ಮಂಗಳವಾರ, ಜೂನ್ 7, 2011

ಭ್ರಷ್ಟಾಚಾರ: ರಾಜಕೀಯ, ಸಾಮಾಜಿಕ, ಧಾರ್ಮಿಕ ಹೋರಾಟಗಳ ಸುತ್ತ

ರ್ನಾಟಕ ರಾಜ್ಯದ ರಾಜಕೀಯ ವಲಯದಲ್ಲಿ ಕಳೆದ ಎಂಟು ಹತ್ತು ತಿಂಗಳುಗಳಿಂದ ಮುಂಚೂಣಿಗೆ ಬಂದಿರುವ ಸಂಗತಿಗಳು ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮುನ್ನಡೆಯುತ್ತಿರುವ ದಿಕ್ಕನ್ನು ಸೂಚಿಸುತ್ತಿದೆ. ಇದು ದೇಶದ ಯಾವುದೊ ಒಂದು ರಾಜ್ಯದ ರಾಜಕೀಯ ಸಂಗತಿಯಾಗಿರದೆ ಒಟ್ಟು ದೇಶದ ರಾಜಕೀಯ ವಲಯ ಪಡೆದುಕೊಂಡಿರುವ ಚಾಲಕ ಶಕ್ತಿಯ ಪ್ರತೀಕವಾಗಿದೆ. ಈ ಮಾತಿಗೆ ಪೂರಕವಾಗಿ ಕಾಮನ್ ವೆಲ್ತ್ ಕ್ರೀಡಾಕೂಟ ಹಗರಣ ಮತ್ತು ಕೇಂದ್ರ ಸರಕಾರದ ಸಚಿವರು 2ಜಿ ಸ್ಪೆಕ್ಟ್ರಮ್ ಹಗರಣದಲ್ಲಿ ಎಸಗಿರುವ ಅಕ್ರಮಗಳು ಹೊರಬಿದ್ದಿವೆ.  ಇದರೊಂದಿಗೆ ದೇಶವನ್ನು ಆಳಿದ ನಮ್ಮ ಹೆಮ್ಮೆಯ ನಾಯಕರು ವಿದೇಶಿ ಬ್ಯಾಂಕುಗಳಲ್ಲಿ ಕೂಡಿಟ್ಟಿರುವ ಕಪ್ಪುಹಣ ವಾಪಸ್ಸು ತರಿಸುವ ಕುರಿತು ಆರಂಭವಾಗಿರುವ ಚರ್ಚೆ ಎಲ್ಲವನ್ನು ಸ್ಪಷ್ಟ ಮಾಡಿದೆ.
*
ಭ್ರಷ್ಟಾಚಾರ ವಿರೋಧಿ ಉಪವಾಸ ಚಳವಳಿ ನಡೆಸಿ ಲೋಕ ಪ್ರಸಿದ್ಧರಾಗಿರುವ ಅಣ್ಣಾ ಹಜಾರೆ ಲೋಕಪಾಲ ಮಸೂದೆ ಜಾರಿಗಾಗಿ ಆಗ್ರಹಿಸಿದ್ದಾರೆ. ಅದಕ್ಕೂ ಮೊದಲು ಅವರು ಯಾರು ಏನು ಎಂದು ಯಾರಿಗೂ ತಿಳಿದಿರಲಿಲ್ಲ. ಅವರ ಚಳವಳಿ ಜನಪ್ರಿಯಗೊಳಿಸಲು ಕಾರ್ಪೋರೇಟ್ ಸಂಸ್ಥೆಗಳು 10-20 ಕೋಟಿ ವೆಚ್ಚ ಮಾಡಿದ್ದಾವೆ.  ಭಾರತದ 120 ಕೋಟಿ ಜನರಲ್ಲಿ ಪ್ರತಿದಿನ 10 ಕೋಟಿ ಜನ ತಿನ್ನುವ ಅನ್ನ ಗಳಿಸಲಾರದ ಸ್ಥಿತಿಯಲ್ಲಿದ್ದು ಉಪವಾಸ ಮಲುಗುತ್ತಿದ್ದಾರೆ. ಅಣ್ಣಾ ಹಜಾರೆಗೆ ಮತ್ತೊಬ್ಬರಿಗೆ ದಾನ ಮಾಡುವಷ್ಟು ಸಂಪತ್ತು ಇದ್ದರೂ ಆತ ಸಮಾಜೋ-ರಾಜಕೀಯ ಸಾಧನೆಗಾಗಿ ಅನ್ನ ನೀರು ಬಿಟ್ಟಿದ್ದಾರೆ. ಈ ವಿಷಯವನ್ನು ಜಗತ್ತಿನ ಗಮನಕ್ಕೆ ತರಲು ಹತ್ತಾರು ಕೋಟಿಗಳು ಖರ್ಚು ಮಾಡಲಾಗಿದೆ. ಇದರ ಹಿಂದೆ ಕಾರ್ಪೋರೇಟ್ ಸಂಸ್ಥೆಗಳ ಹಿತಾಸಕ್ತಿ ಅಡಗಿಲ್ಲವೆಂಬುದನ್ನು ಈ ವ್ಯವಹಾರಿಕ ಜಗತ್ತಿನಲ್ಲಿ ನಂಬುವುದು ಹೇಗೆ? ಈ ಉಪವಾಸ ಚಳವಳಿ ದೇಶದ ಹಿತಾಸಕ್ತಿ ಮುಂದೊಡ್ಡಿ ವೈಯಕ್ತಿಕ ಹಿತಾಸಕ್ತಿ ಸಾಧಿಸುವ ಹಾದಿಯಲ್ಲವೆಂದು ಖಡಾಖಂಡಿತವಾಗಿ ಹೇಳುವುದು ಹೇಗೆ? ಇದು ಕೂಡ ಭ್ರಷ್ಟಾಚಾರವಲ್ಲವೆ?
ಈಗ ಈ ಸರದಿಯಲ್ಲಿ ರಾಮದೇವ್ ಸೇರಿದ್ದಾರೆ. ತಮ್ಮ ಯೋಗ ಕಸರತ್ತಿನ ಮೂಲಕ ದೇಶದಾದ್ಯಂತ ಯೋಗ ಗುರುವೆಂದೆ ಹೆಸರು ಗಳಿಸಿದ್ದಾರೆ. ಅವರ ಉಪದೇಶಗಳಲ್ಲಿ ಸುಪ್ತ ರಾಜಕೀಯ ವಾಸನೆ ಅಡರಿದ್ದು ಧರ್ಮ ರಾಜಕಾರಣಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸನ್ಯಾಸಿಗೆ ಯಾವುದೆ ಬಗೆಯ ಸ್ವಹಿತಾಸಕ್ತಿ ಇಲ್ಲದಿದ್ದಲ್ಲಿ ತಮ್ಮ ಉಪವಾಸ ಚಳವಳಿಯ ಅವಧಿಯಲ್ಲಿ ಬಂಧನಕ್ಕೆ ಒಳಗಾಗುವ ಸಂದರ್ಭದಲ್ಲಿ  ಹೆಣ್ಣುಮಕ್ಕಳ ವೇಷ ಧರಿಸಿ ಹೆಣ್ಣಮಕ್ಕಳ ನಡುವೆ ಅವಿತಿಟ್ಟುಕೊಳ್ಳಬೇಕಾದ ಅಗತ್ಯವೇನಿತ್ತು?  ಜನಪ್ರಿಯತೆಗಾಗಿ ಹಪಹಪಿಸುವ ಜನ ಮಾಡಬಾರದ ಕೆಲಸಗಳಿಲ್ಲ, ಹಿಡಿಯದ ಅಡ್ಡದಾರಿಗಳಿಲ್ಲ. ರಾಮದೇವ್ ಅವರಿಗೆ ಉಪವಾಸ ಚಳವಳಿ ಅಂಥ ಒಂದು ಸುಲಭದ ದಾರಿಯಾಗಿದೆ. ಈ ಮೂಲಕ ಅವರು ಸಾಧಿಸಬೇಕಿರುವ  ಸಮಾಜೋ-ರಾಜಕೀಯವಾದ ಧಾರ್ಮಿಕ ಉದ್ದೇಶಗಳು ಮೈ ಪಡೆದುಕೊಳ್ಳಬೇಕಿದೆ.  ಕಾವಿ ಬಟ್ಟೆ ತೊಟ್ಟ ಸನ್ಯಾಸಿಯ ಮಹತ್ವಾಕಾಂಕ್ಷೆ ತುಂಬಿದ ಈ ನಡವಳಿಕೆ ನೈತಿಕ ಭ್ರಷ್ಟತೆಯನ್ನು ಸೂಚಿಸುವುದಿಲ್ಲವೆ? ಕಳೆಗುಂದಿದ ಅಥವಾ ಮೂಲೆ ಗುಂಪಾದ ಪಟ್ಟಭದ್ತ ಹಿತಾಸಕ್ತಿಗಳ ಪರವಾದ ಹೋರಾಟವಾಗಿ ಕಾಣುವುದಿಲ್ಲವೆ?
ಅಣ್ಣಾ ಹಜಾರೆ ಮತ್ತು ರಾಮದೇವ್ ಅವರ ಉಪವಾಸ ಚಳವಳಿ ಸತ್ಯಕ್ಕಾಗಿ ಆಗ್ರಹ ಪಡಿಸಿದ ಪ್ರಾಮಾಣಿಕ ಪ್ರತಿರೋಧವೆ? ನನಗೇನೂ ಹಾಗೆ ಅನ್ನಿಸುವುದಿಲ್ಲ. ಅಣ್ಣಾ ಹಜಾರೆ ಒಬ್ಬ ಮೊದ್ದು, ರಾಮದೇವ್ ಒಬ್ಬ ಮತ್ತೊಬ್ಬರನ್ನು ಮರಳು ಮಾಡುವ ಚಾಲಾಕಿ. ಇವರಿಬ್ಬರಲ್ಲೂ ಯಥಾರ್ಥ ವಾಸ್ತವ ಸತ್ಯದ ಸಾಧನೆಗೆ ಅಗತ್ಯವಾದ ನೈತಿಕ ನಿಷ್ಟ ಮುಗ್ಧತೆ ಇಲ್ಲ.  
ಹಾಗಾಗಿ ಒಬ್ಬರು ಮತ್ತೊಬ್ಬರ ಬಳಕೆಗೆ ಸುಲಭವಾಗಿ ತುತ್ತಾದರೆ ಮತ್ತೊಬ್ಬರು ತಮ್ಮ ಸಂಕುಚಿತ ದೃಷ್ಟಿಕೋನದಿಂದ ಬಹು ಸಮುದಾಯಗಳ ಸಾಮೂಹಿಕ ಹಿತಾಸಕ್ತಿ ಪರವಾಗಿ ಕಾರ್ಯನಿರ್ವಹಿಸುವಲ್ಲಿ ಸೋಲುತ್ತಾರೆ.
*
ಭ್ರಷ್ಟಾಚಾರವನ್ನು ಮುಂದಿಟ್ಟುಕೊಂಡು ಕರ್ನಾಟಕದಲ್ಲಿ ನಡೆದ ಎಲ್ಲ ರಾಜಕೀಯ ಪಕ್ಷಗಳ ಕೆಸರೆರಚಾಟ ಸ್ವಾತಂತ್ರ್ಯೋತ್ತರ  ರಾಜಕೀಯ ವ್ಯವಸ್ಥೆಯಲ್ಲಿ ಪಕ್ಷಗಳ ಹಿತಾಸಕ್ತಿಗಳ ಮುಂದೆ ರಾಜ್ಯದ ಹಿತಾಸಕ್ತಿ ಮೂಲೆಗುಂಪಾಗಿರುವುದನ್ನು ಮುನ್ನೆಲೆಗೆ ತಂದಿರಿಸಿದೆ. ಕೇಂದ್ರದಲ್ಲಿ ಅಧಿಕಾರ ನೇತೃತ್ವ ವಹಿಸಿರುವ ಕಾಂಗ್ರೆಸ್ ಸರಕಾರ ಕರ್ನಾಟಕದ ರಾಜಕೀಯ ಕುರಿತ ಸೂಕ್ಷ್ಮ ನಡೆ,  ತನ್ನ ಅಂಗ ಪಕ್ಷಗಳ ಭ್ರಷ್ಟ ಸಚಿವರ ವಿಷಯದಲ್ಲಿ ತಳೆದ ಸಹಾನುಭೂತಿ ನಿಲುವು ಮತ್ತು ಭ್ರಷ್ಟಾಚಾರ ವಿರೋಧಿ ಉಪವಾಸ ಚಳವಳಿಗಳನ್ನು ಎದುರಿಸುತ್ತಿರುವ ರೀತಿ - ಅದಕ್ಕೆ ದೇಶದ ಹಿತಾಸಕ್ತಿಗಿಂತ ತನ್ನ ಪಕ್ಷದ ಹಿತಾಸಕ್ತಿಯೇ ಪ್ರಧಾನವಾಗಿರುವುದನ್ನು ಪ್ರತಿಪಾದಿಸಿದೆ.
ಇದು ಕಾಂಗ್ರೆಸ್ ಪಕ್ಷದ ಪರಂಪರೆಯೆ ಅಗಿರುವುದರಿಂದ ಆ ಪಕ್ಷದಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ದುರಂತವೆಂದರೆ ಬಹು ಪಕ್ಷ ಮಾದರಿ ಪ್ರಜಾಪ್ರಭತ್ವ ಒಪ್ಪಿಕೊಂಡರೂ ಇತರ ಪಕ್ಷಗಳು ಅಧಿಕಾರ ರಾಜಕಾರಣದ ಹಾದಿಯಲ್ಲಿ ತಮ್ಮ  ಗುರುತು ಕಳೆದುಕೊಂಡು ಕಾಂಗ್ರಸ್ ಪಕ್ಷದ ತುಂಡುಗಳಂತೆ ಆಗಿರುವುದು.
ನಮ್ಮ ಜೀವನ ವಿಧಾನ ಮತ್ತು ಜೀವನ ಮೌಲ್ಯಗಳು ಇದಕ್ಕೆ ಕಾರಣವಾಗಿವೆ. ನಾವಿಂದು ನಮ್ಮ ಸಾಮಾಜಿಕ ಮತ್ತು ವೈಯಕ್ತಿಕ ಜೀವನದಲ್ಲಿ ವ್ಯಕ್ತಿಗತವಾದ ಹಿತಾಸಕ್ತಿಗಳಲ್ಲಿ ಸಮುದಾಯದ ಹಿತಾಸಕ್ತಿಯನ್ನು ಅರಸುತ್ತಿದ್ದೇವೆ. ಹಾಗಾಯೇ ನಮ್ಮ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಹಿತಾಸಕ್ತಿಯಲ್ಲಿ ದೇಶದ ಹಿತಾಸಕ್ತಿಯನ್ನು ಕಾಣುತ್ತಿವೆ. ಇದು ಬದಲಾಗಬೇಕು. ಎಲ್ಲಿಯವರೆಗೆ ನಮ್ಮ ಜೀವನ ವಿಧಾನ ಮತ್ತು ಮೌಲ್ಯಗಳಲ್ಲಿ ಸಮುದಾಯದ ಹಿತಾಸಕ್ತಿಯಲ್ಲಿ ವೈಯಕ್ತಿಕ ಹಿತಾಸಕ್ತಿ ಕಾಣುವ ನೋಟ ಬೆಳೆಯುವುದಿಲ್ಲೋ ಎಲ್ಲಿಯವರೆಗೆ ನಮ್ಮ ರಾಜಕೀಯ ಪಕ್ಷಗಳು ದೇಶದ ಹಿತಾಸಕ್ತಿಯಲ್ಲಿ ತಮ್ಮ ಪಕ್ಷ ರಾಜಕಾರಣದ ಹಿತಾಸಕ್ತಿಯನ್ನು ಅರಸಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ಭ್ರಷ್ಟತೆ ನಮ್ಮ ಜೀವನದ ಭಾಗವಾಗಿರುತ್ತದೆ, ನೈತಿಕತೆ ಗೌಣವಾಗಿರುತ್ತದೆ. ಈಗಿರುವಂತೆ ಭ್ರಷ್ಟಾಚಾರ ನಮ್ಮ ಜೀವನದ ತಾಯಿಬೇರಾಗಿದ್ದು ಎಲ್ಲರ ಕೈಯಿ ಮತ್ತೊಬ್ಬರ ಜೇಬಿನೊಳಗಿದೆ. ಇದಕ್ಕಾಗಿ ವಿಷಾದ ಪಡುವುದಾಗಲೀ ಚಳವಳಿ ನಡೆಸುವುದಾಗಲೀ ಹೊಳೆಯಲ್ಲಿ ಹುಣಿಸೆ ಕಿವುಚಿದಂತೆಯೆ ಸರಿ. ಲೋಕಾಯುಕ್ತ ಮತ್ತು ಲೋಕಪಾಲ ಸಂಸ್ಥೆಗಳೆಲ್ಲ ಆಡಳಿತ ನಡೆಸುವ ಪಕ್ಷಗಳ ರಾಜಕಾರಣದ ಭಾಗವಾಗಿ ಜನರ ಗಮನ ಬೇರೆಡೆ ಸೆಳೆಯುವ ಉಪಾಯವಾಗಿ ಇರುತ್ತವೆಯೆ ಹೊರತು ಅಷ್ಟರಿಂದಲೆ ಭ್ರಷ್ಟಾಚಾರ ತೊಲಗಿಸಲು ಖಂಡಿತ ಸಾಧ್ಯವಿಲ್ಲ.



 

ಕಾಮೆಂಟ್‌ಗಳಿಲ್ಲ: