ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆ, ಪ್ರಭಾವ ಮತ್ತು ಪರಿಣಾಮಗಳು ಭೂಮಿಯ ಇಡೀ ಪ್ರಕೃತಿ/ ಪರಿಸರ ಮತ್ತು ಮಾನವ ಸಮಾಜಕ್ಕೆ ಸಂಬಂಧಿಸಿವೆ. ಈ ಹಿನ್ನೆಲೆಯಲ್ಲಿ ವಿಜ್ಞಾನದ ಸಾಮಾನ್ಯ ವಿದ್ಯಾರ್ಥಿಯಲ್ಲದ ನನಗೂ ವೈಜ್ಞಾನಿಕ ಸಂಶೋಧನೆ ಮತ್ತು ಬೆಳವಣಿಗೆಯ ದಿಕ್ಕು ದಿಸೆಗಳನ್ನು ಕುರಿತು ಆಲೋಚಿಸುವ ಹಕ್ಕು, ಅಧಿಕಾರ, ಜವಾಬ್ದಾರಿ ಇದೆ ಎಂದು ನಂಬಿದ್ದೇನೆ. ಆರಂಭದ ಹೆಜ್ಜೆಯಲ್ಲೆ ವೈಜ್ಞಾನಿಕ ಮನೋಭಾವ ತನ್ನ ಪ್ರಯೋಗ ಸಾಧ್ಯ ವಿಧಾನದ ಮೂಲಕ ಹೊಸ ಸತ್ಯಗಳ ಸ್ಥಾಪನೆ ಮಾಡಿ ಯೂರೋಪಿಯನ್ ಮತಧರ್ಮ ಭೂಮಿ ಮತ್ತು ವಿಶ್ವ ವ್ಯವಸ್ಥೆಯ ಬಗ್ಗೆ ಹೊಂದಿದ್ದ ಮತ್ತು ರೂಢಿಸಿದ್ದ ನಂಬಿಕೆಯನ್ನು ಸಡಿಲಗೊಳಿಸಿ ತಲೆ ಎತ್ತಿ ನಿಂತಿತು. ಅದೀಗ ಅದೆಷ್ಟೋ ಬೆಳಕಿನ ವರ್ಷಗಳ ದೂರದಲ್ಲಿರುವ ಮತ್ತೊಂದು ಗೆಲಕ್ಸಿಯಲ್ಲಿರುವ ಇನ್ನೊಂದು ಸಜೀವ ಭೂಮಿಯನ್ನು ಪತ್ತೆ ಮಾಡಿರುವ ವೈಜ್ಞಾನಿಕ ಸಾಧನೆಯ ಸಂದರ್ಭದಲ್ಲಿದೆ. ಇಂಥ ಅತ್ಯುನ್ನತ ಸಾಧನೆಯ ಈ ವಿಜ್ಞಾನ ಯುಗದಲ್ಲಿ ನಾವು ಜೀವಿಸುತ್ತಿರುವ ಭೂಮಿಯ ಸಜೀವತೆಯ ಸ್ಥಿತಿಗತಿಯಲ್ಲುಂಟಾದ ಬದಲಾವಣೆಯ ಸ್ಥೂಲಾವಲೋಕನವನ್ನು ಪ್ರಕೃತಿ-ಮಾನವ ಸಂಬಂಧದಲ್ಲಿ ಮಾಡಬೇಕಾದ ಅಗತ್ಯತೆ ಉಂಟಾಗಿದೆ.
"ಪ್ರಕೃತಿಯಲ್ಲಿ ಅಡಗಿರುವ ರಹಸ್ಯಗಳನ್ನು ಬಯಲು ಮಾಡುತ್ತ ಅವುಗಳ ಸದುಪಯೋಗ ಮಾಡಿಕೊಂಡು ಬಂದಿರುವುದರಿಂದಲೇ ಶಿಲಾಯುಗದ ಪ್ರಾಣಿಯಂತಿದ್ದ ಮಾನವ ಸುಗುಣ ಸಂಪನ್ನನಾಗಿ ಸ್ವಾರಸ್ಯಮಯ ಜೀವನ ಸಾಗಿಸುವಲ್ಲಿ ಸಫಲನಾಗಿದ್ದಾನೆ. ಈ ರಹಸ್ಯಗಳನ್ನು ಪ್ರಾಯೋಗಿಕವಾಗಿ ಸಮರ್ಥಿಸಿ ಅವುಗಳನ್ನು ಮಾನವ ಕಲ್ಯಾಣಕ್ಕೆ ಉಪಯೋಗಿಸಿಕೊಳ್ಳಲು ಕಂಡುಹಿಡಿದ ಮಾರ್ಗೋಪಾಯಗಳನ್ನು ವೈಜ್ಞಾನಿಕ ಹೊಸ ಹೊಸ ತಂತ್ರಜ್ಞಾನಗಳೆಂದು ಗುರುತಿಸಿಕೊಂಡಿದ್ದೇವೆ." ಇದು ವಿಜ್ಞಾನದ ವಿದ್ಯಾರ್ಥಿ ತಳೆದಿರುವ ಅಚಲ ನಂಬಿಕೆಯಾಗಿದೆ. ಈ ಮಾತನ್ನು ಪರಿಶೀಲಿಸಿದರೆ, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಕೃತಿಯ ರಹಸ್ಯವನ್ನು ಮಾನವ ಕೇಂದ್ರಿತವನ್ನಾಗಿ ದುಡಿಸಿಕೊಂಡಿದೆ; ಪ್ರಕೃತಿಯ ಭಾಗವಾಗಿದ್ದ ಮಾನವನನ್ನು ಅದರ ಯಜಮಾನನನ್ನಾಗಿ ಮಾಡಿ ಅವನ ಹಿಡಿತಕ್ಕೆ ಒಳಪಡಿಸಿದೆ; ಇದರಿಂದ ಶ್ರಮ ಸಂಸ್ಕೃತಿಯ ಜೀವಿಯಾಗಿದ್ದ ಮಾನವನನ್ನು ಶ್ರಮರಹಿತ ಸಂಸ್ಕೃತಿಯ ಜೀವಿಯನ್ನಾಗಿ ಬದಲಾಯಿಸಿದೆ, ಅದನ್ನೆ ನಾಗರಿಕತೆ ಎಂದೂ ಮಾನವ ಚರಿತ್ರೆಯ ಸಕಾರಾತ್ಮಕ ಗುಣವೆಂದೂ ನಂಬಿಸಿರುವುದು ತಿಳಿದು ಬರುತ್ತದೆ, ಅಲ್ಲವೆ?
ಪ್ರಕೃತಿಯ ಅಗಾಧ ರಹಸ್ಯದ ಮೂಲವನ್ನು ಬಯಲು ಮಾಡುವ ಕಾರ್ಯದಲ್ಲಿ ತೊಡಗಿದ್ದೇನೆಂದು ನಂಬಿರುವುದೇ ಪ್ರಕೃತಿಯ ಭಾಗವಾಗಿರುವ ಮಾನವನ ಅಪಾರ ಬೌದ್ಧಿಕ ಅಹಂಕಾರದ ಪ್ರದರ್ಶನ ಮಾತ್ರವಾಗಿದೆ. ಇದು ಕುರುಡ ಆನೆಯ ಒಂದೊಂದೆ ಅಂಗವನ್ನು ಮುಟ್ಟಿ ಅದನ್ನೆ ಆನೆಯೆಂದು ಭ್ರಮಿಸುವ ಕತೆಯಂತಿದೆ. ರಾಜಕೀಯ ಪ್ರಾಣಿಯಾದ ಮಾನವ ತನ್ನ ಸ್ವಭಾವದಂತೆ ಪ್ರಕೃತಿಯಲ್ಲಿ ಅಡಗಿರುವ ಅಗಾಧ ಅರಿವಿನ ಶೋಧವನ್ನು ತನ್ನ ಸ್ವಲಾಭಕ್ಕಾಗಿ ಮಾಡುತ್ತಿದ್ದಾನೆ, ಆದರೂ ಅಸಾಧ್ಯವಾದ ಹೊಸ ಜ್ಞಾನಕ್ಷೇತ್ರದ ಸೃಷ್ಟಿಕರ್ತನಂತೆ ಬಿಂಬಿಸಿಕೊಳ್ಳುತ್ತಿದ್ದಾನೆ. ಹಾಗಾಗಿಯೇ ಅರಿವಿನ ಶೋಧ ಮಾನವನ ಬೌದ್ಧಿಕ ಜಗತ್ತಿನ ಇತಿಮಿತಿಯನ್ನೂ ಅದು ಇಡೀ ಪರಿಸರದ ಮೇಲೆ ಬೀರುವ ದುಷ್ಟ ಪ್ರಭಾವ ಮತ್ತು ಪರಿಣಾಮಗಳನ್ನೂ ತನ್ನ ಸೆರಗಲ್ಲೆ ಕಟ್ಟಿಕೊಂಡಿರುವುದು ನಮ್ಮ ಅನುಭವಕ್ಕೆ ಬರುತ್ತಿದೆ. ಮಾನವ ಕಲ್ಯಾಣಕ್ಕಾಗಿ ಇಡೀ ಪ್ರಕೃತಿಯನ್ನು ದುಡಿಸಿಕೊಳ್ಳುವ ಕಲ್ಪನೆಯೆ ಪರಿಸರದ ಅಪವ್ಯಾಖ್ಯಾನದಿಂದ ಹುಟ್ಟಿದುದಾಗಿದೆ. ಪರಿಸರವನ್ನು ಮಾನವ ಕೇಂದ್ರಿತವನ್ನಾಗಿ ನೋಡುವ ನೋಟದಲ್ಲೆ ಪ್ರಕೃತಿ ಮತ್ತು ಪರಿಸರದಲ್ಲಿ ಅಡಕವಾಗಿರುವ ಸಮತೋಲನ ತತ್ವ ವಿರೋಧಿ ನಿಲುವಿದೆ. ಇದು ಯುರೋಪಿನಲ್ಲಿ ಪುನರುತ್ಥಾನದೊಂದಿಗೆ ಮೊಳಕೆಯೊಡೆದ ಆಕ್ರಮಣಕಾರಿ ಪ್ರವೃತ್ತಿ ವೈಜ್ಞಾನಿಕ ಬೆಳವಣಿಗೆಯಲ್ಲೂ ನೆಲೆ ಕಂಡುಕೊಂಡ ಪರಿಣಾಮವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಮಾರ್ಗೋಪಾಯದ ಮೂಲಕ ಪ್ರಕೃತಿಯನ್ನು ಮಾನವನ ಅನುಕೂಲಕ್ಕೆ ತಕ್ಕಂತೆ ಮಣಿಸಿದ ವಿಜಯೋತ್ಸಾಹ ಇಂದು ಅನುಭೋಗಿಸುತ್ತಿರುವ ವೈಜ್ಞಾನಿಕ ಸಾಫಲ್ಯತೆಯ ತುತ್ತತುದಿಯಲ್ಲಿ ಮಲಿನತೆಯೂ ತೀವ್ರತರವಾಗಿ ಹರಡಿ ಇಡೀ ಪರಿಸರ ಜೀವ ವಿರೋಧಿ ಸ್ವರೂಪ ಪಡೆಯಲು ಕಾರಣವಾಗಿದೆ. ಇಷ್ಟೆಲ್ಲ ವೈಜ್ಞಾನಿಕ, ನವನಾಗರಿಕತೆಗಳ ಸಾಧನೆಯ ನಂತರವೂ ಮಾನವ ತನ್ನ ಇರುವಿಕೆಗಾಗಿ ಹೋರಾಟ ಮಾಡುವ ಶಿಲಾಯುಗದ ಸ್ಥಿತಿಯಲ್ಲೇ ಇದ್ದಾನೆ ಎಂಬುದು ಕಪೋಲಕಲ್ಪಿತ ಸ್ಥಿತಿಯಾಗಿ ಉಳಿದಿಲ್ಲ. ಮಾನವ ಪ್ರವೃತ್ತಿಯಾದ ರಾಜಕೀಯ ಪ್ರಜ್ಞೆ ಮತ್ತು ಬೌದ್ಧಿಕ ಅಹಂಕಾರ ಅವನ ಅವಿವೇಕತನದ ಮಟ್ಟವನ್ನು ಮಾತ್ರ ಗುರುತಿಸುವ ಸಾಧನವಾಗಿದೆ ಎಂಬುದನ್ನು ವೈಜ್ಞಾನಿಕ ಸಾಧನೆಯ ಅಡ್ಡ ಪರಿಣಾಮಗಳು ಸೂಚಿಸುತ್ತಿವೆ. ಈ ಮಾತನ್ನು ಸಮರ್ಥಿಸಲು ಸಾಕಷ್ಟು ನಿದರ್ಶನಗಳು ಇಡೀ ಜಗತ್ತಿನ ಕಣ್ಣ ಮುಂದಿವೆ. ಸಾಮಾನ್ಯರ ನೆನಪಿಗೂ ಬರಬಹುದಾದ ಉದಾಹರಣೆಯೆಂದರೆ, ಹಿರೋಶಿಮಾ-ನಾಗಸಾಕಿ ದುರಂತ, ಚೆರ್ನೋಬಿಲ್ ದುರಂತ, ಭೂಪಾಲ್ ದುರಂತ, ಮಾತ್ರವಲ್ಲದೆ ಭೂಮಿಯ ಮೇಲಿನ ಸಕಲ ಜೀವಗಳ ಮೂಲಧಾತುಗಳಾದ ಅನ್ನ, ನೀರು, ವಾಯು, ಆಕಾಶ ಕ್ರಮೇಣ ವಿಷವಾಗಿ ಬದಲಾಗುತ್ತಿರುವ, ಅಗಾಧ ಪ್ರಮಾಣದಲ್ಲಿ ಜರುಗುತ್ತಿರುವ ಪರಿಸರ ಮಾಲಿನ್ಯ.
ಕ್ರಮಬದ್ಧ ಮತ್ತು ವಸ್ತುನಿಷ್ಟ ಅಧ್ಯಯನ ವಿಧಾನದಿಂದ ಜ್ಞಾನ ಕ್ಷೇತ್ರಗಳು ಅಪಾರವಾಗಿ ವಿಕಾಸವಾಗಲು ಕಾರಣವಾಗಿರುವ ವೈಜ್ಞಾನಿಕ ಮನೋಭಾವ ತನ್ನ ತರ್ಕಶುದ್ಧತೆಯಿಂದ ಮತ್ತು ಹೊಸ ಆವಿಷ್ಕಾರದತ್ತ ನಿರಂತರವಾಗಿ ದಿಟ್ಟಿ ನೆಟ್ಟ ಪ್ರಯೋಗಶೀಲತೆಯಿಂದ ತನ್ನ ವ್ಯಾಪ್ತಿಯ ಮಿತಿಯನ್ನು ಗುರುತಿಸಿಕೊಳ್ಳುವಲ್ಲಿ ಸೋತಿದ್ದು ಇದಕ್ಕೆ ಕಾರಣವಿದ್ದಿರಬಹುದು ಎಂದು ನನ್ನ ಊಹೆ. ಇದನ್ನು ಹೀಗೂ ಹೇಳಬಹುದೇನೋ. ವಸ್ತುವಿನ ಭೌತಿಕ ಮೂಲಘಟಕ ಒಡೆಯಲು ಮಾಡಿದ ಪ್ರಯತ್ನ ಅಥವಾ ಮೂಲ ಘಟಕ ರಾಸಾಯನಿಕ ರೂಪವಾಗಿದ್ದಲ್ಲಿ ಅದನ್ನು ಕೃತಕವಾಗಿ ಸೃಷ್ಟಿಸುವ ಪ್ರಯತ್ನ ಅಥವಾ ಜೈವಿಕ ಕ್ರಿಯೆಯನ್ನು ಭೌತಿಕ ವಸ್ತುವಿನಂತೆ ಮತ್ತು ರಾಸಾಯನಿಕ ಕ್ರಿಯೆಯಂತೆ ಮರುಸೃಷ್ಟಿಸುವ ಪ್ರಯತ್ನಗಳು ಕಾರಣವಾಗಿರಬಹುದು.
ಮೊದಲ ಪ್ರಯತ್ನದಲ್ಲಿ ಅಣುಬಾಂಬು ನಿರ್ಮಾಣವಾದದ್ದೆ ಅಲ್ಲದೆ ಅದರ ಉಪಯೋಗ ಮಾನವ ಕಲ್ಯಾಣ ಎಂಬ ಆದರ್ಶ ಬೊಂಬೆಯನ್ನು ಸಮಾಧಾನ ಪಡಿಸಲು ತೋರಿಸಲಾಗುತ್ತದೆಯಾದರೂ ಮಾನವನ ವಿನಾಶಕ್ಕೆ ಹೆಚ್ಚು ಬಳಕೆಯಾಗಿದೆ. ಭೂ ಪ್ರಕೃತಿಯ ವಿನಾಶಕ್ಕೂ ಕಾರಣವಾಗಬಲ್ಲಷ್ಟು ಶಕ್ತವಾಗಿರುವ ಅಣುಶಕ್ತಿಯನ್ನು ಮಾನವ ತನ್ನ ಕುಲದ ಸ್ವನಾಶಕ್ಕೆ ಬಳಸದಿರಲಿ ಎಂದು ಸದಾ ಪ್ರಾರ್ಥಿಸಬೇಕಾದ ಸ್ಥಿತಿ ತಲುಪಿದ್ದೇವೆ. ಇದು ಒಂದು ಹಂತವಾದರೆ ಅಣುಶಕ್ತಿಯನ್ನು ಪ್ರಗತಿಯ ಉದ್ದೇಶಕ್ಕಾಗಿ ಬಳಕೆ ಮಾಡುವ ಸಂದರ್ಭದಲ್ಲಿ ಉಂಟಾದ ಅಚಾತುರ್ಯದ ಚಣಗಳಲ್ಲಿ ಸುತ್ತಲ ಪ್ರದೇಶದ ಜನಜೀವನ ನರಕಮಯವಾಗಿರುವುದು ಅದಕ್ಕಿಂತಲೂ ದಾರುಣವಾದುದಾಗಿದೆ.
ಈ ಹಂತದ ನಂತರದಲ್ಲಿ ಕೃತಕ ನೂಲು (ಸಿಂಥೆಟಿಕ್) ತಯಾರಿಕೆಯ ಮೂಲಕ ಇಡೀ ಜಗತ್ತು ಪ್ಲಾಸ್ಟಿಕ್ ಯುಗವಾಗಿ ಪರಿವರ್ತನೆ ಹೊಂದಿತು. ಮಣ್ಣಿನಲ್ಲಿ ಕರಗುವ ಸಾವಯವ ಗುಣ ಕಳೆದುಕೊಂಡಿರುವ ಸಿಂಥೆಟಿಕ್ ನಿಂದ ಮಾನವನ ಕಲ್ಯಾಣವನ್ನು ಕೇಂದ್ರೀಕರಿಸಿರುವಂತೆ ತೋರುವ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆ ಇಡೀ ಪರಿಸರಕ್ಕೆ ಸವಾಲಾಗಿ ಪರಿಣಮಿಸಿದೆ. ಬಿಸಿಲಿನ ಝಳದಿಂದ ಕಾಪಾಡಿ ನೆರಳು ನೀಡುವ ಛತ್ರಿಯಂತಿದ್ದು ಇಡೀ ಭೂಮಿಯನ್ನು ಸೂರ್ಯನ ಕ್ಷ ಕಿರಣಗಳಿಂದ ಸಂರಕ್ಷಣೆ ಒದಗಿಸಿರುವ ಓಜೋನ್ ವಲಯದಲ್ಲಿ ಪ್ಲಾಸಿಕ್ ಸುಡುವಿಕೆ ತೂತು ಬೀಳುವಂತೆ ಮಾಡಿದೆ. ಪ್ರಕೃತಿಯ ಕೂಸಾಗಿರುವ ಮಾನವನಿಗೀಗ ವಿಜ್ಞಾನದ ಮೂಲಕ ಪರಿಸರಕ್ಕೆದುರಾಗಿರುವ ಕುತ್ತು ಸಕಲ ಜೀವ ಸಂಕುಲಗಳಿಗೆ ಮುಖಾಮುಖಿಯಾಗಿರುವ ಅಪತ್ತಾಗಿ ಮನವರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ನ ಬಳಕೆ ತ್ಯಜಿಸಿ ಪ್ಲಾಸಿಕ್ ಯುಗದ ಪೂರ್ವಕ್ಕೆ ಮರಳಲು ತಹತಹಿಸಲಾಗುತ್ತಿದೆ. ಆದರೆ ಅದು ಅಷ್ಟು ಸುಲಭ ಸಾಧ್ಯವಾದ ಕಾರ್ಯವೆಂದೇನೂ ತೋರುವುದಿಲ್ಲ.
ಹಸಿರು ಕ್ರಾಂತಿಗೆ ಕಾರಣವಾದ ಕೃತಕ ರಾಸಾಯನಿಕ ಗೊಬ್ಬರಗಳ ತಯಾರಿಕೆ ಕೃಷಿಕ್ಷೇತ್ರದಲ್ಲಿ ದೊಡ್ಡ ಭ್ರಮೆಯನ್ನು ಸೃಷ್ಟಿಸಿದುದು ಅದರ ಅನುಸರಣೆಯಲ್ಲಿರುವ ರೈತರು ಆತ್ಮಹತ್ಯೆಗೆ ಮೊರೆ ಹೋಗುತ್ತಿರುವ ಸದ್ಯದ ಸ್ಥಿತಿಯಲ್ಲಿ ಅರ್ಥವಾಗುತ್ತಿದೆ. ಆ ನಂತರದ ಹಂತದಲ್ಲಿ ಬೆಳಕಿಗೆ ಬಂದ ಜೈವಿಕ ತಂತ್ರಜ್ಞಾನ, ಪ್ರಕೃತಿಯ ಸಂತಾನ ಪ್ರಕ್ರಿಯೆಯನ್ನು ಕೃತಕವಾಗಿ ಮರುಸೃಷ್ಟಿಸುವ ಜ್ಞಾನಶಾಖೆಯಾಗಿದೆ. ರಾಸಾಯನಿಕ ಗೊಬ್ಬರಗಳು ಭೂಮಿಯ ಫಲವಂತಿಕೆಯನ್ನು ಬಂಜರು ಭೂಮಿಯನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿವೆ, ಮತ್ತು ಮೂರನೆಯ ಜಗತ್ತಿನ ಆರ್ಥಿಕ ಬೆನ್ನೆಲುಬಾದ ಕೃಷಿಯನ್ನು ಬಹುರಾಷ್ಟ್ರೀಯ ಕಂಪನಿ ಮತ್ತದರ ಒಡೆಯ ದೇಶಗಳ ಹಿಡಿತಕ್ಕೆ ಸಿಗುವಂತೆ ಮಾಡುವಲ್ಲಿಯೂ ಯಶ ಪಡೆದಿವೆ.
ಜೈವಿಕ ತಂತ್ರಜ್ಞಾನದ ಮೂಲಕ ಇಡೀ ಸಸ್ಯ ಮತ್ತು ಪ್ರಾಣಿ ಸಂಕುಲಗಳೆಲ್ಲ ಸ್ವಾರ್ಥ ಮಾನವನ ದಾಳಗಳಾಗಿ ವಿನಾಶದ ಅಂಚಿಗೆ ತಳ್ಳಲಾಗುತ್ತದೆ. ವಿಶೇಷವೆಂದರೆ ಇದರಿಂದ ಮಾನವನೂ ಹೊರತಾಗದೆ ಹೋಗುವುದು ದೊಡ್ಡ ದುರಂತ. ಮಾನವ ಕೇಂದ್ರಿತವಾದ ವಿಜ್ಞಾನದ ಮಾನವ ಕಲ್ಯಾಣ ಕಲ್ಪನೆ ವೈರುಧ್ಯದ ತುಟ್ಟತುದಿ ತಲುಪಿದ್ದಕ್ಕೆ ಇದು ಉತ್ತಮ ನಿದರ್ಶನ ಎಂದು ಹೇಳಬಹುದು. ಇಷ್ಟಲ್ಲದೆ ಎಲ್ಲ ಕಾರ್ಖಾನೆಗಳೂ ಕೃತಕ ರಾಸಾಯನಿಕಗಳನ್ನೆ ಆಧರಿಸಿ ತಮ್ಮ ಚಟುವಟಿಕೆ ಮತ್ತು ಉತ್ಪನ್ನಗಳನ್ನು ಕೈಗೊಂಡಿವೆ. ಇದರಿಂದ ನದಿ ಸಾಗರಗಳು ಕೊಳಚೆ ಗುಂಡಿಗಳಾಗಿ ಬದಲಾಗುತ್ತಿವೆ. ಇವು ಈಗ ಉಂಟುಮಾಡುತ್ತಿರುವ ಮತ್ತು ಮುಂದೆ ಇನ್ನೂ ಹೆಚ್ಚು ಮಾಡಬಹುದಾದ ಪರಿಣಾಮಗಳು ಊಹೆಯನ್ನು ಮೀರಿದ್ದಾಗಿವೆ. ಕೃತಕ ರಾಸಾಯನಿಕಗಳ ಮೇಲಿನ ಅವಲಂಬನೆ ಮತ್ತು ಬಳಕೆ ಹೆಚ್ಚಿದಂತೆಲ್ಲ ಅದರ ಘೋರ ಪರಿಣಾಮಗಳು ಹೆಚ್ಚುತ್ತ ಸಾಗಿ ಭೂಲೋಕವೆ ನರಕ ಲೋಕವನ್ನು ಮೀರಿಸುವಂತಾಗುತ್ತದೆ.
ಮಾನವ ಕಲ್ಯಾಣಕ್ಕಾಗಿ ಪ್ರಕೃತಿ ಶಕ್ತಿಯನ್ನು ಬಯಲು ಮಾಡಲು ತೊಡಗಿದ ವಿಜ್ಞಾನ ಮತ್ತು ತಂತ್ರಜ್ಞಾನ ಎಡವಿದ್ದಾದರೂ ಎಲ್ಲಿ? ವೈಜ್ಞಾನಿಕ ಮನೋಭಾವದ ಬೌದ್ಧಿಕ ಅಸೀಮ ಸಾಹಸ ಮತ್ತು ತನ್ನ ಬಗ್ಗೆ ತಾನೇ ತಳೆದ ಸರ್ವಶಕ್ತತೆಯ ನಿಲುವು ಇದಕ್ಕೆ ಕಾರಣವೆ? ನನಗೊಂದು ಕತೆ ನೆನಪಿಗೆ ಬರುತ್ತಿದೆ. ಅದು ತೈತರೀಯ ಉಪನಿಷತ್ತೋ ಕಠೋಪನಿಷತ್ತೊ ಎಲ್ಲಿಯದೋ ಗೊತ್ತಿಲ್ಲ. ಆ ಕತೆಯ ನಾಯಕ ವಿದ್ಯೆ ಕಲಿಯುವ ಹುಡುಗ (ಹೆಸರು ನೆನಪಿನಲ್ಲಿಲ್ಲ). ಅವನು ಪಪ್ಪಾಯಿ ಮರ ನೋಡುತ್ತಾನೆ. ಆ ಮರದ ತುಂಬ ಹಣ್ಣು ಬಿಟ್ಟಿರುತ್ತದೆ. ಆ ಮರ ಹೇಗೆ ಹುಟ್ಟಿತು ಎಂಬ ಪ್ರಶ್ನೆಗೆ ಬೀಜದಿಂದ ಎಂದು ಉತ್ತರ ಸಿಗುತ್ತದೆ. ಅವನು ಪಪ್ಪಾಯಿ ಕುಯ್ದು ಅದರೊಳಗಿನ ಬೀಜ ನೋಡುತ್ತಾನೆ. ಬೀಜಗಳು ಕಪ್ಪಗೆ ಸಣ್ಣಗಿರುತ್ತವೆ. ಅಷ್ಟು ಸಣ್ಣ ಬೀಜದಿಂದ ಅಷ್ಟು ದೊಡ್ಡ ಗಿಡ ಹುಟ್ಟುತ್ತದೆಯೆ ಎಂದು ಅವನಿಗೆ ಅನುಮಾನವಾಗುತ್ತದೆ. ಇದು ನಿಜವೇ ಅಗಿದ್ದಲ್ಲಿ ಅದರೊಳಗೇನಿರಬಹುದು ಎಂದು ಬೀಜವನ್ನು ಕುಯ್ದು ಎರಡು ಹೋಳು ಮಾಡುತ್ತಾನೆ. ಆ ಬೀಜದೊಳಗೆ ಅವನಿಗೆ ಅಂಥ ವಿಶೇಷವಾದದ್ದು ಏನೂ ಕಾಣುವುದಿಲ್ಲ. ಕೊನೆಗೆ ಕತೆ ಶೂನ್ಯ ತತ್ವದೊಂದಿಗೆ ಮುಗಿತಾಯ ಕಾಣುತ್ತದೆ. ನಮಗಿಲ್ಲಿ ಕಾಣುವುದು ಪ್ರಕೃತಿಯ ರಹಸ್ಯವನ್ನು ಅರಿಯುವಲ್ಲಿ ನಮಗಿರುವ ದಾರಿಗಳು ಪರಿಮಿತವಾಗಿವೆ, ಈ ಸತ್ಯವನ್ನು ನಾವು ಒಪ್ಪಿಕೊಳ್ಳಬೇಕು ಎಂಬುದು. ಆಗ ಮಾತ್ರ ನಾವು ಪ್ರಕೃತಿಗೆ ಹಾನಿಯಾಗದಂತೆ ನಮ್ಮ ಅರಿವನ್ನು ವಿಸ್ತರಿಸಿಕೊಳ್ಳಲು ಸಾಧ್ಯ. ಪ್ರಕೃತಿಯ ಭಾಗವಾಗಿದ್ದೂ ಪ್ರಕೃತಿಯ ರಹಸ್ಯ ಶಕ್ತಿಯನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಮಣಿಸುವುದು ಅತಿರೇಕದ್ದೆಂದು ಸೂಚಿತವಾಗುತ್ತದೆ. ಅಂಥ ಪ್ರಯತ್ನದಿಂದ ತೋರಿಕೆಗೆ ಅನುಕೂಲವಾದರೂ ಮೂಲದಲ್ಲಿ ನಮ್ಮ ಇರುವಿಕೆಗೆ ದೊಡ್ಡ ಪೆಟ್ಟು ಬೀಳುತ್ತದೆ. ಇದಕ್ಕೆ ವೈಜ್ಞಾನಿಕ ಮನೋಭಾವವೆ ಪ್ರಕೃತಿ ಬಗ್ಗೆ ತಳೆದ ಪೂರ್ವ ನಿರ್ಲಕ್ಷಿತ ಧೋರಣೆ ಕಾರಣವಾಗಿರುವಂತೆ ತೋರುತ್ತದೆ. ಇದನ್ನು ವಿಜ್ಞಾನದ ಪರಿಸರ/ಪ್ರಕೃತಿ ವಿರೋಧಿ ನಿಲುವು ಎಂದು ಗುರುತಿಸಬಹುದು.
ಹಾಗಿದ್ದಲ್ಲಿ ವಿಜ್ಞಾನದ ಪರಿಸರ ಸ್ನೇಹಿ ನಿಲುವು ಅಥವಾ ಮನೋಭಾವ ಯಾವುದಿರಬಹುದು ಎಂಬ ಪ್ರಶ್ನೆ ಮುಂದೆ ಬರುತ್ತದೆ. ಪ್ರಕೃತಿ/ಪರಿಸರ ಸ್ನೇಹಿ ವಿಜ್ಞಾನಕ್ಕೆ ಒಂದು ಉದಾಹರಣೆ ನೀಡಿ ಈ ಬರೆಹ ಮುಗಿಸಬಹುದೆಂದುಕೊಳ್ಳುತ್ತೇನೆ. ಮುಕ್ಕಾಲು ಪಾಲು ನೀರಿರುವ ಮನುಷ್ಯನ ದೇಹ ಭೂಮಿಯ ಪ್ರತಿರೂಪವೆಂದು ನಾನು ತಿಳಿಯುತ್ತೇನೆ. ಭೂಮಿಯಲ್ಲಿರುವ ಎಲ್ಲ ಅಂಶಗಳು ಮನುಷ್ಯನ ದೇಹಕ್ಕೆ ಅಗತ್ಯವಿದೆ. ಯಾವುದೇ ಅಂಶವೊಂದರ ಕೊರತೆಯುಂಟಾದಲ್ಲಿ ಅನಾರೋಗ್ಯ ಉಂಟಾಗುತ್ತದೆ. ಮಾನವನ ರೋಗಗಳಿಗೆ ಕೃತಕ ರಾಸಾಯನಿಕ ಗುಳಿಗೆಗಳು ಸಮರ್ಪಕ ಔಷಧೋಪಚಾರವಾಗಿರಲಾರದು. ಆದ್ದರಿಂದಲೇ ಗುಳಿಗೆಗಳಿಂದ ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಸೂಕ್ತ ಔಷಧೋಪಚಾರ ಎನ್ನುವುದು ಗಿಡಮೂಲಿಕೆಗಳು (ಬೇರೆ, ಆಯುರ್ವೇದ ಬೇರೆ) ಮತ್ತಿತರ ಭೂಮಿಯ ಅಂಶಗಳಿಂದ ಮಾತ್ರ ಸಾಧ್ಯವಿದೆ. ಈ ಕುರಿತು ಅಧ್ಯಯನಗಳು ನಡೆದೇ ಇಲ್ಲ ಎಂದು ಹೇಳಬೇಕು. ಭಾರತದಲ್ಲಿ ಗಿಡಮೂಲಿಕೆ ಆಧರಿಸಿದ ಮನೆ ಮದ್ದು ಜನ ಸಾಮಾನ್ಯರ ಜೀವನದ ಭಾಗವಾಗಿ ಬಳಕೆಯಲ್ಲಿದೆ, ಆದರೂ ಅದೊಂದು ಆರೋಗ್ಯ ಶಾಸ್ತ್ರವಾಗಿ ಬೆಳವಣಿಗೆ ಹೊಂದಿಲ್ಲ. ಇತ್ತೀಚೆಗೆ ಕ್ಯಾನ್ಸರ್ ತಗುಲಿದ ಕೋಶಗಳನ್ನು ಕೊಲ್ಲಲು -ರೋಗ ಯಾವುದೇ ಹಂತದಲ್ಲಿರಲಿ- ಲಿಂಬೆಹಣ್ಣಿನ ಹುಳಿ ಕಿಮೊ ಥೆರಪಿಗಿಂತ ಹತ್ತು ಸಾವಿರ ಪಟ್ಟು ಹೆಚ್ಚು ಪರಿಣಾಮಕಾರಿ ಔಷಧವಾಗಿದೆ ಎಂದು ಇನ್ ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್, 819 ಎನ್ಎಲ್ಎಲ್ಸಿ, ಚಾರ್ಲ್ಸ್ ಸ್ಟ್ರೀಟ್, ಬಾಲ್ಟಿಮೋರ್, ಎಂಡಿ 1201 ವಿಳಾಸದ ಸಂಸ್ಥೆಯೊಂದು ಪ್ರಚಾರ ಮಾಡುತ್ತಿದೆ.
ಸಿಹಿ ರುಚಿ ನೀಡುವ ಮಾವು, ಕಬ್ಬು, ಹಲಸು ಅಲ್ಲದೆ ನಮಗೆ ತಿಳಿಯದ ಬಹಳಷ್ಟು ಗಿಡಮರಗಳ ಹಣ್ಣುಗಳಿವೆ. ಬೇವಿನ ಹಣ್ಣಿನ ಸವಿರುಚಿಯನ್ನು ನಾವಾರೂ ಸವಿದಿಲ್ಲ. ಪ್ರತಿಯೊಂದೂ ಹಣ್ಣು ಬೇರೆಯೆ, ಅದರ ರುಚಿಯೂ ಬೇರೆಯೇ ಆಗಿವೆ. ಅವುಗಳಲ್ಲಿನ ಭೂಮಿಯ ರಾಸಾಯನಿಕ ಸಾರಾಂಶಗಳು ಕೂಡ ಬೇರೆ ಬೇರೆಯಾಗಿದ್ದು ಅವೆಲ್ಲವೂ ಮನುಷ್ಯ ದೇಹಕ್ಕೆ ಅಗತ್ಯವಿವೆ. ಯಾವ ಅಂಶಗಳ ಕೊರತೆ ಯಾವ ರೋಗಗಳಿಗೆ ಕಾರಣವಾಗುತ್ತದೆ. ಅಂಥ ಯಾವ ಅಂಶಗಳು ಪ್ರಕೃತಿ/ಪರಿಸರದ ಯಾವ ಗಿಡ ಮೂಲಿಕೆ ಅಥವಾ ಇತರ ಸಸ್ಯ ಮತ್ತು ಪ್ರಾಣಿಗಳ ಅಂಶದಲ್ಲಿ ಅಡಗಿದೆ ಎಂಬುದು ಬಹುಶಹ ಇದುವರೆಗೂ ಅಧ್ಯಯನದ ವ್ಯಾಪ್ತಿಗೆ ಒಳಪಟ್ಟಿಲ್ಲ. ಮಾನವ ಮತ್ತು ಪ್ರಕೃತಿಗೆ ಪೂರಕವಾದ ಇಂಥ ಕೃತಕ ರಾಸಾಯನಿಕಗಳ ನಿರ್ಮಾಣವನ್ನು ಒಳಗೊಳ್ಳದ ಅಧ್ಯಯನಗಳು ಪರಿಸರ ಸ್ನೇಹಿಯಾಗಿರಬಲ್ಲುದಾಗಿವೆ. ಇದೊಂದು ಸಣ್ಣ ಉದಾಹರಣೆಯಾಗಿದ್ದು ಯಾವುದೇ ಜ್ಞಾನದ ಶೋಧ ಪ್ರಕೃತಿ/ಪರಿಸರಕ್ಕೆ ಹಾನಿಯುಂಟಾಗಬಾರದೆಂಬ ಎಚ್ಚರದಿಂದ ಕೈಗೊಂಡಲ್ಲಿ ಅಂಥ ಎಲ್ಲ ಅಧ್ಯಯನಗಳು ಪರಿಸರ ಸ್ನೇಹಿಯಾಗಿರಬಹುದಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ತನ್ನಿಂದ ಪ್ರಕೃತಿ/ಪರಿಸರಕ್ಕೆ ಹಾನಿಯಾಗದ ಆಶಯ, ಉದ್ದೇಶ ಮತ್ತು ವಿಧಾನಗಳನ್ನು ತುರ್ತಾಗಿ ಅಳಡಿಸಿಕೊಳ್ಳಬೇಕಾದುದು ಭೂಮಿ ಮೇಲಿನ ಇಡೀ ಜೀವ ಸಂಕುಲದ ಅವಶ್ಯಕತೆಯಾಗಿದೆ. ಇಂಥ ಧೋರಣೆಯ ಅಳವಡಿಕೆ ಮಾತ್ರ ಪ್ರಕೃತಿಯ ಭಾಗವಾದ ಮನುಷ್ಯಾದಿ ಸಕಲ ಜೀವ ಸಂಕುಲಗಳ ಕಲ್ಯಾಣದ ಹಾದಿಯಲ್ಲಿ ವಿಜ್ಞಾನವನ್ನು ಮುನ್ನಡೆಸಲು ಸಾಧ್ಯ.
1 ಕಾಮೆಂಟ್:
lekhana tumbaa chenaagide. nenne taane naanu mattu kelavu software engeneer yuvakaru, bengaloorannu, mara kadidu vistarisuttiruvudara bagge charche nadesuttiddaga ide ide vishaya bantu .. vignaana mattu abhivruddi anta.. naavu hintirugi hogalaaradastu munde bandiddeve ...tappu maadiddeve aadare eaaga yenu maaduvudu endu paritapisidaru..
ಕಾಮೆಂಟ್ ಪೋಸ್ಟ್ ಮಾಡಿ