ರಾಜ್ಯ ಸರಕಾರ ಪ್ರಾಥಮಿಕ ಹಂತದಿಂದ ಇಂಗ್ಲಿಶ್ ಮಾಧ್ಯಮ ಆರಂಭಿಸುವ ಬಗ್ಗೆ ಹೇಳಿಕೆ ನೀಡಿದೆ. ಇದರಿಂದ ಕರ್ನಾಟಕದಲ್ಲಿ ಮತ್ತೆ ಕನ್ನಡ ಅಥವಾ ಇಂಗ್ಲಿಶ್ ಕಲಿಕೆಯಲ್ಲಿ ಭಾಷಾ ಸ್ಥಾನಮಾನದ ಬಗ್ಗೆ ಚರ್ಚೆ ಆರಂಭವಾಗಿದೆ. ಇದುವರೆಗೂ ಸರಕಾರಿ ಶಾಲೆಯಲ್ಲಿ ಪ್ರಾದೇಶಿಕ ಭಾಷಾ ಮಾಧ್ಯಮ ಮತ್ತು ತ್ರಿಭಾಷಾ ನೀತಿಯನ್ನು ಅನುಸರಿಸಿಕೊಂಡು ಬರಲಾಗಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಮೂರನೆಯ ಭಾಷೆಯಾಗಿರುವ ಹಿಂದಿಯನ್ನು ಆಯಾ ರಾಜ್ಯದ ಜನರ ಇಷ್ಟಾನಿಷ್ಟಗಳನ್ನು ಕಡೆಗಣಿಸಿ ರಾಷ್ಟ್ರ ಭಾಷೆ ಎಂಬ ಹೆಸರಿನಲ್ಲಿ ಬಲವಂತವಾಗಿ ಕಲಿಸಲಾಗುತ್ತಿದೆ. ಇಂಗ್ಲಿಶ್ ಮಾಧ್ಯಮ ಶಾಲೆಗಳಲ್ಲಿ ಎರಡನೆಯ ಭಾಷೆಯಾಗಿದ್ದರೂ ಕನ್ನಡ/ಪ್ರಾದೇಶಿಕ ಭಾಷೆಯನ್ನು ಕಲಿಸುವಲ್ಲಿನ ಅವಜ್ಞೆ ಮತ್ತು ಇಂಗ್ಲಿಶ್ ಮೇಲಿನ ಅನಗತ್ಯ ಒತ್ತಿನಿಂದ ಮಕ್ಕಳಲ್ಲಿ ಕನ್ನಡ ಕಲಿಕೆ ಸಮರ್ಪಕವಾಗಿಲ್ಲ. ಸರಕಾರಿ / ಕನ್ನಡ ಮಾಧ್ಯಮ ಶಾಲೆಗಳಲ್ಲಿ ಜಾಗತಿಕ ಭಾಷೆಯಾದ ಇಂಗ್ಲಿಶ್ ಕಲಿಕೆ ತೀರಾ ಕೆಳಮಟ್ಟದಲ್ಲಿದ್ದು ಇಂದಿನ ಅಗತ್ಯವನ್ನು ಪೂರೈಸಲು ಆಗುತ್ತಿಲ್ಲ. ಮಕ್ಕಳ ಕೊರತೆಯಿಂದ ಸರಕಾರಿ ಕನ್ನಡ ಶಾಲೆಗಳು ಮುಚ್ಚುವ ಹೊಸ ಬೆಳವಣಿಗೆಯೂ ಆರಂಭವಾಗಿದೆ. ನ್ಯಾಯಾಲಯ ಕೂಡ ತಂದೆತಾಯಿ/ಪೋಷಕರು ತಮ್ಮ ಮಕ್ಕಳಿಗೆ ಇಂಗ್ಲಿಶ್ ಕಲಿಸುವ ಹಕ್ಕನ್ನು ಎತ್ತಿಹಿಡಿದಿದೆ. ಶಾಲಾ ಮಟ್ಟದ ಭಾಷಾ ಕಲಿಕೆಯಲ್ಲಿನ ಇಂಥ ಸಂಗತಿಗಳಿಂದ ಮತ್ತೆ ಮತ್ತೆ ಭಾಷಾ ನೀತಿ ಪರಿಶೀಲನೆಗೆ ಒಳಗಾಗುತ್ತಿದೆ. ಇದಕ್ಕೆ ಕಾರಣಗಳೇನು ಮತ್ತು ಅನುಸರಿಸಬೇಕಾದ ನೀತಿ ಯಾವುದಿರಬೇಕು?
ಬ್ರಿಟಿಷರು ಆರಂಭಿಸಿದ ಶಾಲೆಗಳ ಉದ್ದೇಶವೇ ಭಾರತೀಯರು ಭಾರತೀಯರಂತೆ ಆಲೋಚಿಸಬಾರದು ಎಂಬುದಾಗಿತ್ತು. ಹಾಗಾಗಿ ಇಂಗ್ಲಿಶ್ ಶಾಲೆಗಳು ಇಂಗ್ಲಿಶ್ ಭಾಷೆಯೊಂದಿಗೆ ಇಂಗ್ಲಿಶ್ ವ್ಯವಹಾರಿಕ ಬುದ್ಧಿ, ವಿಜ್ಞಾನ, ಸಂಸ್ಕೃತಿ ಹಾಗೂ ಜೀವನ ಕ್ರಮವನ್ನೂ ಕಲಿಸಲು ಉತ್ಸುಕವಾಗಿತ್ತು. ಈ ಧೋರಣೆ ಆರಂಭಿಕ ಇಂಗ್ಲಿಶ್ ಶಾಲೆಗಷ್ಟೆ ಸೀಮೀತವಾಗಿರದೆ ಇಂದಿನ ಇಂಗ್ಲಿಶ್ ಮಾಧ್ಯಮ ಶಾಲೆಗೂ ಅನ್ವಯವಾಗುತ್ತದೆ. ಆದರೆ ಈ ವಾಸ್ತವ ಇಂಗ್ಲಿಶ್ ನಿಂದ ಉಪಕೃತರಾದವರಿಗೆ ಇಷ್ಟವಾಗುವುದಿಲ್ಲ. ಮಿಶನರಿ ಸಂಸ್ಥೆಗಳ ಬಿಗಿ ಹಿಡಿತದಿಂದಾಚೆಗೆ ಇಂಗ್ಲಿಶ್ ಮಾಧ್ಯಮ ಶಾಲೆಗಳು ಇಂದು ಬೆಳೆದಿದ್ದರೂ ಮೂಲ ಧೋರಣೆಯಲ್ಲಿ ವ್ಯತ್ಯಾಸ ಇಲ್ಲದಿರುವುದು ಅಚ್ಚರಿಯೇ ಸರಿ. ಏಕಾಕೃತಿ ಮಾದರಿ ಸಂಸ್ಕೃತಿಯನ್ನು ಆದರ್ಶವಾಗಿರಿಸಿಕೊಂಡಿರುವ ಇವು ಭಾರತದ ದೇಶೀಯ ಬಹುಭಾಷೆಗಳು ಮತ್ತು ಬಹು ಸಂಸ್ಕೃತಿಯನ್ನು ಆಪೋಶನ ತೆಗೆದುಕೊಳ್ಳುವ ಹಾದಿಯಲ್ಲೆ ತನ್ನ ಅಸ್ತಿತ್ವವನ್ನು ಕಂಡುಕೊಂಡಿವೆ. ಆದರೂ ಜಾಗತಿಕ ಭಾಷೆಯಾಗಿ, ವ್ಯವಹಾರ ಭಾಷೆಯಾಗಿ, ಜ್ಞಾನ ಭಾಷೆಯಾಗಿ, ಶ್ರೀಮಂತ ಸಾಹಿತ್ಯ ಪಡೆದಿರುವ ಭಾಷೆಯಾಗಿ ತನ್ನದೇ ವಿಶಿಷ್ಟ ಸ್ಥಾನ ಹೊಂದಿರುವ ಇಂಗ್ಲಿಶ್ ನ ಅಗತ್ಯತೆ ಭಾರತೀಯರಿಗೆ ಖಂಡಿತ ಇದೆ. ಅದರ ಸ್ವರೂಪ ಯಾವ ಬಗೆಯದಾಗಿರಬೇಕು ಎಂಬುದರ ಬಗ್ಗೆ ನಮ್ಮಲ್ಲಿ ಖಚಿತತೆ ಇಲ್ಲ. ಇಂಗ್ಲಿಶ್ ಕಲಿಕೆಯ ಲಾಭವನ್ನು ಭಾರತೀಯ ಸಮಾಜದ ಮೇಲು ಜಾತಿಗಳು ಪಡೆದಿರುವುದು ನಿಜ. ಹಾಗೆಯೇ ಕೆಳ ಜಾತಿಗಳೂ ಇಂಗ್ಲಿಶ್ ಕಲಿಕೆಯ ಲಾಭವನ್ನು ಪಡೆಯಲು ಹಕ್ಕುಳ್ಳವರಾಗಿ ತಮ್ಮ ಬೇಡಿಕೆಯನ್ನಿಟ್ಟಿರುವುದು ಸಾಮಾಜಿಕ ನ್ಯಾಯಕ್ಕೆ ತಕ್ಕುದಾಗಿದೆ. ಈ ಬೆಳವಣಿಗೆ ಇಂಗ್ಲಿಶ್ ಕಲಿಕೆ ಭಾರತೀಯರಿಗೆ ಅನಿವಾರ್ಯವಾಗಿರುವುದರ ಸೂಚಕವಾಗಿದೆ. ಇಂಗ್ಲಿಶ್ ಕಲಿಕೆಯ ಲಾಭ ನಷ್ಟಗಳಾಚೆಗೆ ನಿಂತು ಆಧುನಿಕ ಯುಗದಲ್ಲಿ ಆ ಭಾಷೆಯ ಮೂಲಕ ನಮ್ಮನ್ನು ಗುರುತಿಸಿಕೊಳ್ಳುವ ಹಂತ ತಲುಪಿದ್ದೇವೆ. ಇಂದು ಇಂಗ್ಲಿಶ್ ನಮ್ಮ ಅಭಿವೃದ್ಧಿಯ ಭಾಗವಾಗಿದೆ. ಇದರಿಂದ ನಮ್ಮ ಮನೆ ಭಾಷೆ/ತಾಯಿ ಭಾಷೆ ಮತ್ತು ಬೀದಿ ಭಾಷೆಗಳನ್ನು ಬಿಟ್ಟುಕೊಡುವ ಸ್ಥಿತಿಯಲ್ಲಿದ್ದೇವೆಯೆ?
ಭಾರತೀಯರಲ್ಲಿ ಏಕ ಭಾಷಿಕರು ದ್ವಿಭಾಷಿಕರು ಮತ್ತು ಬಹುಭಾಷಿಕರು ಎಂಬ ಗುಂಪುಗಳನ್ನು ಮಾಡಿದ್ದಲ್ಲಿ ಏಕಭಾಷಿಕರಿಗಿಂತ ದ್ವಿಭಾಷಿಕರು ಮತ್ತು ಬಹುಭಾಷಿಕರು ಬಹುಸಂಖ್ಯಾತರಾಗಿ ಹೊರಹೊಮ್ಮುತ್ತಾರೆ. ಭಾರತ ಬಹು ಸಂಸ್ಕೃತಿ ಮತ್ತು ಭಾಷಿಕ ಸಮುದಾಯಗಳ ನಾಡು. ಅನಿವಾರ್ಯವಾಗಿ ಮನೆ ಭಾಷೆಯೊಂದಿಗೆ ಬೀದಿ ಭಾಷೆಯನ್ನು ನಾವು ಕಲಿತಿದ್ದೇವೆ. ಭಾರತದ ಯಾವುದೇ ರಾಜ್ಯದ ಜನ ದೇಶದ ಯಾವುದೇ ಮೂಲೆಯಲ್ಲಿ ನೆಲೆಸುವ ಮತ್ತು ವ್ಯಾಪಾರ ವ್ಯವಹಾರ ವೃತ್ತಿ ನಡೆಸುವ ಹಕ್ಕುಳ್ಳುವರಾಗಿದ್ದಾರೆ. ಆದ್ದರಿಂದ ದ್ವಿಭಾಷಿಕತೆ ರಾಜ್ಯಗಳ ಗಡಿ ನಾಡುಗಳಿಗೆ ಮಾತ್ರ ಸೀಮಿತವಾಗಿಲ್ಲ. ಕೆನರಾ ಬ್ಯಾಂಕು ಮತ್ತು ಉಡುಪಿ ಹೋಟೆಲುಗಳನ್ನು ನಾವು ದೇಶದ ಯಾವುದೇ ಮೂಲೆಯಲ್ಲೂ ಕಾಣಬಹುದು, ಕನ್ನಡ ಭಾಷಿಕರನ್ನೂ ಗುರುತಿಸಬಹುದು. ಇಂದು ದೇಶದ ಎಲ್ಲ ರಾಜ್ಯಗಳ ರಾಜಧಾನಿಗಳೂ ದ್ವಿಭಾಷಿಕ/ಬಹುಭಾಷಿಕ ನೆಲೆಗಳಾಗಿವೆ. ಈ ಮಾತು ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೂ ಅನ್ವಯಿಸುತ್ತದೆ. ಕರ್ನಾಟಕದಲ್ಲಿರುವ ಮಲಯಾಳಿಗಳು, ತಮಿಳಿಗರು, ತೆಲುಗರು, ಮರಾಟಿಗರು, ರಾಜಸ್ತಾನಿಗಳು, ಪಂಜಾಬಿ, ಹಿಂದಿ, ಉರ್ದು ಭಾಷಿಕರು, ಕನ್ನಡಿಗರೇ ಆದ ಕೊಡಗರು, ಬಂಟರು, ಕೊಂಕಣಿಗರು, ಕರ್ನಾಟಕದ ಮೂಲನಿವಾಸಿಗಳಾದ ವಿವಿಧ ಭಾಷಿಕ ಬುಡಕಟ್ಟು ಜನಾಂಗಗಳು ಮೊದಲಾದವರು ದ್ವಿಭಾಷಿಕ/ಬಹುಭಾಷಿಕ ಸಮುದಾಯಗಳಾಗಿವೆ. ಇದು ದೇಶದ ಪ್ರತಿಯೊಂದೂ ರಾಜ್ಯದಲ್ಲಿ ಕಂಡುಬರುವ ಸ್ಥಿತಿಯೇ ಆಗಿದೆ. ಇವರೆಲ್ಲ ಪ್ರಾದೇಶಿಕ ಭಾಷೆಯನ್ನು ಹಣ ಸಂಪಾದನೆಗೊ, ತಾನು ಜೀವಿಸುವ ಪ್ರದೇಶದ ಸಾರ್ವಜನಿಕ ಸಂಪರ್ಕಕ್ಕೊ ಕಲಿಯಲೇಬೇಕು ಕಲಿತಿರುತ್ತಾರೆ. ತಮ್ಮ ಮಕ್ಕಳನ್ನು ಪ್ರಾದೇಶಿಕ ಭಾಷೆಯ ರಾಜ್ಯಗಳ ನಿಯಮದಡಿ ಆಯಾ ಭಾಷೆಗಳನ್ನು ಕಲಿಸಲೇಬೇಕು. ಅದರೊಂದಿಗೆ ರಾಷ್ಟ್ರೀಯ ಭಾಷೆಯಾಗಿ ಹಿಂದಿಯನ್ನೂ ಅಂತಾರಾಷ್ಟ್ರೀಯ ಭಾಷೆಯಾಗಿ ಇಂಗ್ಲಿಶನ್ನೂ ಕಲಿಯಬೇಕು. ಈ ಸಮುದಾಯಗಳಿಗೆ ತಮ್ಮ ಮನೆ ಭಾಷೆಯನ್ನು ಕಲಿಯುವ ಅವಕಾಶ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಕಡೆಗಣಿಸಲಾಗಿದೆ. ಅನ್ಯ ಭಾಷಿಕ ರಾಜ್ಯಗಳಲ್ಲಿ ಮನೆ ಭಾಷೆಯನ್ನಾಗಿ ಉಳಿಸಿಕೊಂಡ ಜನ ಸಮುದಾಯಗಳು ಸ್ವಭಾಷಾ ಜನ ಸಂಪರ್ಕದಿಂದ, ಸಂಸ್ಕೃತಿಯಿಂದ ಮತ್ತು ಭಾಷೆಯಿಂದ ಪ್ರತ್ಯೇಕಿಸಲ್ಪಟ್ಟ ದ್ವೀಪವಾಗಿ ಉಳಿದಿವೆ. ಪ್ರತಿಯೊಬ್ಬರಿಗೂ ತಮ್ಮ ಸ್ವಭಾಷೆ/ತಾಯಿಭಾಷೆಯನ್ನು ಆಮೂಲಾಗ್ರವಾಗಿ ಕಲಿಯುವುದು ಪ್ರಕೃತಿ ಸಹಜ ಹಕ್ಕಾಗಿದೆ, ಅಲ್ಲವೆ?
ಹಿಂದಿ ಭಾಷಿಕರ ರಾಷ್ಟ್ರ ಭಾಷೆಯ ಹೆಮ್ಮೆಯನ್ನು ಗೌರವಿಸಲು ದೇಶದಾದ್ಯಂತ ಹರಡಿರುವ ವಿವಿಧ ಭಾಷಿಕ ಸಮುದಾಯಗಳು ಹಿಂದಿಯನ್ನು ಅನಗತ್ಯವಾಗಿ ಕಲಿಯುವ ಬದಲು ತಮ್ಮ ಸ್ವಭಾಷೆಯನ್ನು ಕಲಿಯುವುದು ಹೆಚ್ಚು ತರ್ಕಬದ್ಧವಲ್ಲವೆ?
ಆಗ ಪ್ರಾದೇಶಿಕ ಭಾಷೆಯನ್ನು ಮೊದಲ ಭಾಷೆಯಾಗಿಯೂ, ಸ್ವಭಾಷೆ/ಮನೆಭಾಷೆ/ತಾಯಿಭಾಷೆಯನ್ನು ಎರಡನೆಯ ಭಾಷೆಯಾಗಿಯೂ ಮತ್ತು ಅಂತಾರಾಷ್ಟ್ರೀಯ ಭಾಷೆಯಾದ ಇಂಗ್ಲಿಶನ್ನು ಮೂರನೆಯ ಭಾಷೆಯಾಗಿ ಕಲಿಯುವುದು ಹೆಚ್ಚು ಸೂಕ್ತ..
ಭಾರತ ಸರಕಾರ ಮಾನ್ಯ ಮಾಡಿರುವ ಎಲ್ಲ ಭಾಷೆಗಳೂ ರಾಷ್ಟ್ರ ಭಾಷೆಗಳೇ ಆಗಿವೆ.ಹಿಂದಿ ಭಾಷಿಕರು ಹಿಂದಿ ಭಾಷಿಕ ರಾಜ್ಯಗಳಲ್ಲಿ ಪ್ರಾದೇಶಿಕ ಮೊದಲ ಭಾಷೆಯಾಗಿಯೂ ಇತರ ಭಾಷಿಕ ರಾಜ್ಯಗಳಲ್ಲಿ ಎರಡನೆಯಭಾಷೆಯಾಗಿಯೂ ಕಲಿಯುವುದು ಅಪಮಾನಕರವೇನಲ್ಲ. ಇತರ ಭಾಷೆಗಳೊಂದಿಗೆ ಸಮಾನವಾಗಿ ಹಿಂದಿಯನ್ನು ಕಲಿಯಲು ಅವಕಾಶ ಮಾಡಿಕೊಡುವುದು ಯಾವ ರೀತಿಯಲ್ಲೂ ಹಿಂದಿಯ ಸ್ಥಾನವನ್ನು ಕಸಿದುಕೊಂಡಂತಲ್ಲ.
ಮೊದಲ ಭಾಷೆಯಾದ ಪ್ರಾದೇಶಿಕ ಭಾಷೆ ಆಯಾ ರಾಜ್ಯದ ಆಡಳಿತ ಭಾಷೆ ಮಾತ್ರವಾಗಿರದೆ ಆಯಾ ರಾಜ್ಯದ ಸಾಹಿತ್ಯ, ಸಂಸ್ಕೃತಿ, ವ್ಯವಹಾರ ಮಾಧ್ಯಮವೂ ಆಗಿರುತ್ತದೆ. ಈ ಎಲ್ಲವೂ ಆಯಾ ರಾಜ್ಯ ಭಾಷೆಯಲ್ಲಿ ನಡೆಯಬೇಕಿರುವುದರಿಂದ ಆ ರಾಜ್ಯದ ಎಲ್ಲ ಭಾಷಿಕ ಜನ ಅಲ್ಲಿನ ಪ್ರಾದೇಶಿಕ ಭಾಷೆಯನ್ನು ಆಮೂಲಾಗ್ರವಾಗಿ ಕಲಿಯಲೇಬೇಕು. ಪ್ರಾದೇಶಿಕ ಭಾಷೆಗೆ ಶಾಲಾ ಕಲಿಕೆಯಲ್ಲಿ ಅಗ್ರಪಟ್ಟ ದೊರಕಲೇಬೇಕು.ಎರಡನೆಯ ಭಾಷೆಯಾದ ಸ್ವಭಾಷೆ/ಮನೆ ಭಾಷೆ/ತಾಯಿ ಭಾಷೆ ಪ್ರಾದೇಶಿಕ ಭಾಷೆಯಷ್ಟೆ ಮುಖ್ಯ. ಈ ಭಾಷಿಕ ಸಮುದಾಯಗಳು ದೇಶದ ಮುಖ್ಯ ಭಾಷಿಕ ವಾಹಿನಿಯಾಗಿದ್ದರೂ ಅನ್ಯ ಕಾರಣಗಳಿಂದ ಬೇರೆ ಭಾಷೆಯ ರಾಜ್ಯಗಳಲ್ಲಿ ನೆಲೆಸಿದವರು.ಇವರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಅನ್ಯ ಭಾಷಿಕ ಪ್ರಧಾನ ಸಮುದಾಯದ ನಡುವೆಯೂ ಉಳಿಸಿ ಬೆಳೆಸಿಕೊಳ್ಳುವ ಅಗತ್ಯವಿದೆ. ಯಾವುದೇ ರಾಜ್ಯದಲ್ಲೂ ದೇಶದ ಇತರ ರಾಜ್ಯಗಳ ಜನ ಸಮುದಾಯ ಪರತಂತ್ರರಾಗಿರದೆ ತಮ್ಮ ಸೋದರ ಭಾಷೆಯೊಂದಿಗೆ ಸಮಾನವಾಗಿರತಕ್ಕ ಪರಿಸರವನ್ನು ಶಾಲಾ ಕಲಿಕೆಯಲ್ಲಿ ಕಲ್ಪಿಸುವುದು ದೇಶದ ಗಣತಂತ್ರ ಕಲ್ಪನೆಗೆ ತಕ್ಕುದಾದುದು. ಮನೆ ಭಾಷೆಯನ್ನು ಶಾಲಾ ಕಲಿಕೆಯಲ್ಲಿ ಎರಡನೆಯ ಭಾಷೆಯನ್ನಾಗಿ ಪಡೆದವರು ತಮ್ಮ ಸ್ವಭಾಷಾ ಸಾಹಿತ್ಯ ಸಂಸ್ಕೃತಿಯನ್ನು ಅರಿಯಲು ಸೂಕ್ತವಾಗಿರಬೇಕು.
ಇನ್ನು ಮೂರನೆಯ ಭಾಷೆಯಾಗಿ ಅಂತಾರಾಷ್ಟ್ರೀಯ ಭಾಷೆಯಾದ ಇಂಗ್ಲಿಶಿನ ಕಲಿಕೆ ಇರಬೇಕು. ಇದನ್ನು ಕಲಿಯುವ ಧ್ಯೇಯೋದ್ದೇಶಗಳು ಆ ಭಾಷೆಯಲ್ಲಿ ಸಮರ್ಪಕವಾಗಿ ವ್ಯವಹಾರ ನಡೆಸಲು ಮತ್ತು ಸಂಪರ್ಕ ಭಾಷೆಯಾಗಿ ಬಳಸಲು ತಕ್ಕ ಪರಿಣತಿ ನೀಡುವಂತಿರಬೇಕು ಈಗ ಎದ್ದಿರುವ ಇಂಗ್ಲಿಶ್ ಮಾಧ್ಯಮದ ಅಗತ್ಯದ ಹುಯಿಲು ಆ ಭಾಷೆ ಕಲಿಕೆಯ ವಂಚಿತ ಸ್ಥಿತಿ ತಂದುಕೊಡುವ ಪಾರಂಪರಿಕ ಬಲಹೀನ ಸ್ಥಿತಿಯಿಂದ ಹುಟ್ಟಿದುದು. ಮೂರನೆಯ ಭಾಷೆಯಾಗಿ ಇಂಗ್ಲಿಶನ್ನು ಕಲಿತರೂ ಅದು ನಮ್ಮ ಅಗತ್ಯಗಳೆಲ್ಲವನ್ನು ಪೂರೈಸುವಂತಿರಬೇಕು. ಇಂಗ್ಲಿಶ್ ಅನ್ನು ಜ್ಞಾನದ ಭಾಷೆಯಾಗಿ, ಸಾಹಿತ್ಯದ ಭಾಷೆಯಾಗಿ ಕಲಿಯುವರಿಗೆ ಉನ್ನತ ಶಿಕ್ಷಣದಲ್ಲಿ ಮುಕ್ತ ಅವಕಾಶ ಇರಬೇಕು. ಆದರೆ ಇಂಗ್ಲಿಶ್ ಮಾಧ್ಯಮದ ಪರವಾದ ಅಂತಾರಾಷ್ಟ್ರೀಯ ಮಟ್ಟದ ಕಾಣದ ಕೈಗಳ ಲಾಬಿಗೆ ಮಣಿದು ಪ್ರಾಥಮಿಕ ಶಿಕ್ಷಣದಲ್ಲಿ ಇಂಗ್ಲಿಶ್ ಮಾಧ್ಯಮವನ್ನು ಅಳವಡಿಸಿದರೆ ಅನರ್ಥವಾದಂತೆಯೆ ಸರಿ. ಇದರಿಂದ ದೇಶದ ಬಹು ಭಾಷಿಕ ಸಂಸ್ಕೃತಿಯ ಸ್ಥಾನದಲ್ಲಿ ಇಂಗ್ಲಿಶ್ ನ ಏಕಸಂಸ್ಕೃತಿಯನ್ನು ಮಾತ್ರ ನೆಲೆಗೊಳಿಸಲು ಸಹಾಯಕವಾಗುತ್ತದೆ. ಇಂಗ್ಲಿಶಿನಲ್ಲಿ ವ್ಯವಹಾರ ಮಾಡಲು ಮತ್ತು ಸಂಪರ್ಕ ಮಾಧ್ಯಮದಲ್ಲಿ ಸುಗಮತೆ ಸಾಧಿಸಲು ಕಲಿಸಲಾಗುವ ಮೂರನೆಯ ಭಾಷೆಯ ಗುಣಮಟ್ಟ ಪರಿಪೂರ್ಣವಾಗಿರಬೇಕು. ಈ ಹಿಂದೆ ಹೇಳಿದಂತೆ ಅದು ಭಾರತದ ಬಹು ಭಾಷಿಕ ಸಮುದಾಯಗಳ ಬಹುಮುಖಿ ಅಗತ್ಯಗಳನ್ನು ಪೂರೈಸಬೇಕು. ಆಗ ನಮ್ಮ ಅಗತ್ಯದ ಇಂಗ್ಲಿಶ್ ಭಾಷೆ ಮತ್ತು ಇಂಗ್ಲಿಶ್ ಮಾಧ್ಯಮದ ಅನಗತ್ಯತೆ ನಡುವಿನ ಅಂತರ ನಮಗೆ ಅರ್ಥವಾಗುತ್ತದೆ. ಜಾಗತಿಕ ಭಾಷೆಯಾಗಿರುವ ಇಂಗ್ಲಿಶ್ ನ ಶಕ್ತಿ ಸಾಮರ್ಥ್ಯ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಬಳಕೆಯ ವ್ಯಾಪ್ತಿ ಈಗಲೂ ಹೆಚ್ಚುತ್ತಿದೆ. ನಮ್ಮ ಆ ಅಗತ್ಯವನ್ನು ಪೂರೈಸದ ಇಂಗ್ಲಿಶ್ ನ ಅಸಮರ್ಪಕ ಕಲಿಕೆಯಿಂದ ಇಂಗ್ಲಿಶ್ ಮಾಧ್ಯಮದ ಬೇಡಿಕೆ ದಿನೇ ದಿನೇ ಹೆಚ್ಚುತ್ತದೆ. ಆಗ ಪ್ರಾಥಮಿಕ ಹಂತದ ಇಂಗ್ಲಿಶ್ ಮಾಧ್ಯಮದಿಂದ ಇಂಗ್ಲಿಶ್ ಸಂಸ್ಕೃತಿಯ ಪಾರಮ್ಯ ಸಾಧನೆಗೆ ನಾವೇ ರತ್ನಗಂಬಳಿಯನ್ನು ಹಾಸಿಕೊಟ್ಟಂತಾಗುತ್ತದೆ. ಇದರಿಂದ ಭಾರತೀಯರು ತಮ್ಮ ದಾಸ್ಯ ಮನೋಭಾವವನ್ನು ಸ್ವತಂತ್ರ ಮನೋಭಾವವಾಗಿ ಬೆಳೆಸಿಕೊಳ್ಳಲು ಮುಂದಿನ ಹಲವು ಶತಮಾನಗಳ ಕಾಲ ಕಾಯಬೇಕಾಗಿ ಬರಬಹುದು.