ನು ಕೆತ್ತನೆ ಮಾಡಿಸಿದ್ದಿರಬೇಕು. ಶೋಷಣೆಯ ವ್ಯವಸ್ಥೆಯಲ್ಲೂ ಕಲೆಯ ಚಿತ್ತಾರ ಮೂಡಿಸಲು ಪ್ರಯತ್ನ ನಡೆದಿದ್ದಿರಬೇಕು. ಅದರ ಫಲವಾಗಿ ಊಟದ ತಟ್ಟೆಯ ಕಪ್ಪು ಕಲ್ಲಿನ ಚಪ್ಪಡಿಗಳು ನಮಗಿಂದು ದೊರಕುತ್ತಿರಬಹುದು.

ಹಂಪಿಯ ವಿವಿಧ ಕಡೆಗಳಲ್ಲಿದ್ದ ಇಂಥ ಊಟದ ಕಲ್ಲಿನ ಚಪ್ಪಡಿಗಳನ್ನು ಆಂಧ್ರ ಮೂಲದ ಸಂರಕ್ಷಣಾಧಿಕಾರಿಯೊಬ್ಬರು ಗ್ರಾನೈಟ್ ಕಲ್ಲಿನ ಕಟ್ಟಡದ ನಾಲೆಯ ಮೇಲೆ ಜೋಡಿಸಿಟ್ಟು ಸಂರಕ್ಷಿಸಿರಬಹುದು. ಅದರ ವಿಶೇಷತೆಯ ಕಡೆಗೆ ಜನರ ಗಮನ ಸೆಳೆಯಲು ಮತ್ತು ಈ ಮೂಲಕ ವಿಜಯನಗರದ ಕಲಾ ವೈಭವವನ್ನು ಮೆರೆಸಲು ನಾಲೆಯನ್ನು ಒಂದು ವೇದಿಕೆಯನ್ನಾಗಿ ರೂಪಿಸಿಕೊಂಡಿರಬಹುದು. ಅಲ್ಲದೆ ತಮ್ಮದೆ ಭಾಷಾ ಶೈಲಿಯಲ್ಲಿ ಆ ಸ್ಮಾರಕಗಳನ್ನು 'ಭೋಜನ ಶಾಲಾ' ಎಂದು ಕರೆದಿರಬಹುದು. ನೇರವಾಗಿಯೋ ಪರೋಕ್ಷವಾಗಿಯೋ ಇದು ಭಾರತೀಯ ಸಾಮಾಜಿಕ ಶ್ರೇಣಿ ವ್ಯವಸ್ಥೆಯ ನಕಾರಾತ್ಮಕ ಅಂಶಗಳನ್ನು ಸಕಾರಾತ್ಮಕವಾಗಿ ಬಿಂಬಿಸುವ ಕಾರ್ಯವಾಗಿದೆ. ಇದನ್ನು ಯಶಸ್ವಿಯಾಗಿ ನಿರ್ವಹಿಸಿದ ಪ್ರತೀಕವಾಗಿ 'ಭೋಜನ ಶಾಲೆ'ಯ ಅವಶೇಷ/ಸ್ಮಾರಕ ಇಂದಿಗೂ ಉಳಿದುಬಂದಿದೆ.
  













ಕಾಮೆಂಟ್‌ಗಳಿಲ್ಲ: